ಮೈಸೂರು: ಒಂದು ಕಾಲದಲ್ಲಿ ಇಪ್ಪತ್ತಕ್ಕೂ ಚಿತ್ರಮಂದಿರಗಳನ್ನು ಹೊಂದಿ ಚಿತ್ರರಸಿಕರಿಗೆ ವಿವಿಧ ಬಗೆಯ ಸಿನಿಮಾಗಳನ್ನು ಪ್ರದರ್ಶನ ಮಾಡಿ ಗಮನಸೆಳೆದಿದ್ದ ಮೈಸೂರಿನ ಚಿತ್ರಮಂದಿರಗಳು ಹಲವು ರೀತಿಯ ಸಂಕಷ್ಟಗಳನ್ನು ಎದುರಿಸುವ ಮೂಲಕ ಮುಚ್ಚುತ್ತಾ ಹೋಗುತ್ತಿವೆ. ಇದೀಗ ಚಿತ್ರಪ್ರೇಮಿಗಳ ಮನಸೆಳೆದಿದ್ದ ಸ್ಟರ್ಲಿಂಗ್ ಹಾಗೂ ಸ್ಕೈಲೈನ್ ಚಿತ್ರಮಂದಿರಗಳು ನೆಲಸಮವಾಗುವ ಮೂಲಕ ಚಿತ್ರಮಂದಿರಗಳ ಸಂಖ್ಯೆ ಆರಕ್ಕೆ ಇಳಿಯುವಂತಾಗಿದೆ.

ಇತ್ತೀಚೆಗಿನ ವರ್ಷಗಳಲ್ಲಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳತ್ತ ತೆರಳಲು ಪ್ರೇಕ್ಷಕರು ಹಿಂದೇಟು ಹಾಕುತ್ತಿದ್ದು, ಮಾಲ್ ಗಳಲ್ಲಿ ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳತ್ತ ಮುಖ ಮಾಡುತ್ತಿದ್ದಾರೆ. ಹೀಗಾಗಿ ಬಹುತೇಕ ಚಿತ್ರಮಂದಿರಗಳು ಸಂಕಷ್ಟ ಅನುಭವಿಸುತ್ತಿವೆ. ಜತೆಗೆ ತೆರಿಗೆ ಹೆಚ್ಚಳ, ಚಿತ್ರಮಂದಿರದತ್ತ ನಿರಾಸಕ್ತಿ ಹಲವಾರು ಕಾರಣಗಳಿಂದ ಮಾಲೀಕರಿಗೆ ಚಿತ್ರಮಂದಿರಗಳನ್ನು ನಡೆಸುವುದು ಕಷ್ಟವಾಗುತ್ತಿದ್ದು ಹೀಗಾಗಿ ಚಿತ್ರಮಂದಿರವಿದ್ದ ಕಟ್ಟಡಗಳನ್ನು ಕೆಡವಿ ವಾಣಿಜ್ಯ ಉದ್ದೇಶಗಳಿಗೆ ಬಳಸಿಕೊಳ್ಳಲಾಗುತ್ತಿದೆ.

ಮೈಸೂರಿನಲ್ಲಿ ಚಿತ್ರಮಂದಿರಗಳು ಕಳೆದೊಂದು ದಶಕದಲ್ಲಿ ಒಂದರ ಮೇಲೊಂದರಂತೆ ಮುಚ್ಚಿವೆ. ಅದರಲ್ಲೂ ಕೋವಿಡ್ ನಂತರ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ನೆಲಸಮವಾಗುತ್ತಿದ್ದು, ಇದೀಗ ಸ್ಟರ್ಲಿಂಗ್ ಮತ್ತು ಸ್ಕೈಲೈನ್ ಆ ಸಾಲಿಗೆ ಸೇರಿಕೊಂಡಿವೆ. ಇನ್ನು ಮುಂದೆ ಇದೆರಡು ಚಿತ್ರಮಂದಿರಗಳು ಚಿತ್ರಪ್ರೇಮಿಗಳ ನೆನಪಿನಿಂದ ದೂರವಾಗಲಿವೆ. ಈ ಚಿತ್ರಮಂದಿರ ಹಿಂದಿ, ತೆಲುಗು, ಇಂಗ್ಲೀಷ್, ತಮಿಳು ಸಹಿತ ನಾನಾ ಭಾಷೆಗಳ ಚಿತ್ರ ಪ್ರದರ್ಶನದ ಮೂಲಕ ಮನೆಮಾತಾಗಿದ್ದವು. ಇತ್ತೀಚೆಗೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಕೆಲ ವರ್ಷಗಳ ಹಿಂದೆಯೇ ಚಿತ್ರಪ್ರದರ್ಶನವನ್ನು ನಿಲ್ಲಿಸಿದ್ದವು. ಇದೀಗ ಕಟ್ಟಡಗಳೇ ನೆಲಸಮಗೊಳ್ಳುತ್ತಿವೆ.

ಬಾಂಬೆಯ ಗಂಗಾ ಜಮುನ, ಬೆಂಗಳೂರಿನ ಬ್ಲೂಮೂನ್ ಮತ್ತು ಬ್ಲೂ ಡೈಮಂಡ್ ಮಾದರಿಯಲ್ಲೇ ಮೈಸೂರಿನಲ್ಲಿ ಸ್ಟರ್ಲಿಂಗ್ ಹಾಗೂ ಸ್ಕೈಲೇನ್ ಚಿತ್ರಮಂದಿರ ನಿರ್ಮಿಸಲಾಗಿತ್ತು. 1974ರರ ವೇಳೆಯಲ್ಲಿ ಸ್ಟರ್ಲಿಂಗ್ ಆರಂಭವಾದರೆ, 1978ರಲ್ಲಿ ಸ್ಕೈಲೇನ್ ಆರಂಭವಾಯಿತು. ಆರಂಭದಲ್ಲಿ ಹೆಚ್ಚು ಪ್ರೇಕ್ಷಕರಿಲ್ಲದೆ ಹೊರೆಯಾಗಿ ಪರಿಣಮಿಸಿತು. ಕ್ರಮೇಣ ಇಂಗ್ಲಿಷ್ ಚಿತ್ರಗಳನ್ನು ಪ್ರದರ್ಶನ ಮಾಡಲು ಆರಂಭಿಸಿದ ನಂತರ ಚಿತ್ರಮಂದಿರದ ಅದೃಷ್ಟ ಬದಲಾಯಿತು.

ನಂತರ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರಲಾರಂಭಿಸಿದರು. ಹಿಂದಿ ಚಿತ್ರಗಳೂ ಮಾಲೀಕರ ಕೈ ಹಿಡಿದವು. ಇತ್ತೀಚೆಗೆ ತೆರಿಗೆಯ ಹೊಡೆತ, ನಿರ್ವಹಣಾ ವೆಚ್ಚ, ಸಿನಿ ರಸಿಕರ ಕೊರತೆ, ಮಲ್ಟಿಫೆಕ್ಸ್ ಅಬ್ಬರ ಸೇರಿದಂತೆ ಹತ್ತಾರು ಕಾರಣಗಳಿಂದ ನಷ್ಟ ಅನುಭವಿಸಿ ಮುಚ್ಚಲ್ಪಟ್ಟಿತು. ಇದೀಗ ಇಡೀ ಕಟ್ಟಡವೇ ಕಣ್ಮರೆಯಾಗಿದೆ.

ಮೈಸೂರಿನಲ್ಲಿ ಸಾವಿರಾರು ಚಲನಚಿತ್ರಗಳನ್ನು ಪ್ರದರ್ಶಿಸುತ್ತಿದ್ದ 20ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಣಜಿ, ಅಪೆರಾ, ಶಾಲಿಮಾರ್, ಶ್ರೀನಾಗರಾಜ, ರತ್ನ, ಶಾಂತಲಾ, ಲಕ್ಷ್ಮೀ, ಗೋಕುಲ, ಗಣೇಶ, ಓಲಂಪಿಯಾ, ರಿಜೆನ್ಸಿ, ವಿದ್ಯಾರಣ್ಯ, ಚಾಮುಂಡೇಶ್ವರಿ, ಉಮಾ ಚಿತ್ರಮಂದಿರಗಳು ಈಗಾಗಲೇ ಕಣ್ಮರೆಯಾಗಿವೆ. ಇದೀಗ ಸ್ಟರ್ಲಿಂಗ್ ಹಾಗೂ ಸ್ಕೈಲೈನ್ ಕಣ್ಮರೆಯಾಗಿದ್ದು ಇನ್ನು ಕೇವಲ ಆರು ಚಿತ್ರಮಂದಿರಗಳು ಉಳಿದುಕೊಂಡಿವೆ. ಅವುಗಳು ಇನ್ನೆಷ್ಟು ದಿನ ಉಳಿಯುತ್ತವೆಯೋ ಗೊತ್ತಿಲ್ಲ. ಚಿತ್ರಮಂದಿರಗಳನ್ನು ಉಳಿಸಿಕೊಳ್ಳುವುದು ಈಗ ಸವಾಲ್ ಎನ್ನುವುದರಲ್ಲಿ ಎರಡು ಮಾತಿಲ್ಲ.