ನಂಜನಗೂಡು: ಈ ಮೊದಲು ಜಾನುವಾರು ಪ್ರಾಂಗಣದಲ್ಲಿ ವಾರದ ಸಂತೆ ನಡೆಯುತ್ತಿತ್ತು. ಕೋವಿಡ್ ಬಂದ ಸಂದರ್ಭದಲ್ಲಿ ಶುಕ್ರವಾರದ ಸಂತೆಯನ್ನು ಸ್ಥಗಿಸಿಗೊಳಿಸಲಾಗಿತ್ತು. ರೈತರ ಬೇಡಿಕೆ ಮೇರೆಗೆ ಇಂದಿನಿಂದ ಶುಕ್ರವಾರದ ಸಂತೆಯನ್ನು ಪ್ರಾರಂಭಿಸಲಾಗಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ತಿಳಿಸಿದರು.

ನಗರದ ಎಪಿಎಂಸಿ ಆವರಣದಲ್ಲಿ ಶುಕ್ರವಾರ ವಾರದ ಸಂತೆಗೆ ಚಾಲನೆ ನೀಡಿ ಮಾತನಾಡಿದರು. ಮಾಜಿ ಶಾಸಕ ಕಳಲೆ ಕೇಶವಮೂರ್ತಿಯವರು ಈ ಹಿಂದೆ ಎಪಿಎಂಸಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಸಾಕಷ್ಟು ಅಭಿವೃದ್ಧಿಗೊಳಿಸಿದ್ದಾರೆ. ಕೃಷಿ ಉತ್ಪನ್ನ ಮಾರುಕಟ್ಟೆ ಅಭಿವೃದ್ಧಿಗೆ ಹಿಂದೆ ಸಾಕಷ್ಟು ಅನುದಾನ ಲಭ್ಯವಿತ್ತು. ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಕಡಿಮೆಯಾಗಿದೆ ಎನ್ನಬಹುದು.

ಶಾಸಕನಾದ ಸಂದರ್ಭದಲ್ಲಿ ವಾರದ ಸಂತೆಯನ್ನು ಆರಂಭಿಸುವ ಯೋಚನೆ ಬಂದಿತ್ತು. ಈ ಬಾರಿ ನಡೆಯುವ ದೊಡ್ಡ ಜಾತ್ರೆ ಅಂಗವಾಗಿ ಪ್ರಾರಂಭಗೊಳಿಸಲಾಗಿದೆ. ಇಂದು ಮೊದಲ ಸಂತೆಯಾಗಿರುವ ಕಾರಣ ರೈತರಿಗೆ ಸರಿಯಾದ ಮಾಹಿತಿ ಸಿಗದೆ ಕಡಿಮೆ ಸಂಖ್ಯೆಯಲ್ಲಿ ಬಂದಿದ್ದಾರೆ. ಮುಂದಿನ ವಾರಗಳಲ್ಲಿ ವ್ಯವಸ್ಥಿತವಾಗಿ ಸಂತೆಯನ್ನು ಆಯೋಜನೆ ಮಾಡಲಾಗುವುದು ಎಂದರು.

ನಂತರ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ, ಸುಮಾರು 14 ಎಕರೆ ಪ್ರದೇಶದಲ್ಲಿ ಮಾರುಕಟ್ಟೆ ಇದೆ. ಪ್ರಾರಂಭದಲ್ಲಿ ನಂಜನಗೂಡಿನಲ್ಲಿ ಸಂತೆ ಹೆಜ್ಜೆಗೆ ಸೇತುವೆಯ ಬಳಿ ನಡೆಯುತ್ತಿತ್ತು. ತದನಂತರ ಜಾನುವಾರು ಸಂತೆಗೆ ಬದಲಾಯಿಸಲಾಯಿತು. ಪ್ರತಿವಾರ ನಡೆಯುವ ಶುಕ್ರವಾರದ ಸಂತೆಗೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆಗಮಿಸಿ ಸದುಪಯೋಗವನ್ನು ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಎಪಿಎಂಸಿ ಆಡಳಿತ ಅಧಿಕಾರಿ ಹಾಗೂ ತಹಶೀಲ್ದಾರ್ ಡಾ. ಸ್ಮಿತಾ ರಾಮು ಮಾತನಾಡಿ, ಇಂದಿನ ಸಂತೆ ನಡೆಯಲು ಹಲವಾರು ಗ್ರಾಮಗಳಿಗೆ ಮಾಹಿತಿ ನೀಡಲಾಗಿತ್ತು. ಮೊದಲ ಸಂತೆಯಾಗಿರುವ ಕಾರಣ ಕಡಿಮೆ ಸಂಖ್ಯೆಯಲ್ಲಿ ರೈತರ ಬಂದಿದ್ದಾರೆ. ಗ್ರಾಹಕರಿಗೆ ನೇರವಾಗಿ ಆಹಾರ ಪದಾರ್ಥಗಳನ್ನು ಖರೀದಿಸಲು ಸಂತೆಗಳು ಸಹಕಾರಿಯಾಗಿವೆ ಎಂದರು.

ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ವಿದ್ಯಾಸಾಗರ್ ಮಾತನಾಡಿ, ಇತ್ತೀಚಿಗೆ ಸಂತೆಗಳು ಮಾಯವಾಗಿ ಮಾಲ್ಗಳು ಹುಟ್ಟಿಕೊಂಡಿವೆ. ಜೊತೆಗೆ ರಾಸಾಯನಿಕಯುಕ್ತ ಬೆಳೆಗಳನ್ನು ಬೆಳೆದಿದ್ದರು ಕೂಡ ಇವುಗಳಿಗೆ ಪ್ರತ್ಯೇಕ ಮಾರುಕಟ್ಟೆ ಇಲ್ಲ. ಇದರಿಂದ ಲಕ್ಷಾಂತರ ರೂ. ನಷ್ಟ ಉಂಟಾಗುತ್ತದೆ. ಬೇರೆ ರಾಜ್ಯಗಳಲ್ಲಿ ನಿಷೇಧ ಮಾಡಿರುವ ಕ್ರಿಮಿನಾಶಕಗಳು ನಮ್ಮ ರಾಜ್ಯದಲ್ಲಿ ಮಾರಾಟ ಆಗುತ್ತಿರುವುದು ಒಂದು ದೊಡ್ಡ ದುರಂತ ಎಂದರು.

ಸಂತೆಗೆ ತಂದಿದ್ದ ಆಹಾರ ಪದಾರ್ಥಗಳು, ಮೂಗುದಾರ, ಹಗ್ಗ ಸೇರಿದಂತೆ ವೈವಿಧ್ಯಮಯ ವಸ್ತುಗಳನ್ನ ಶಾಸಕ ದರ್ಶನ್ ವೀಕ್ಷಣೆ ಮಾಡಿ ಪ್ರತಿವಾರವೂ ಸಂತೆಗೆ ಬಂದು ಮಾರಾಟ ಮಾಡಿ, ನಿಮ್ಮ ಸುತ್ತಮುತ್ತಲಿನ ರೈತರು ಹಾಗೂ ವ್ಯಾಪಾರಗಾರರನ್ನು ಕರೆತನ್ನಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೃಷಿ ಉಪನಿರ್ದೇಶಕರಾದ ಸಂಗೀತ, ಯುವ ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ವಿಜಯಕುಮಾರ್, ಮಲ್ಲಹಳ್ಳಿ ನಾರಾಯಣ, ಸತೀಶ್ ರಾವ್, ಕೆಂಡಗಣ್ಣಪ್ಪ, ರಂಗಸ್ವಾಮಿ, ಶಿವಣ್ಣ, ನಂಜಮಣಿ, ಮಹದೇವಸ್ವಾಮಿ, ಶಿರಸ್ತೇದಾರ್ ರಾಜು ಸೇರಿದಂತೆ ಅಧಿಕಾರಿಗಳು ರೈತರು ಹಾಜರಿದ್ದರು.