ನಂಜನಗೂಡು: ಭಾರತೀಯ ಪರಂಪರೆಯಲ್ಲಿ ಮೈಸೂರು ಸಂಸ್ಥಾನದ ಹೆಸರು ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿರಲು ನಾಲ್ವಡಿ ಕೃಷ್ಣರಾಜ ಒಡೆಯರ ಆಳ್ವಿಕೆಯಲ್ಲಿ ಕೈಗೊಂಡ ಜನಪರ ಅಭಿವೃದ್ಧಿ ಕೆಲಸಕಾರ್ಯಗಳು ನೆರವಾಗಿವೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ನಂಜನಗೂಡು ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಛಲವಾದಿ ಮಹಾಸಭಾದಿಂದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಜಯಂತೋತ್ಸವ ಅಂಗವಾಗಿ ಆಯೋಜಿಸಿದ್ದ ನಾಲ್ವಡಿ ಸಾಧನೆಗಳ ಸ್ಮರಣೆ, ವಿಚಾರ ಸಂಕಿರಣ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶೈಕ್ಷಣಿಕ ವ್ಯಾಸಂಗದ ಅವಧಿಯಲ್ಲಿ ಶಿಸ್ತಿನ ಜೀವನ ರೂಢಿಸಿಕೊಳ್ಳುವುದರಿಂದ ಭವಿಷ್ಯದ ಸಾಧನೆಗೆ ಸಹಕಾರಿಯಾಗಲಿದೆ. ಬೇರೆಯವರಿಗೋಸ್ಕರ ಮಾಡುವ ಕೆಲಸವೇ ಅತ್ಯಂತ ತೃಪ್ತಿದಾಯಕ ಕಾರ್ಯವಾಗಿದ್ದು, ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ಆಸೆ ಆಕಾಂಕ್ಷೆಗಳಿದ್ದರೂ ತಮ್ಮ ಕೌಟುಂಬಿಕ ಕಾಳಜಿಯೊಂದಿಗೆ ಸರ್ವರ ಒಳಿತಿಗಾಗಿ ಸಮಾಜಮುಖಿ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕಿದೆ.
ಇನ್ನು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಯುತಗೊಳಿಸುವ ಸಲುವಾಗಿ ಪ್ರತಿಯೊಬ್ಬರೂ ರಾಜಕೀಯದಲ್ಲಿ ಭಾಗವಹಿಸಬೇಕಿದ್ದು, ಜನಸೇವೆಗೆ ಅರ್ಹರಾದ ಸಮರ್ಥರನ್ನು ನಮ್ಮ ಚುನಾಯಿತ ಪ್ರತಿನಿಧಿ ಯನ್ನಾಗಿ ಕಳುಹಿಸುವ ಮೂಲಕ ಆಡಳಿತದಲ್ಲಿ ಪ್ರತಿಯೊಬ್ಬರೂ ಭಾಗಿದಾರರಾಗಬೇಕು. ದಕ್ಷಿಣ ಕಾಶಿ ಪ್ರಸಿದ್ದಿಯ ನಂಜನಗೂಡು ಐತಿಹಾಸಿಕವಾಗಿ ಮಹತ್ವದ ಸ್ಥಾನವನ್ನು ಪಡೆದಿದ್ದು ಉತ್ತರದ ಗಂಗೆ ಮಾದರಿಯಲ್ಲಿ ದಕ್ಷಿಣದ ಕಪಿಲಾ ನದಿಯಲ್ಲಿ ಜನರು ಪುಣ್ಯಸ್ನಾನ ಮಾಡಿ ಕಾಶಿ ವಿಶ್ವನಾಥನ ಪ್ರತೀಕವಾಗಿರುವ ಶ್ರೀಕಂಠೇಶ್ವರಸ್ವಾಮಿ ದರ್ಶನ ಪಡೆದುಕೊಳ್ಳುತ್ತಾರೆ. ಹೀಗಾಗಿ ನಂಜನಗೂಡಿನ ಸಮಗ್ರ ಅಭಿವೃದ್ಧಿಗೆ ಎಲ್ಲರೂ ಶ್ರಮಿಸೋಣ,’ ಎಂದು ಹೇಳಿದರು.
ಇತಿಹಾಸ ಸಂಶೋಧಕ ಧರ್ಮೇಂದ್ರ ಮಾತನಾಡಿ, ‘ಮೈಸೂರು ನಗರವಾಗಿ ನಿರ್ಮಾಣವಾಗಲು ಅರಸ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ದೂರದೃಷ್ಟಿಯ ಆಡಳಿತ ನೆರವಾಗಿದ್ದು ತಮ್ಮ ಆಡಳಿತಾವಧಿಯಲ್ಲಿ ಜನೋಪಯೋಗಿ ಜಾರಿಗೊಳಿಸಿದ ಸದಾಕಾಲಕ್ಕೂ ಭವ್ಯವಾದ ಕೊಡುಗೆಯನ್ನು ನೀಡಿದ್ದಾರೆ. ನೂರಾರು ಯೋಜನೆಗಳನ್ನು ನಾಲ್ವಡಿ ಅರಸರು ಜನಮಾನಸದಲ್ಲಿ ಉಳಿಯಲಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭ ನಮ್ಮ ನಾಲ್ವಡಿ ನಮ್ಮ ಹೆಮ್ಮೆ ಭಾಷಣ ಸ್ಪರ್ಧೆ ವಿಜೇತರಿಗೆ ಹಾಗೂ ಒಡೆಯರ್ ಕಪ್ ಕ್ರಿಕೆಟ್ ಪಂದ್ಯಾವಳಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಮಾರಂಭದಲ್ಲಿ ಅಪರ ಪೊಲೀಸ್ ಅಧೀಕ್ಷಕ ಮಲ್ಲಿಕ್, ಬಿಜೆಪಿ ಜಿಲ್ಲಾಧ್ಯಕ್ಷ ಕುಂಬರಳ್ಳಿ ಸುಬ್ಬಣ್ಣ ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ, ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಅಭಿನಾಗಭೂಷಣ್, ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ವಿದ್ಯಾಸಾಗರ್, ಜನ ಸಂಗ್ರಾಮ ಪರಿಷತ್ ಗೌರವಾಧ್ಯಕ್ಷ ನಗರ್ಲೆ ಎಂ.ವಿಜಯ್ ಕುಮಾರ್ , ದಸಂಸ ತಾಲ್ಲೂಕು ಸಂಚಾಲಕ ಶಂಕರಪುರ ಸುರೇಶ್, ಪ್ರತಿಧ್ವನಿ ವೇದಿಕೆ ಜಿಲ್ಲಾಧ್ಯಕ್ಷ ತ್ರಿಣೇಶ್, ಛಲವಾದಿ ಮಹಾಸಭಾ ತಾಲ್ಲೂಕು ಅಧ್ಯಕ್ಷ ಉಮೇಶ್ ರಾಜ್, ನಗರಾಧ್ಯಕ್ಷ ರಾಜೇಂದ್ರ ಸೇರಿದಂತೆ ಛಲವಾದಿ ಮಹಾಸಭಾದ ಪದಾಧಿಕಾರಿಗಳು ಹಾಜರಿದ್ದರು.

