ನಂಜನಗೂಡು: ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವುದೇ ನನ್ನ ಮೊದಲ ಆದ್ಯತೆಯಾಗಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು.
ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಅಲ್ಪ ಸಂಖ್ಯಾತರ ಬೀದಿಯ ರಸ್ತೆ ಅಭಿವೃದ್ಧಿ ಕಾಮಗಾರಿ, ಹಲ್ಲರೆ ಗ್ರಾಮದಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ಅಲ್ಪಸಂಖ್ಯಾತರ ಬೀದಿ ರಸ್ತೆ ನಿರ್ಮಾಣ, ಹಗಿನವಾಳು ಗ್ರಾಮದಲ್ಲಿ 25 ಲಕ್ಷ ರೂ ವೆಚ್ಚದ ಅಲ್ಪಸಂಖ್ಯಾತರ ಬೀದಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಮತ್ತು ದೇಬೂರು ಗ್ರಾಮದಲ್ಲಿ 30 ಲಕ್ಷ ರೂ. ಪೌರಕಾರ್ಮಿಕರ ಕಾಲೋನಿ ಮತ್ತು ಹಂದಿ ಜೋಗಿ ಕಾಲೋನಿಯಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಶಾಸಕ ದರ್ಶನ್ ಧ್ರುವನಾರಾಯಣ್ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ಮುಖ್ಯಮಂತ್ರಿಗಳ ವಿಶೇಷ ಅನುದಾನದ ಅಡಿಯಲ್ಲಿ ಅಲ್ಪ ಸಂಖ್ಯಾತರ ಅಭಿವೃದ್ಧಿಗಾಗಿ ನಮ್ಮ ನಂಜನಗೂಡು ಕ್ಷೇತ್ರಕ್ಕೆ ಸುಮಾರು 5 ಕೋಟಿ ರೂ. ಅನುದಾನವನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರಾದ ಜಮೀರ್ ಅಹಮ್ಮದ್ ರವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಹುಲ್ಲಹಳ್ಳಿ ಗ್ರಾಮದಲ್ಲಿ ಈಗಾಗಲೇ ರಸ್ತೆ ಅಭಿವೃದ್ಧಿ ಪಡಿಸಲಾಗುತ್ತಿದೆ.
ಸಿಸಿ ರಸ್ತೆ ಮತ್ತು ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿವೆ. ಹುಲ್ಲಹಳ್ಳಿಯಿಂದ ತಗಡೂರು ಮಾರ್ಗವಾಗಿ ಸಂತೆಮರಳ್ಳಿಗೆ ಉತ್ತಮ ರಸ್ತೆಯಾಗಲಿದೆ. ಹುಲ್ಲಹಳ್ಳಿ ಪಟ್ಟಣಕ್ಕೆ ಹೆಚ್ಚು ಅನುದಾನವನ್ನು ನೀಡುತ್ತಿದ್ದೇವೆ. ಹಂತ ಹಂತವಾಗಿ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡುತ್ತೇವೆ. ಗ್ಯಾರಂಟಿಗಳಿಗೆ ಎಷ್ಟು ಒತ್ತು ನೀಡಿದ್ದೇವೆ ಅಷ್ಟೇ ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡುತ್ತೇವೆ. ನಂಜನಗೂಡಿನ ಸಮಗ್ರ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಗ್ರಾಪಂ ಅಧ್ಯಕ್ಷೆ ದೇವಮ್ಮ, ಹುಲ್ಲಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಕಂಠ ನಾಯಕ, ಉಪ್ಪನಹಳ್ಳಿ ಶಿವಣ್ಣ, ದೇಬೂರು ಅಶೋಕ್, ಪರಶಿವಮೂರ್ತಿ, ಮಹೇಶ್, ಮಹದೇವನಾಯಕ, ಅನ್ಸಾರ್ ಅಹ್ಮದ್, ನಧೀಮ್ ಅಹಮ್ಮದ್ ಸೇರಿದಂತೆ ಹಲವರು ಭಾಗವಹಿಸಿದ್ದರು.

