ಮೈಸೂರು : ಭಾರತ ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆ ವಿಚಾರವಾಗಿ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಪೆಹಲ್ಗಾಮ್ ನಲ್ಲಿ ನಡೆದ ಘಟನೆಗೆ ಈಗಾಗಲೇ ಪ್ರಧಾನಿ ನರೇಂದ್ರಮೋದಿ ಸೂಕ್ತ ಪ್ರತಿಕ್ರಿಯೆ ನೀಡಿದ್ದಾರೆ. 9 ಭಯೋತ್ಪಾದಕ ಶಿಬಿರಗಳನ್ನು ಗುರ್ತಿಸಿ ದಾಳಿ ಮಾಡಿ ಪ್ರತೀಕಾರ ತೀರಿಸಿಕೊಂಡಿದ್ದಾರೆ. ಪಾಕಿಸ್ತಾನ ಏನೇ ಪ್ರಯತ್ನ ಮಾಡಿದರೂ ಅವರ ಪ್ರಯತ್ನಗಳನ್ನು ಮೊಟುಕುಗೊಳಿಸುವ ಕೆಲಸವನ್ನು ಭಾರತ ಸರ್ಕಾರ ಮಾಡೀಯೇ ತೀರುತ್ತದೆ.

ಪಾಕಿಸ್ತಾನದ ಎಲ್ಲಾ ಪ್ರಯತ್ನಗಳು ವಿಫಲವಾಗಿವೆ. ಭಯೋತ್ಪಾದನೆಗೆ ಅವಕಾಶ ಕೊಡದೆ ವಿಶ್ವದಾದ್ಯಂತ ಉಗ್ರವಾದ ತೊಲಗಿಸಬೇಕು. ಪಾಕಿಸ್ತಾನೀಯರು ಅವರ ಕೃತ್ಯಗಳನ್ನು ನಿಲ್ಲಿಸಿದರೆ ಮಾತ್ರ ವಿಶ್ವದಲ್ಲಿ ಶಾಂತಿ ಕಾಣಬಹುದು.

ಕಳೆದ ಏಪ್ರಿಲ್ 26 ನೇ ತಾರೀಕಿನಂದು ನಡೆದ ಘಟನೆ ಎಲ್ಲರಿಗೂ ಗೊತ್ತಿದೆ. ಹಿಂದೂಗಳನ್ನೇ ಗುರುತಿಸಿ ಕೊಂದದ್ದನ್ನು ನಾವೆಲ್ಲರೂ ಗಮನಿಸಿದ್ದೇವೆ. ನಾವು ಅವರಿಗೆ ಸರಿಯಾದ ರೀತಿಯಲ್ಲೇ ಉತ್ತರ ನೀಡಿದ್ದೇವೆ. ನಾವೇನು ಸೇಡಿನ ಯುದ್ಧ ನಡೆಸಿಲ್ಲ, ಬದಲಾಗಿ ನಿಖರವಾಗಿ ಉಗ್ರರನ್ನೇ ಗುರುತಿಸಿ ಯುದ್ಧ ಮಾಡಿದ್ದೇವೆ. ಭಾರತೀಯ ಸಂಸ್ಕೃತಿಗೆ ತಕ್ಕಂತೆ ಸರ್ಕಾರ ಉತ್ತರ ನೀಡಿದೆ. ಅಮಾಯಕರ ಸಾವಿಗೆ ನ್ಯಾಯ ಒದಗಿಸುವ ಕೆಲಸವನ್ನು ಭಾರತ ಸರ್ಕಾರ ಮಾಡಿದೆ.

ಯುದ್ಧದ ಕ್ರೆಡಿಟ್ ಸೇನೆಗೆ ಸಲ್ಲಬೇಕು ಎಂದು ಕಾಂಗ್ರೆಸ್ ನಾಯಕರು ವಾದ ಮಾಡುತ್ತಿರುವ ವಿಚಾರವಾಗಿ, ಖಂಡಿತವಾಗಿಯೂ ಕ್ರೆಡಿಟ್ ಸೈನಿಕರಿಗೆ ಸಲ್ಲಬೇಕು, ಜೊತೆಗೆ ಯುದ್ಧದ ತಂತ್ರ ರೂಪಿಸಿದ ಕೇಂದ್ರ ಸರ್ಕಾರಕ್ಕೂ ಸಲ್ಲಬೇಕು. ಇದರಲ್ಲಿ ರಾಜಕೀಯ ಮಾಡುವ ಅಗತ್ಯವಿಲ್ಲ. ನಾವು ರಾಜಕೀಯ ಮಾಡ್ತಿಲ್ಲ ಕಾಂಗ್ರೆಸ್ ನವರಿಗೆ ಸಂದೇಶ ಕೊಡುವ ಸ್ಥಾನದಲ್ಲೂ ನಾನಿಲ್ಲ..! ಇಂತಹ ಪರಿಸ್ಥಿತಿಯಲ್ಲಿ ಎಲ್ಲರೂ ಒಗ್ಗಟ್ಟಾಗಿರಬೇಕು, ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಕೈಜೋಡಿಸಿ ನಿಲ್ಲಬೇಕು.

ಇನ್ನು ಯುದ್ಧದ ಕದನ ವಿರಾಮದ ಬಗ್ಗೆ ಸೈನ್ಯದ ಸಶಸ್ತ್ರ ಪಡೆಯ ನಾಯಕರ ಆದೇಶದಂತೆ ಸೀಜ್ ಫೈಯರ್ ಮಾಡಲಾಗಿದೆ. ಇಂದಿರಾ ಗಾಂಧಿ ಮತ್ತು ನರೇಂದ್ರ ಮೋದಿ ನಡೆ ಕುರಿತು ಚರ್ಚೆ ವಿಚಾರವಾಗಿ,  ಅಂದಿನ ಕಾಲಕ್ಕೆ ತಕ್ಕಂತೆ ಇಂದಿರಾ ಗಾಂಧಿ ಕೆಲಸ ನಿರ್ವಹಿಸಿದ್ದಾರೆ. ಇಂದಿನ ಕಾಲಕ್ಕೆ ತಕ್ಕಂತೆ ನರೇಂದ್ರ ಮೋದಿ ಅವರ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಈ ವಿಚಾರದಲ್ಲಿ ಇಂದಿರಾಗಾಂಧಿ ಹಾಗು ನರೇಂದ್ರ ಮೋದಿ ಅವರನ್ನು ಹೋಲಿಕೆ ಮಾಡಿ ಮಾತನಾಡೋದು‌ ಸರಿಯಲ್ಲ. ಮೈಸೂರಿನಲ್ಲಿ ನಡೆಯಲಿರುವ ತಿರಂಗ ಯಾತ್ರೆಯಲ್ಲಿ ನಾನು ಸಹ ಭಾಗಿಯಾಗಲಿದ್ದೇನೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.