News Karnataka Kannada
Sunday, April 28 2024
ಮೈಸೂರು

ಮೈಸೂರಿನಲ್ಲಿ ಎಚ್‌ಐವಿ ಸೋಂಕಿತರ ಸಂಖ್ಯೆ ಏರಿಕೆ

Photo Credit :

ಮೈಸೂರು, ಡಿ.3 : ಎರಡು ದಶಕಗಳ ಹಿಂದೆ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ್ದ ಎಚ್‌ಐವಿ ಸೋಂಕು, ಇಂದಿಗೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಸರಕಾರವೆನೋ ನಿರಂತರ ಅರಿವು, ರೋಗದ ಭೀಕರತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರೂ ಮೈಸೂರು ಜಿಲ್ಲೆಯಲ್ಲಿ ಏಡ್ಸ್ ಸೋಂಕಿತರ ಸಂಖ್ಯೆ ಜನಸಂಖ್ಯೆಗೆ ಅನುಗುಣವಾಗಿ ಏರುತ್ತಲೆ ಇದೆ.
ಇದು ಸಹಜವಾಗಿಯೇ ಆರೋಗ್ಯ ಇಲಾಖೆ ಅಧಿಕಾರಿಗಳ ನಿದ್ದೆಗೆಡಿಸಿದೆ.

ಭಿತ್ತಿಪತ್ರ ಹಂಚುವುದು, ರೋಗದ ಬಗ್ಗೆ ಬೀದಿನಾಟಕದ ಬಗ್ಗೆ ಅರಿವು ಮೂಡಿಸುತ್ತಿದ್ದರೂ ಜನರು ಸೋಂಕಿಗೆ ಬಲಿಯಾಗುತ್ತಿರುವುದು ಸಾಮಾನ್ಯ ಎಂಬಂತಾಗಿದೆ. “ಅಸಮಾನತೆ ಕೊನೆಗೊಳಿಸಿ, ಏಡ್ಸ್ ಅನ್ನು ಅಂತ್ಯಗೊಳಿಸಿ” ಎಂಬ ಸಾಲು 2021ರ ವಿಶ್ವ ಏಡ್ಸ್ ದಿನದ ಘೋಷವಾಕ್ಯವಾಗಿದ್ದು, ಈ ರೋಗಗಳನ್ನು ಕೊನೆಗೊಳಿಸಲು ನಾಗರಿಕರು ಪಣತೊಡುವಂತೆ ವಿಶ್ವಸಂಸ್ಥೆ ಮನವಿ ಮಾಡಿದೆ.

ಇಡೀ ರಾಜ್ಯದಲ್ಲಿ ಮೈಸೂರು ಜಿಲ್ಲೆ 16ನೇ ಸ್ಥಾನ ಪಡೆದುಕೊಂಡಿದ್ದರೆ, ದಕ್ಷಿಣ ಕರ್ನಾಟಕದಲ್ಲಿ ಮೊದಲ ಸ್ಥಾನಕ್ಕೇರಿದೆ. ಇದು ಸಹಜವಾಗಿಯೇ ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸಿದೆ. ಎಚ್‌ಐವಿ ಸೋಂಕಿತರ ಪೈಕಿ ಮೈಸೂರು ನಗರ ಅಗ್ರಸ್ಥಾನ ಪಡೆದುಕೊಂಡಿದೆ.

ಈ ವರ್ಷ 166 ಮಂದಿ ಎಚ್‌ಐವಿ ರೋಗಕ್ಕೆ ತುತ್ತಾಗಿದ್ದಾರೆ. ಹುಣಸೂರು ತಾಲೂಕು 41, ಪಿರಿಯಾಪಟ್ಟಣ 13, ಕೆ. ಆರ್. ನಗರ 21, ನಂಜನಗೂಡು 29, ಎಚ್. ಡಿ. ಕೋಟೆ 21, ತಿ. ನರಸೀಪುರ 17 ಹಾಗೂ ಇತರೆ ತಾಲೂಕುಗಳಿಂದ 81 ಪ್ರಕರಣಗಳು ಸೇರಿ 389 ಜನರು ಎಚ್‌ಐವಿ ಸೋಂಕಿತರಿರುವುದು ಬೆಳಕಿಗೆ ಬಂದಿದೆ. ಇತ್ತೀಚೆಗೆ ಏಡ್ಸ್ ರೋಗವನ್ನು ಸಾಮಾನ್ಯ ರೋಗ ಎಂಬ ಜನರು ಪರಿಗಣಿಸುತ್ತಿರುವುದು ಸೋಂಕು ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎಂಬುದು ವೈದ್ಯರ ಅಭಿಪ್ರಾಯವಾಗಿದೆ.

ಸೋಂಕಿತರ ಪ್ರಮಾಣ; 2019-20ನೇ ಸಾಲಿನಲ್ಲಿ 1,33,495 ಜನರು ಎಚ್‌ಐವಿ ಪರೀಕ್ಷೆಗೆ ಒಳಪಟ್ಟಿದ್ದು, ಇವರಲ್ಲಿ 982 ಮಂದಿಗೆ ಸೋಂಕು ದೃಢಪಟ್ಟಿತ್ತು. ಇವರಲ್ಲಿ 24 ಗರ್ಭಿಣಿಯರಿದ್ದರು. 2020-21ರಲ್ಲಿ 91,953 ಜನರಿಗೆ ಪರೀಕ್ಷೆ ಮಾಡಿದ್ದು, 521 ಜನರು ಎಚ್‌ಐವಿ ಬಾಧಿತರಾಗಿದ್ದರು.

ಇವರಲ್ಲಿ 20 ಮಂದಿ ಗರ್ಭಿಣಿಯರಿದ್ದರು. ಈ ವರ್ಷದ ಹತ್ತು ತಿಂಗಳ ಅವಧಿಯಲ್ಲಿ 68,819 ಜನರಿಗೆ ಪರೀಕ್ಷೆ ಮಾಡಿದ್ದು, 389 ಜನರಲ್ಲಿ ಎಚ್‌ಐವಿ ಪತ್ತೆಯಾಗಿದೆ. ಇದರಲ್ಲಿ 21 ಗರ್ಭೀಣಿಯರಿದ್ದಾರೆ. 2019-20 ಮತ್ತು 2020-21ರಲ್ಲಿ ಶೇ.0.4ರಷ್ಟಿದ್ದ ಎಚ್‌ಐವಿ ಸೋಂಕಿತರ ಪ್ರಕರಣಗಳು, 2021ರ ಅಕ್ಟೋಬರ್ ತಿಂಗಳವರೆಗೆ ಶೇ. 0.3 ಸೋಂಕಿತರು ಪತ್ತೆಯಾಗಿದ್ದಾರೆ.

“ಮೈಸೂರು ಜಿಲ್ಲೆಯಲ್ಲಿ 2002 ರಿಂದ 2021ರವರೆಗೆ ಒಟ್ಟು 778556 ಜನರು ಎಚ್‌ಐವಿ ಪರೀಕ್ಷೆ ಒಳಗಾಗಿದ್ದು, 26280 ಮಂದಿಗೆ ಸೋಂಕು ದೃಢಪಟ್ಟಿದೆ. ಇವರಲ್ಲಿ 1261 ಗರ್ಭಿಣಿಯರಿದ್ದಾರೆ. ಏಡ್ಸ್ ಸಂಬಂಧ ಆಶಾ ಕಿರಣ, ಆಶೋದಯ ಹಾಗೂ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಖಾನೆ, ಸಂಘ-ಸಂಸ್ಥೆ ಹಾಗೂ ಗ್ರಾಮೀಣ ಭಾಗಗಳಲ್ಲಿ ಏಡ್ಸ್ ಸೋಂಕಿನ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಇಷ್ಟಾದರೂ ಪ್ರತಿ ವರ್ಷ 900ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ. ಈ ವರ್ಷ 21 ಗರ್ಭಿಣಿಯರಲ್ಲಿ ಸೋಂಕು ಪತ್ತೆಯಾಗಿದ್ದು, ಪ್ರತಿ ತಿಂಗಳು ಕೌನ್ಸೆಲಿಂಗ್‌ಗೆ ಒಳಪಡಿಸಲಾಗುತ್ತಿದೆ” ಎಂದು ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಸಿರಾಜ್ ಅಹಮ್ಮದ್ ತಿಳಿಸಿದ್ದಾರೆ.

ಆರೋಗ್ಯ ಇಲಾಖೆಯಿಂದ ಜಾಗೃತಿ; ಯುವ ಜನರಿಗೆ ಎಚ್‌ಐವಿ ಬಗ್ಗೆ ಅರಿವು ಮೂಡಿಸಲು ಕೆಎಸ್‌ಎಪಿಎಸ್‌ನಿಂದ 72 ರೆಡ್ ರಿಬ್ಬನ್ ಕ್ಲಬ್‌ಗಳನ್ನು ಪದವಿ ಕಾಲೇಜುಗಳಲ್ಲಿ ಸ್ಥಾಪಿಸಲಾಗಿದೆ. 308 ಶಾಲೆಗಳಲ್ಲಿ ಹದಿಹರೆಯದ ಆರೋಗ್ಯ ಶಿಕ್ಷಣದ ಬಗ್ಗೆ ಮಾಹಿತಿ ನೀಡಲು ಯೋಜನೆ ರೂಪಿಸಲಾಗಿದೆ.

ಜೊತೆಗೆ ಜಿಲ್ಲೆಯಲ್ಲಿ 10 ರಕ್ತನಿಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಎಚ್‌ಐವಿ ರೋಗಿಗಳಿಗೆ ಉಚಿತವಾಗಿ ರಕ್ತ ಪೂರೈಕೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 10 ರಕ್ತ ಶೇಖರಣ ಘಟಕಗಳನ್ನು ಪ್ರಾರಂಭಿಸಲಾಗಿದ್ದು, ಕಲಾವಿದರ ಮೂಲಕ ಅರಿವು ಮೂಡಿಸುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು