ನಂಜನಗೂಡು: ಕನಕ ಜಯಂತೋತ್ಸವ ಆಚರಣಾ ಸಮಿತಿಯ ನಂಜನಗೂಡು ತಾಲ್ಲೂಕು ಅಧ್ಯಕ್ಷರಾಗಿ ತಾಂಡವಪುರ ಮೋಹನ್ ಕುಮಾರ್ ಆಯ್ಕೆಯಾಗಿದ್ದಾರೆ.

ನಂಜನಗೂಡು ನಗರದ ಪ್ರವಾಸಿ ಮಂದಿರದಲ್ಲಿ ಮುಖಂಡರ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ತಾಂಡವಪುರ ಮೋಹನ್ ಕುಮಾರ್ ಅವರನ್ನು ಸಮಾಜದ ಮುಖಂಡರು ಅವಿರೋಧವಾಗಿ ಆಯ್ಕೆ ಮಾಡಿದರು. ಭಕ್ತ ಕನಕದಾಸರ ಜಯಂತೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲು ಸಭೆಯಲ್ಲಿ ನಿರ್ಧಾರ ಮಾಡಲಾಯಿತು.

ನಂತರ ಬದನವಾಳು ಗ್ರಾ.ಪಂ ಮಾಜಿ ಅಧ್ಯಕ್ಷ ಕುಳ್ಳಯ್ಯ ಮಾತನಾಡಿ, ನ.8 ರಂದು ಕನಕದಾಸರ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಲಾಗುವುದು. ಈ ವರ್ಷ ಅದ್ದೂರಿಯಾಗಿ ಕನಕದಾಸರ ಜಯಂತಿಯನ್ನು ಆಚರಣೆ ಮಾಡಲು ತೀರ್ಮಾನ ತೆಗೆದುಕೊಂಡಿದ್ದೇವೆ. ಅದರಂತೆ ಜಯಂತೋತ್ಸವ ಸಮಿತಿಗೆ ಅಧ್ಯಕ್ಷರಾಗಿ ತಾಂಡವಪುರ ಮೋಹನ್ ಕುಮಾರ್ ಅವರನ್ನು ಆಯ್ಕೆ ಮಾಡಿಕೊಂಡಿದ್ದೇವೆ.

ಹೋಬಳಿ ಮಟ್ಟದಲ್ಲೂ ಸಮಿತಿಗೆ ಸದಸ್ಯರು ಮತ್ತು  ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಂಡು ಶಾಸಕರಾದ ದರ್ಶನ್ ಧ್ರುವನಾರಾಯಣ್ ರವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಶಾಸಕರು ಮತ್ತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಜಯಂತೋತ್ಸದ ದಿನಾಂಕವನ್ನು ನಿಗದಿ ಮಾಡಿ, ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.‌

ಜಯಂತಿ ಕಾರ್ಯಕ್ರಮಕ್ಕೆ ಪಕ್ಷಾತೀತವಾಗಿ ಎಲ್ಲರನ್ನು ಆಹ್ವಾನಿಸಿ ಪ್ರತಿ ಗ್ರಾಮಕ್ಕೂ ಹೋಗಿ ಆಹ್ವಾನ ನೀಡುತ್ತೇವೆ. ಸಮಾಜದ ಜನರನ್ನು ಸಂಘಟನೆ ಮಾಡಿ ಈ ಬಾರಿ ಅದ್ದೂರಿಯಾಗಿ ಕನಕದಾಸರ ಜಯಂತಿಯನ್ನು ಆಚರಿಸುತ್ತೇವೆ. ಮುಖ್ಯಮಂತ್ರಿಗಳ ಬದಲಾವಣೆ ಊಹಾಪೋಹ. ಬದಲಾವಣೆ ಬಗ್ಗೆ ಹೈಕಮಾಂಡ್ ಹೇಳಿಲ್ಲ. ಹಾಗಾಗಿ ಯಾರೇ ಸಿಎಂ ಆದ್ರು ನಾವು ಕಾರ್ಯಕ್ರಮಕ್ಕೆ ಕರೆಯುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ  ನಗರಸಭಾ ಸದಸ್ಯರಾದ ಗಂಗಾಧರ್, ಪ್ರದೀಪ್, ಹಂಗಾಮಿ ಅಧ್ಯಕ್ಷರಾದ ಕೆಂಪಣ್ಣ, ಸೋಮಶೇಖರ್, ತಗಡೂರು ಶಾಂತಲಾ, ಗೀಕಹಳ್ಳಿ ಸೋಮಣ್ಣ, ಮಹೇಶ್, ಶಿವಸ್ವಾಮಿ, ಅಳಗಂಚಿಪುರ ದೊಡ್ಡಯ್ಯ, ಹಾಲುಮತ ಮಹಾಸಭಾದ ಅಧ್ಯಕ್ಷ ಕುಮಾರ್ ಗೌಡ, ಜಿಲ್ಲಾ ಯುಥ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಯಚಂದ್ರ, ಕನಕದಾಸ ಯುವಕರ ಸಂಘದ ಅಧ್ಯಕ್ಷ ಶಿವಕುಮಾರ್, ಸಿದ್ದರಾಜು ಬಿಎಸ್, ಮಹೇಶ್ ರಾಯಣ್ಣ, ಪ್ರಭು , ಕೈಲಾಸ್ ಸೇರಿದಂತೆ ಹಲವರು ಭಾಗವಹಿಸಿದ್ದರು.