News Karnataka Kannada
Monday, April 15 2024
Cricket
ಮೈಸೂರು

ಕಾಂಗ್ರೆಸ್ ವೈಫಲ್ಯ ಮನೆ ಮನೆಗೆ ತಲುಪಿಸಲು ಕರೆ

ದೇಶದಲ್ಲಿ ಬಿಜೆಪಿ ಪರ ವಾತಾವರಣವಿದ್ದು, ಲೋಕಸಭೆ ಚುನಾವಣೆಯಲ್ಲಿ ಗೆಲುವು ನಿಶ್ಚಿತ. ಆದರೂ ರಾಜ್ಯದಲ್ಲಿ ಸವಾಲುಗಳಿದ್ದು,  ಕಾರ್ಯಕರ್ತರು ಮೈ ಮರೆಯದೆ ಗೆಲುವಿಗೆ ಶ್ರಮಿಸಿ ಎಂದು ಬಿಜೆಪಿ ರಾಜ್ಯ ಘಟಕದ  ಸಂಘಟನಾ  ಪ್ರಧಾನ  ಕಾರ್ಯದರ್ಶಿ  ಜಿ.ವಿ.ರಾಜೇಶ್ ಕರೆ ನೀಡಿದ್ದಾರೆ.
Photo Credit : By Author

ಮೈಸೂರು: ದೇಶದಲ್ಲಿ ಬಿಜೆಪಿ ಪರ ವಾತಾವರಣವಿದ್ದು, ಲೋಕಸಭೆ ಚುನಾವಣೆಯಲ್ಲಿ ಗೆಲುವು ನಿಶ್ಚಿತ. ಆದರೂ ರಾಜ್ಯದಲ್ಲಿ ಸವಾಲುಗಳಿದ್ದು, ಕಾರ್ಯಕರ್ತರು ಮೈ ಮರೆಯದೆ ಗೆಲುವಿಗೆ ಶ್ರಮಿಸಿ ಎಂದು ಬಿಜೆಪಿ ರಾಜ್ಯ ಘಟಕದ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ.ರಾಜೇಶ್ ಕರೆ ನೀಡಿದ್ದಾರೆ.

ಬಿಜೆಪಿ ಪಕ್ಷದ ಮಹಾನಗರ ಜಿಲ್ಲಾ ಆಯೋಜಿಸಿದ್ದ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ  ಮೋದಿ ವರ್ಚಸ್ಸು, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಸೇರಿದಂತೆ ಹಲವು ಕಾರಣಗಳಿಂದ ಪಕ್ಷದ ಪರವಾದ ವಾತಾವರಣವಿದೆ. ಆದರೆ, ಲೋಕಸಭಾ ಚುನಾವಣೆ ಸುಲಭವೇನಲ್ಲ. ಏಕೆಂದರೆ, ಕಾಂಗ್ರೆಸ್‌ನವರು ಎಲ್ಲ ವಿಷಯವನ್ನೂ ಲೋಕಲೈಸ್ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನಿತ್ಯವೂ ಕೇಂದ್ರದ ವಿರುದ್ಧ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಹೀಗಾಗಿ, ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಮತದಾರರ ಮನೆ ಮನೆಗೆ ತಲುಪಿಸಿ ಎಂದು ಸೂಚಿಸಿದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರಿಗೆ ಮತ ಕೇಳಲು ನಮ್ಮ ಕಾರ್ಯಕರ್ತರಿಗೆ  ಯಾವುದೇ ಅಳಕು ಅಥವಾ ಮುಜುಗರ ಇರುವುದಿಲ್ಲ. ಅಂತಹ ಆಡಳಿತವನ್ನು ನಮ್ಮ ಸರ್ಕಾರ ನೀಡುತ್ತಿದೆ. 2014ಕ್ಕಿಂತ ಹಿಂದೆ ದೇಶದಲ್ಲಿ ಸುರಕ್ಷತೆ ಇರಲಿಲ್ಲ. ಎಲ್ಲಿ ಬೇಕಾದರೂ ಬಾಂಬ್ ಸ್ಫೋಟ ಆಗಬಹುದು ಎಂಬ ಭಯವಿತ್ತು. ಆದರೆ, ಬಿಜೆಪಿ ಸರ್ಕಾರ ಬಂದ ನಂತರ ಅಂಥ ದುರ್ಘಟನೆಗಳು ನಡೆದಿಲ್ಲ. ಹೀಗೆ ದೇಶವನ್ನು ನಡೆಸುವುದು ಸುಲಭವೇನಲ್ಲ ಎಂದು ಸಮರ್ಥಿಸಿಕೊಂಡರು.

ಶ್ರೀಮಂತರು ಹಾಗೂ ಉಳ್ಳವರ ಜೇಬು ತುಂಬಿಸುವುದೇ ಅಭಿವೃದ್ಧಿ ಎಂಬುದು ಕಾಂಗ್ರೆಸ್ ಕಲ್ಪನೆಯಾಗಿದೆ. ಆದರೆ,  ಬಡವರ ಆರ್ಥಿಕತೆ ಸುಧಾರಿಸಬೇಕು ಎಂಬ ಅಂತ್ಯೋದಯದ ಪರಿಕಲ್ಪನೆ ನಮ್ಮದು. ಆದ್ದರಿಂದಲೇ ನಮ್ಮ ಶೇ.೮೦ರಷ್ಟು ಯೋಜನೆ ಬಡವರು ಮತ್ತು ರೈತರ ಪರವಾಗಿವೆ. ಮೋದಿ ನೇತೃತ್ವದ ಸರ್ಕಾರದಿಂದಾಗಿ ಜಗತ್ತಿನಲ್ಲಿ ಭಾರತದ ಗೌರವ ಹೆಚ್ಚಾಗಿದೆ. ಹಿಂದೆ ಸಂವಿಧಾನಕ್ಕೆ ಅಪಚಾರ ಮಾಡುವ ಪ್ರಯತ್ನ ನಡೆಯುತ್ತಿತ್ತು. ಅದನ್ನು ನಮ್ಮ ಸರ್ಕಾರ ತಡೆದಿದೆ. ಸಾಂಸ್ಕೃತಿಕ ಭಾರತ ಕಟ್ಟುವ ಕೆಲಸ ಮಾಡಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಬಡವರ ಹೆಸರಿನಲ್ಲಿ ಹಣ ದೋಚುತ್ತಿದೆ. ಬರ ಪರಿಹಾರ ಕಾಮಗಾರಿಗಳು ಕೂಡ ನಡೆಯುತ್ತಿಲ್ಲ. ಇದೆಲ್ಲವನ್ನೂ ನಾವು ಮತದಾರರಿಗೆ ತಿಳಿಸಿಕೊಡಬೇಕು. ಮೋದಿ ಮತ್ತೊಂದು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದರೂ ಈ ಬಾರಿಯ ದಾಖಲೆಯನ್ನು ಮುರಿಯಲು ಆಗದಂತಹ ಫಲಿತಾಂಶ ಕೊಡಬೇಕು ಎಂದು ತಿಳಿಸಿದರು.

ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಎಲ್.ಕೆ.ಅಡ್ವಾಣಿ ಅವರಿಗೆ ಭಾರತ ರತ್ನ ಘೋಷಣೆ ಮಾಡುವ ಮೂಲಕ  ಮೋದಿಯವರು ಕಾರ್ಯಕರ್ತರಲ್ಲಿ ನವಚೈತನ್ಯ ತುಂಬಿದ್ದಾರೆ. ಕಾಂಗ್ರೆಸ್ ಸರ್ಕಾರ ಕೇವಲ ವರ್ಗಾವಣೆ ದಂಧೆಯಲ್ಲಿ ಮುಳುಗಿದೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ನಗರದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ವಿಶೇಷ ಅನುದಾನ ನೀಡಿದ್ದರು. ಆದರೆ, ಈಗಿನ ಸರ್ಕಾರ ಕೃಷ್ಣರಾಜ ಕ್ಷೇತ್ರಕ್ಕೆ ನೀಡಿದ್ದ ೪೫ ಕೋಟಿ ವಾಪಸ್ ತೆಗೆದುಕೊಂಡಿದೆ. ಒಂದೇ ರೂಪಾಯಿಯನ್ನೂ ನನ್ನ ಕ್ಷೇತ್ರಕ್ಕೆ ಉಳಿಸಿಲ್ಲ. ಇದನ್ನು ಅಧಿವೇಶನದಲ್ಲಿ ಪ್ರಶ್ನಿಸಲಿದ್ದೇನೆ ಎಂದು ತಿಳಿಸಿದರು.

ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಿಸಿ ಬಾಲರಾಮನ ಪ್ರಾಣ ಪ್ರತಿಷ್ಠಾಪಿಸಿದ್ದಕ್ಕಾಗಿ ಕೇಂದ್ರ ಸರ್ಕಾರ ಹಾಗೂ  ಪ್ರಧಾನಿಗೆ ಅಭಿನಂದನಾ ನಿರ್ಣಯ ಕೈಗೊಳ್ಳಲಾಯಿತು. ಪಕ್ಷದ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಅಧ್ಯಕ್ಷ ಕೌಟಿಲ್ಯ ಆರ್.ರಘು ಮಂಡಿಸಿದ ನಿರ್ಣಯವನ್ನು ಕಾರ್ಯಕಾರಿಣಿ ಅನುಮೋದಿಸಿತು.

ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ರಾಜೇಂದ್ರ, ಮೈಸೂರು ಕ್ಲಸ್ಟರ್ ಅಧ್ಯಕ್ಷ ಎಸ್.ಎ.ರಾಮದಾಸ್, ನಗರ ಘಟಕದ  ಅಧ್ಯಕ್ಷ ಎಲ್.ನಾಗೇಂದ್ರ, ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಅಧ್ಯಕ್ಷ ಕೌಟಿಲ್ಯ ಆರ್.ರಘು, ಅಲ್ಪಸಂಖ್ಯಾತರ ಮೋರ್ಚಾ ರಾಜ್ಯ ಅಧ್ಯಕ್ಷ ಡಾ.ಅನಿಲ್ ಥಾಮಸ್, ನಿರ್ಗಮಿತ ಪ್ರಧಾನ ಕಾರ್ಯದರ್ಶಿಗಳಾದ ಸೋಮಸುಂದರ್ ಹಾಗೂ ವಾಣೀಶ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು