News Karnataka Kannada
Thursday, May 02 2024
ಮೈಸೂರು

ಕನ್ನಡಕ್ಕೆ ಕೋಡು ಮೂಡಿಸಿದವರು ಸಿ.ವಿ.ರಾಮನ್ : ಬನ್ನೂರು ರಾಜು

CV Raman was the one who created a chord for Kannada: Bannur Raju
Photo Credit : By Author

ಮೈಸೂರು: ಕನ್ನಡಮ್ಮನ ಮಡಿಲಿನಿಂದಲೇ ಸಾಧನೆಯ ಶಿಖರವೇರಿದ ಕನ್ನಡಜ್ಞಾನಿ ಜಗದ್ವಿಖ್ಯಾತ ವಿಜ್ಞಾನಿ ಭಾರತರತ್ನ ಸರ್ ಸಿ.ವಿ.ರಾಮನ್ ಅವರ ವಿಜ್ಞಾನದ ಬದುಕು ಜಗತ್ತಿಗೆ ಅದರಲ್ಲೂ ವಿಶೇಷವಾಗಿ ಯುವ ವಿಜ್ಞಾನಿಗಳಿಗೆ ಮಾದರಿಯಾಗುವಂತಾದ್ದೆಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.

ನಗರದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯು ಹೆಚ್.ಡಿ. ಕೋಟೆ ರಸ್ತೆಯ ರೈಲ್ವೆ ಕಾರ್ಯಾಗಾರದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಏರ್ಪಡಿಸಿದ್ದ ಸರ್. ಸಿ.ವಿ.ರಾಮನ್ ಗೌರವಾರ್ಥದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು, ಭಾರತ ದೇಶದಲ್ಲಷ್ಟೇ ಅಲ್ಲದೆ ಇಡೀ ಏಷ್ಯಾದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಭೌತ ವಿಜ್ಞಾನದಲ್ಲಿ ಪ್ರಪಂಚದ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಪಡೆದು ಭಾರತದ ಕೀರ್ತಿಯನ್ನು ಜಗತ್ತಿನ ಉದ್ದಗಲಕ್ಕೂ ಬೆಳಗಿ ಜಾಗತಿಕವಾಗಿ ನಮ್ಮ ಕರ್ನಾಟಕಕ್ಕೂ ಒಂದು ಕೋಡು ಮೂಡಿಸಿದ ವಿಜ್ಞಾನಲೋಕದ ಮಹಾಬೆಳಕು ಸರ್ ಸಿ.ವಿ.ರಾಮನ್ ಎಂದರು.

ಮೂಲತಃ ರಾಮನ್ ಅವರು ತಮಿಳು ನಾಡಿನವರಾದರೂ ಕೂಡ ವಿಜ್ಞಾನ ಲೋಕದ ಅವರ ಎಲ್ಲಾ ರೀತಿಯ ಅಧ್ಯಯನ, ಅಧ್ಯಾಪನ, ಸಂಶೋಧನೆ ಗಳಿಗೂ ನಮ್ಮ ಕನ್ನಡನಾಡು ಕರ್ಮಭೂಮಿಯಾಗಿತ್ತು. ವಿಶೇಷವಾಗಿ ಅವರಿಗೆ ನೊಬೆಲ್ ಪ್ರಶಸ್ತಿಯನ್ನು ತಂದುಕೊಟ್ಟ ಬೆಳಕಿನ ಆವಿಷ್ಕಾರವಾದ ರಾಮನ್ ಎಫೆಕ್ಟ್ ಅಥವಾ ರಾಮನ್ ಪರಿಣಾಮದ ಸಂಶೋಧನೆಗೆ ಮೂಲವೇ ಕನ್ನಡ ನಾಡಿನ ಬೆಂಗಳೂರಾಗಿದ್ದು,ಇದರ ಸಂಪೂರ್ಣ ಕ್ರೆಡಿಟ್ ನಮ್ಮ ಕನ್ನಡ ನಾಡಿಗೆ ಸಲ್ಲುತ್ತದೆ.1928 ಫೆಬ್ರವರಿ 28 ರಂದು ಬೆಂಗಳೂರಿನ ಸುಪ್ರಸಿದ್ಧ ಸೆಂಟ್ರಲ್ ಕಾಲೇಜಿನ ಭೌತಶಾಸ್ತ್ರ ಸಂಘದವರು ಭೌತವಿಜ್ಞಾನಿ ಸಿ.ವಿ.ರಾಮನ್ ಅವರನ್ನು ವಿಜ್ಞಾನದ ಬಗ್ಗೆ ಉಪನ್ಯಾಸ ನೀಡಲು ಕಾಲೇಜಿಗೆ ಕರೆಸಿದ್ದರು. ಆ ಸಂದರ್ಭದಲ್ಲಿ ರಾಮನ್ ಅವರು ಸೆಂಟ್ರಲ್ ಕಾಲೇಜನ ಭವ್ಯ ಸಭಾಂಗಣದ ಲ್ಲಿ ಬೆಳಕನ್ನು ಕುರಿತು ತಮ್ಮದೇ ಆದ ಆವಿಷ್ಕಾರದ ಹೊಸ ಸಿದ್ಧಾಂತವನ್ನು ಪ್ರತಿಪಾದಿಸಿದ್ದರು. ಇದೇ ವಿಷಯ ಮುಂದೆ ಬೆಳಕಿನ ಬಗೆಗಿನ ಮಹತ್ವಪೂರ್ಣ ಸಂಶೋಧನೆಯಾಗಿ ರಾಮನ್ ಪರಿಣಾಮ ಎಂದು ಹೆಸರಾಗಿ1930ರಲ್ಲಿ ನೊಬೆಲ್ ಪುರಸ್ಕಾರಕ್ಕೆ ಅವರು ಭಾಜನರಾದದ್ದು ಈಗ ವಿಶ್ವ ವಿಜ್ಞಾನ ಲೋಕದ ಇತಿಹಾಸವೆಂದ ಅವರು ಈ ಕಾರಣಕ್ಕೆ ಫೆಬ್ರವರಿ 28 ರ ದಿನಕ್ಕೆ ವಿಶೇಷ ಮಹತ್ವ ನೀಡಿ ಪ್ರತಿವರ್ಷ ದೇಶ ಹೆಮ್ಮೆಯಿಂದ ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸುತ್ತದೆ ಎಂದು ತಿಳಿಸಿದರು.

ಸರ್ ಸಿ.ವಿ.ರಾಮನ್ ಅವರ ಭಾವಚಿತ್ರಕ್ಕೆ ವೇದಿಕೆಯಲ್ಲಿದ್ದ ಗಣ್ಯರು ಪುಷ್ಪಾರ್ಚನೆ ಮಾಡುವುದರ ಮೂಲಕ ಆರಂಭವಾದ ಈ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಸ್ತುತ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿರುವ ಶಾಲೆಯ ವಿದ್ಯಾರ್ಥಿಗಳಿಗೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಅಧ್ಯಕ್ಷ ಎಚ್.ವಿ.ಮುರಳೀಧರ್ ಅವರು ಪರೀಕ್ಷಾ ಪರಿಕರಗಳನ್ನು ವಿತರಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಖ್ಯಾತ ಸಂಖ್ಯಾ ಶಾಸ್ತ್ರಜ್ಞ ಎಸ್.ಜಿ.ಸೀತಾರಾಂ ಅವರು ಮಾತನಾಡಿ, ಪ್ರತಿಯೊಂದಕ್ಕೂ ವಿಜ್ಞಾನ ಬೇಕು. ವಿಜ್ಞಾನವಿಲ್ಲದೆ ಜೀವನವಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ವಿದ್ಯಾರ್ಥಿ ದಿಶೆ ಯಲ್ಲೇ ವಿಜ್ಞಾನದತ್ತ ಆಸಕ್ತಿ ಹೊಂದಬೇಕು. ಕುತೂಹಲಿಗಳಾಗಿ ಪ್ರಶ್ನೆ ಮಾಡುವುದರ ಮೂಲಕ ವಿಜ್ಞಾನವನ್ನು ಅರಿತುಕೊಳ್ಳಬೇಕು. ವಿಶೇಷವಾಗಿ ಹೆಣ್ಣು ಮಕ್ಕಳು ವಿಜ್ಞಾನವನ್ನು ಹೆಚ್ಚು ಹೆಚ್ಚು ಅಧ್ಯಯನ ಮಾಡಿ ಮೇರಿ ಕ್ಯೂರಿಯಂಥ ವಿಜ್ಞಾನಿಗಳ ಬದುಕನ್ನು ಮಾದರಿ ಮಾಡಿಕೊಳ್ಳಬೇಕೆಂದು ಹೇಳಿದ ಅವರು, ಸಿ.ವಿ. ರಾಮನ್ ರ ವಿಜ್ಞಾನ ಸಾಧನೆಯ ಹಿನ್ನೆಲೆಯಲ್ಲಿ ವಿಜ್ಞಾನ ಜಗತ್ತನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟು ನೀವೂ ಅವರಂತಾಗಬೇಕೆಂದು ಶುಭಹಾರೈಸಿದರು.

ಪ್ರೌಢಶಾಲಾ ಮುಖ್ಯ ಶಿಕ್ಷಕಿ ಎಲ್.ಲತಾ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಹಿತವಚನ ಹೇಳಿದರು. ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷರೂ ಆದ ವಿಶ್ರಾಂತ ಶಿಕ್ಷಕ ಎ.ಸಂಗಪ್ಪ, ಕಾವೇರಿ ಬಳಗದ ಅಧ್ಯಕ್ಷೆ ಎನ್. ಕೆ.ಕಾವೇರಿಯಮ್ಮ, ಶಿಕ್ಷಕರಾದ ಎನ್.ನಾಗರಾಜು, ಜಿ.ರವಿ, ಪಿ. ನಾಗಲಿಂಗಪ್ಪ, ಕೆ.ಎಂ.ಮಹೇಶ್, ಕುಮಾರ್,ವಿನುತಾ ಬಗರೆ, ವಿ.ಲೀಲಾವತಿ,ನೂರ್ ಸಲ್ಮಾ ಭಾನು, ಮುಂತಾದವರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು