ನಂಜನಗೂಡು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಂಜನಗೂಡಿನಲ್ಲಿ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದಿಂದ ಬೃಹತ್ ಅನಿರ್ಧಿಷ್ಟಾವಧಿ ಮುಷ್ಕರ ನಡೆಯುತ್ತಿದೆ.
ನಂಜನಗೂಡು ನಗರದ ನಗರಸಭಾ ಕಾರ್ಯಾಲಯದ ಬಾಗಿಲನ್ನು ಬಂದ್ ಮಾಡಿ, ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರಿ ನೌಕರರಿಗೆ ನೀಡುವ ಪ್ರತಿಯೊಂದು ಸವಲತ್ತುಗಳನ್ನು ಪೌರಸೇವಾ ನೌಕರರಿಗೆ ಪ್ರತ್ಯೇಕ ಆದೇಶವಿಲ್ಲದೆ ವಿಸ್ತರಿಸಬೇಕು. ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ದಿನಗೂಲಿ ಕ್ಷೇಮಾಭಿವೃದ್ಧಿ ಅಧಿನಿಯಮದಡಿ ಇರುವ ನೌಕರರನ್ನು ಸಕ್ರಮಗೊಳಿಸಬೇಕು.
ನಗರ ಸಭೆಗಳಲ್ಲಿ ಶೇ.100 ರಷ್ಟು ಪೌರಕಾರ್ಮಿಕರನ್ನು ವಿಶೇಷ ನೇಮಕಾತಿ ಅಡಿ ನೇಮಕ ಮಾಡಿಕೊಳ್ಳಬೇಕು, 2022ನೇ ಸಾಲಿನ ವಿಶೇಷ ನೇಮಕಾತಿ ಅಡಿ ಆಯ್ಕೆಯಾದ ಪೌರಕಾರ್ಮಿಕರು ಮತ್ತು ಲೋಡರ್ಸ್ ಗಳಿಗೆ ಎಸ್ ಎಫ್ ಸಿ ವೇತನ ನಿಧಿಯಿಂದ ವೇತನ ಪಾವತಿಸಬೇಕು, ನಗರ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೀರು ಸರಬರಾಜು ನೌಕರರನ್ನು ವಿಶೇಷ ನೇಮಕಾತಿ ಅಡಿಯಲ್ಲಿ ಪರಿಗಣಿಸಬೇಕು.

ಪೌರ ಸೇವಾ ನೌಕರಿಗೆ ಜ್ಯೋತಿ ಸಂಜೀವಿನಿ ಮತ್ತು ನಗದು ರಹಿತ ಚಿಕಿತ್ಸೆ ಸೌಲಭ್ಯವನ್ನು ಕಲ್ಪಿಸಬೇಕು. ಐಟಿ ಸಿಬ್ಬಂದಿ, ಅಕೌಂಟ್ ಕನ್ಸಲ್ ಟೆಂಟ್, ಕಂಪ್ಯೂಟರ್ ಆಪರೇಟರ್, ವಾಹನ ಚಾಲಕ, ಸ್ಯಾನಿಟರಿ ಸೂಪರ್ ವೈಜರ್ ಹಾಗೂ ಇತರೆ ವೃಂದದ ನೌಕರರನ್ನು ಪೌರ ಸೇವಾ ನೌಕರರೆಂದು ಪರಿಗಣಿಸಿ ವಿಲೀನಗೊಳಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಹಲವಾರು ಬೇಡಿಕೆಗಳು ಸುಮಾರು ದಶಕಗಳಿಂದ ಬಾಕಿ ಉಳಿದಿದ್ದು, ಎಲ್ಲಾ ಬೇಡಿಕೆಗಳನ್ನು ಸರ್ಕಾರ ಇದುವರೆಗೂ ಈಡೇರಿಸಿಲ್ಲ. ಈ ಕುರಿತಂತೆ ಸರ್ಕಾರಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ ಎಂದರು. ಈಗಾಗಲೇ ಕಳೆದ ತಿಂಗಳು ಮನವಿ ನೀಡಲಾಗಿತ್ತು. ಅವಧಿ ಈಗ ಮುಗಿದಿದ್ದು ರಾಜ್ಯಾದ್ಯಂತ ಸ್ವಚ್ಛತೆ ಸ್ಥಗಿತಗೊಳಿಸಿ ಮುಷ್ಕರ ಪ್ರಾರಂಭಿಸಿದ್ದೇವೆ. ನಮ್ಮ ಬೇಡಿಕೆ ಈಡೇರದಿದ್ದಲ್ಲಿ ಮುಂದಿನ ದಿನಗಳಲ್ಲಿ ನೀರು ಸರಬರಾಜು ಸ್ಥಗಿತಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ನಾರಾಯಣರಾವ್, ಎನ್ ಮಾದಯ್ಯ, ಮೈತ್ರಾವತಿ, ರೇಖಾ, ಪ್ರೀತಮ್, ಎಂ ಮಹೇಶ್, ಕುಮಾರ್, ನಂದಿನಿ ಸೇರಿದಂತೆ ಪೌರಕಾರ್ಮಿಕರು, ವಾಹನ ಚಾಲಕರು ಸಿಬ್ಬಂದಿಗಳು ಹಾಜರಿದ್ದರು.

