ಮೈಸೂರು: ಯೂನಿಟಿ ಮಾಲ್ ನಿರ್ಮಾಣಕ್ಕೆ ತಡೆ ವಿಚಾರವಾಗಿ ಯದುವಂಶದ ಪ್ರಮೋದದೇವಿ ಒಡೆಯರ್ ಪತ್ರಿಕಾ ಪ್ರಕಟಣೆಯಲ್ಲಿ ಯೂನಿಟಿ ಮಾಲ್ ನಿರ್ಮಾಣಕ್ಕೆ ನನ್ನ ವಿರೋಧ ಇಲ್ಲ. ನಮ್ಮ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡುವುದು ಸರಿಯಲ್ಲ. ನ್ಯಾಯಾಲಯದಲ್ಲಿ ಇದೇ ವಿಚಾರವಾಗಿ ಪ್ರಕರಣ ದಾಖಲಾಗಿದೆ ಎಂದರು.
ಮೈಸೂರು ಕಸಬಾ ಹೋಬಳಿಯ ಸ. ನಂ.1 ರಲ್ಲಿರುವ ದೊಡ್ಡಕೆರೆ ಟ್ಯಾಂಕ್ ಬೆಡ್ ಭೂಮಿ, ಇಲ್ಲಿ ನಿರ್ಮಿಸಲು ಉದ್ದೇಶಿಸಲಾದ ಯೂನಿಟಿ ಮಾಲ್ ವಿಚಾರಕ್ಕೆ ಕರ್ನಾಟಕದ ಹೈಕೋರ್ಟ್ ಯಥಾಸ್ಥಿತಿ ಆದೇಶದ ನೀಡಿದೆ. ಈ ವಿಚಾರವಾಗಿ ಕೆಲ ಪತ್ರಿಕೆ ಕೆಲ ಟಿವಿಗಳಲ್ಲಿ ತಪ್ಪು ವರದಿ ಪ್ರಕಟವಾಗಿದೆ. ರಾಜ್ಯದ ಕರಕುಶಲ ವಸ್ತುಗಳು ಮತ್ತು ಜಿಐ ಟ್ಯಾಗ್ ಮಾಡಲಾದ ಉತ್ಪನ್ನಗಳನ್ನು ಪ್ರದರ್ಶಿಸುವುದನ್ನು ನಾನು ವಿರೋಧಿಸುವುದಿಲ್ಲ.
ಬಹಿರಂಗ ಮತ್ತು ಅಂತರಂಗ ಜಗಳ ವಿಚಾರ ಸಹಾ ಇಲ್ಲಿ ಇಲ್ಲ. ಕರ್ನಾಟಕ ಸರ್ಕಾರವು ಮಾಲ್ ಸ್ಥಾಪಿಸಲಿ ಅದಕ್ಕೆ ನನ್ನ ವಿರೋಧ ಇಲ್ಲ. ಆದರೆ ಸರ್ಕಾರಕ್ಕೆ ಸೇರಿದ ಯಾವುದೇ ಭೂಮಿಯನ್ನು ಹಂಚಿಕೆ ಮಾಡಲಿ. ಅದರ ಬದಲು ಈ ನಿರ್ದಿಷ್ಟ ಖಾಸಗಿ ಆಸ್ತಿಯನ್ನು ಹಂಚಿಕೆ ಮಾಡುವುದು ಸರಿಯಲ್ಲ. ಇದು ಭಾರತ ಸರ್ಕಾರ ಮತ್ತು ಅಂದಿನ ರಾಜ್ಯ ಸರ್ಕಾರದ ನಡುವೆ ರಾಜ್ಯಗಳ ವಿಲೀನದ ಸಮಯದಲ್ಲಿ, ನಂತರದ ಒಪ್ಪಂದದ ದಿನಾಂಕ 23-01-1950 ರಂದು ಇತ್ಯರ್ಥವಾಗಿದೆ.
ನನ್ನ ಪೂರ್ವಜರ ಭೂಮಿಯನ್ನು ಉಳಿಸಿಕೊಳ್ಳುವುದು ಮತ್ತು ರಕ್ಷಿಸುವುದು ನನ್ನ ಜವಾಬ್ದಾರಿ. ಅದೇ ಕೆಲಸವನ್ನು ನಾನು ಮಾಡಿದ್ದೇನೆ. ನಾನು ಸಲ್ಲಿಸಿದ ಅರ್ಜಿಯಲ್ಲಿ ನನ್ನ ನಿಲುವನ್ನು ದೃಢೀಕರಿಸಲು ಸಂಬಂಧಿತ ದಾಖಲೆಗಳನ್ನು ಸಲ್ಲಿಸಲಾಗಿದೆ. ಸರ್ಕಾರದ ಪ್ರತಿಕ್ರಿಯೆ ಮುಂದಿನ ವಿಚಾರಣೆಗಾಗಿ ಕರ್ನಾಟಕದ ಹೈಕೋರ್ಟ್ ಮುಂದೆ ಬರಲಿದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ಯದುವಂಶದ ಪ್ರಮೋದಾ ದೇವಿ ಒಡೆಯರ್ ಸ್ಪಷ್ಟನೆ ನೀಡಿದ್ದಾರೆ.

