News Karnataka Kannada
Monday, April 29 2024
ಮೈಸೂರು

ಮೈಸೂರು: ವಿಶ್ವ ಯೋಗ ದಿನಾಚರಣೆಗೆ ಸಜ್ಜಾಗುತ್ತಿದೆ ಅರಮನೆ

Mysore
Photo Credit : By Author

ಮೈಸೂರು: ವಿಶ್ವ ಯೋಗ ದಿನಾಚರಣೆಗೆ ಅರಮನೆ ಅಂಗಳ ಸಜ್ಜಾಗುತ್ತಿದೆ. ಈ ಬಾರಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಯೋಗ ಮಾಡುವುದರಿಂದ ಅರಮನೆಯನ್ನು ಸರ್ವ ರೀತಿಯಲ್ಲಿ ಸಜ್ಜುಗೊಳಿಸಲಾಗುತ್ತಿದೆ.

ಮೈಸೂರಿನಲ್ಲಿ ವಿಶ್ವ ಯೋಗ ದಿನಾಚರಣೆ ಮೂಲಕ ದೇಶದ ಪ್ರಧಾನ ಸಮಾರಂಭಕ್ಕೆ ವೇದಿಕೆಯಾಗುತ್ತಿದ್ದು, ಇದು ದಕ್ಷಿಣ ಭಾರತದಲ್ಲಿ ನಡೆಯುತ್ತಿರುವ ಮೊದಲ ಕಾರ್ಯಕ್ರಮ ಎಂಬ ಹಿರಿಮೆಗೂ ಭಾಜನವಾಗಿದೆ. ಹೀಗಾಗಿ, ಈ ಯೋಗ ಉತ್ಸವಕ್ಕೆ ಹೆಚ್ಚಿನ ಮಹತ್ವ ಬಂದಿದೆ. ರಾಜ್ಯ ಸರ್ಕಾರ, ಜಿಲ್ಲಾಡಳಿತ ಹಾಗೂ ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಜೂ. 21ರಂದು ಬೆಳಗ್ಗೆ 6.30ಕ್ಕೆ ಅರಮನೆಗೆ ಪ್ರಧಾನಿ ಆಗಮಿಸಿದ ಬಳಿಕ ಅರ್ಧ ಗಂಟೆ ಕಾಲ ಸಭಾ ಕಾರ್ಯಕ್ರಮ ಜರುಗಲಿದೆ.  ಬೆಳಗ್ಗೆ 7ರಿಂದ 45ನಿಮಿಷಗಳ ಕಾಲ ಯೋಗ ಪ್ರದರ್ಶನ ಇರಲಿದೆ. ಪ್ರಧಾನಿಯೂ ಯೋಗಾಸನ ಮಾಡಲಿದ್ದಾರೆ. ಇವರೊಂದಿಗೆ ವೇದಿಕೆ ಮೇಲೆ ಮುಖ್ಯಮಂತ್ರಿ, ರಾಜ್ಯಪಾಲರು, ಕೇಂದ್ರ ಆಯುಷ್ ಸಚಿವರು ಹಾಗೂ ಜಿ ಉಸ್ತುವಾರಿ ಸಚಿವರಿಗೆ ಮಾತ್ರವೇ ಅವಕಾಶ ದೊರೆಯಲಿದೆ ಎಂದು ಮೂಲಗಳು ತಿಳಿಸಿವೆ.

ಜತೆಗೆ ಅರಮನೆ ಎದುರಿನ ವಿಶಾಲ ಮೈದಾನದಲ್ಲಿ ಅಂದಾಜು 15ಸಾವಿರ ಜನರಿಗೆ ಅವಕಾಶ ದೊರೆಯಲಿದೆ. ಇವರೆಲ್ಲ ಬೆಳಗ್ಗೆ  5.30ರ ಒಳಗೆ ಅರಮನೆಗೆ ಆಗಮಿಸಬೇಕಿದೆ. ಅದಕ್ಕಾಗಿ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಪೌರಕಾರ್ಮಿಕರು, ಅಂಗವಿಕಲರು, ಶಾಲಾ ಮಕ್ಕಳು ಸೇರಿದಂತೆ ಸಮಾಜದ ವಿವಿಧ ವರ್ಗಗಳ ಪ್ರತಿನಿಧಿಗಳು, ಜನರಿಗೂ ಪಾಲ್ಗೊಳ್ಳಲು ಅವಕಾಶ ನೀಡಲಾಗುತ್ತಿದೆ.

