ಟಿ. ನರಸೀಪುರ: ಕಳೆದ ಮೂರು ವರ್ಷಗಳಿಂದ ರೈತರಿಂದ ಭತ್ತ ಖರೀದಿಸಿ ಕೋಟ್ಯಂತರ ರೂಪಾಯಿ ಹಣ ನೀಡದೆ ವಂಚನೆ ಮಾಡಿರುವ ಆರೋಪ ಎದುರಿಸುತ್ತಿರುವ ವರುಣ ವಿಧಾನಸಭಾ ಕ್ಷೇತ್ರದ ಗರ್ಗೇಶ್ವರಿ ಗ್ರಾಮದಲ್ಲಿರುವ ಎಂಎನ್ ಆಗ್ರೋ ಇಂಡಸ್ಟ್ರಿಯ ಮಾಲೀಕ ನಹೀಂ ಉಲ್ಲಾ ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಘಟನೆ ವರದಿಯಾಗಿದೆ.
ತಮ್ಮ ಬೆಳೆಯ ಹಣ ಕೇಳಲು ಹೋದ ರೈತರು ಮತ್ತು ದಲ್ಲಾಳಿಗಳ ಮೇಲೆ ನಹೀಂ ಉಲ್ಲಾ ಕಾರು ಹರಿಸಿ ಕೊಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಗರ್ಗೇಶ್ವರಿ ಗ್ರಾಮದ ಸ್ಥಳೀಯರನ್ನು ಬಳಸಿಕೊಂಡು ರೈತರ ಮೇಲೆ ಗೂಂಡಾಗಿರಿ ನಡೆಸಿ, ಹಲ್ಲೆ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಟಿ. ನರಸೀಪುರ ಮತ್ತು ವರುಣಾ ಕ್ಷೇತ್ರದ ವಿವಿಧ ಗ್ರಾಮಗಳ ರೈತರಿಗೆ ನಹೀಂ ಉಲ್ಲಾ ಕೋಟ್ಯಂತರ ರೂಪಾಯಿ ಹಣವನ್ನು ಬಾಕಿ ಉಳಿಸಿಕೊಂಡಿದ್ದು, ಹಣ ಕೇಳಲು ಹೋದರೆ ಬೆದರಿಕೆ ಹಾಕುತ್ತಿದ್ದಾರೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ರೈತರು ಮತ್ತು ದಲ್ಲಾಳಿಗಳ ಮೇಲೆ ನಡೆದ ದೌರ್ಜನ್ಯ ಮತ್ತು ಕೊಲೆ ಯತ್ನದ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದರೂ, ಪೊಲೀಸರು ದೂರುಗಳನ್ನು ಕ್ಯಾರೆ ಎನ್ನದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಎಂಎನ್ ಆಗ್ರೋ ಇಂಡಸ್ಟ್ರಿ ಮಾಲೀಕ ನಹೀಂ ಉಲ್ಲಾ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಕೂಡಲೇ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ವಂಚನೆಗೊಳಗಾದ ರೈತರಿಗೆ ನ್ಯಾಯ ಒದಗಿಸಬೇಕು ಹಾಗೂ ರೈತರ ಮೇಲೆ ದಬ್ಬಾಳಿಕೆ ನಡೆಸಿದ ನಹೀಂ ಉಲ್ಲಾ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ರೈತ ಸಂಘಟನೆಗಳು ಒತ್ತಾಯಿಸಿವೆ.