ಅಲಂಕಾರಿಕ ಗಿಡಗಳಿಂದ ಕಂಗೊಳಿಸುತ್ತಿರುವ ಉದ್ಯಾನ: ಯೋಗ ಉತ್ಸವಕ್ಕಾಗಿ ಅರಮನೆ ಅಂಗಳದಲ್ಲಿ ಭರದ ಸಿದ್ಧತೆಗಳು  ಸಾಗಿವೆ. ದಸರಾ ಮಹೋತ್ಸವ ಮತ್ತು ಹೊಸ ವರ್ಷಾಚರಣೆ ಅಂಗವಾಗಿ ನಡೆಯುವ ಮಾಗಿ ಉತ್ಸವ ಸಂದಭದಲ್ಲಿ ಮಾತ್ರ ಅರಮನೆ ಆವರಣದಲ್ಲಿನ ಉದ್ಯಾನಕ್ಕೆ ಜೀವಕಳೆ ಬರುತ್ತಿತ್ತು. ಇದೀಗ ಯೋಗ ಉತ್ಸವದಿಂದ ಉದ್ಯಾನಕ್ಕೆ ಹೊಸ ಕಳೆ ಬಂದಿದೆ. ಅರಮನೆ ಆಡಳಿತ ಮಂಡಳಿಯಿಂದ ಉದ್ಯಾನದಲ್ಲಿ ಸ್ವಚ್ಛತಾ ಕಾರ್ಯ ನಡೆದಿದೆ. ಬೆಳೆದಿದ್ದ ಅನುಪಯುಕ್ತ ಕಳೆಯನ್ನು ತೆಗೆಯಲಾಗುತ್ತಿದೆ. ಅಲ್ಪ ಸಮಯದಲ್ಲೇ ಉದ್ಯಾನವನ್ನು ಲಭವಿರುವ ಹೂವಿನ ಕುಂಡ ಹಾಗೂ ಅಲಂಕಾರಿಕ ಗಿಡಗಳಿಂದ ಸಿಂಗಾರ ಮಾಡಲಾಗುತ್ತಿದೆ.

ಯೋಗಾ ಆಕೃತಿಗಳ ರಚನೆ: ಇನ್ನು ಅರಮನೆ ಆವರಣಕ್ಕೆ ಯೋಗ ಮಾಡಲು ಬರುವ ಯೋಗಾಸಕ್ತರಿಗೆ ಹೂವಿನಲ್ಲಿ ಅರಳಿದ ಯೋಗಾಸನದ ಆಕೃತಿಗಳು ಆಕರ್ಷಿಸಲಿವೆ. ವಿವಿಧ ಬಣ್ಣದ ಗುಲಾಬಿಗಳಿಂದ ಯೋಗದ ವಿವಿಧ ಭಂಗಿಗಳನ್ನು ಬಿಂಬಿಸುವ  ಆಕೃತಿಗಳನ್ನು ರಚನೆ ಮಾಡುವ ಕಾರ್ಯ ನಡೆಯುತ್ತಿದೆ.

ಯೋಗಪಟುಗಳು ಯೋಗಾಸನ ಮಾಡಲು ಅನುಕೂಲವಾಗಲು ಹುಲ್ಲಿನ ಹಾಸಿಗೆ ಸಜ್ಜುಗೊಳ್ಳುತ್ತಿದೆ. ಉದ್ಯಾನದಲ್ಲಿ ಹುಲ್ಲು  ಎತ್ತರಕ್ಕೆ ಬೆಳೆದುಕೊಂಡಿತ್ತು. ಯೋಗ ಮ್ಯಾಟ್ ಹಾಕಲು ಸಹಕಾರಿಯಾಗುವಂತೆ ಯಂತ್ರದ ಮೂಲಕ ಹುಲ್ಲನ್ನು ಸಮತಟ್ಟು ಮಾಡಿ, ಹುಲ್ಲಿನ ಹಾಸಿಗೆ ನಿರ್ಮಿಸಲಾಗುತ್ತಿದೆ.

ಹಾಗೆಯೇ ಅರಮನೆಯಲ್ಲಿ ನೆಲಹಾಸುಗಳನ್ನು ಸರಿಪಡಿಸುವ ಕಾರ್ಯ ಭರದಿಂದ ಸಾಗಿದೆ. ಶ್ರೀಭುವನೇಶ್ವರಿ ದೇವಾಲಯ, ಕೋಟೆ ಆಂಜನೇಯಸ್ವಾಮಿ ದೇವಾಲಯದ ಹಿಂಭಾಗದ ರಸ್ತೆಯಿಂದ ಕೋಡಿ ಸೋಮೇಶ್ವರ ದೇವಾಲಯ ಹಾಗೂ ಜಯಮಾರ್ತಾಂಡ ದ್ವಾರ ಸೇರುವ ರಸ್ತೆಗೆ ಹೊಸದಾಗಿ ಇಂಟರ್‌ಲಾಕ್ ಅಳವಡಿಸಲಾಗುತ್ತಿದೆ. ಇಲ್ಲಿನ ರಸ್ತೆಯ ಎರಡೂ ಬದಿ ರಸ್ತೆ ವಿಭಜಕಕ್ಕೆ ಒಂದೂವರೆ ಅಡಿ ಎತ್ತರದ ಸಿಮೆಂಟ್ ಬ್ಲಾಕ್ ಅಳವಡಿಸಲಾಗುತ್ತಿದೆ. ದಸರಾ ಆನೆಗಳನ್ನು ಕಟ್ಟಿ ಹಾಕುವ ಸ್ಥಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಣ್ಣಿನಿಂದ ಕೂಡಿದೆ. ಇದನ್ನು ಇಂಟರ್‌ಲಾಕ್ ರಸ್ತೆಯಾಗಿ ಮಾರ್ಪಡಿಸಲಾಗುತ್ತಿದೆ. ಒಟ್ಟಿನಲ್ಲಿ ಯೋಗ ದಿನಾಚರಣೆಗೆ ಇನ್ನೂ ೧೧ ದಿನ ಬಾಕಿ ಇದ್ದು, ಅಷ್ಟರೊಳಗೆ ಅರಮನೆ ಅಂಗಳ ನಳನಳಿಸಲಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು