ನಂಜನಗೂಡು: ರಾಜ್ಯ ಸರ್ಕಾರದಿಂದ ತಾಲ್ಲೂಕಿನ ಅಭಿವೃದ್ಧಿಗೆ ನೂರಾರು ಕೋಟಿ ಹಣ ಬಿಡುಗಡೆಯಾಗುತ್ತಿದೆ. ಅಧಿಕಾರಿಗಳು ಜಾಗೃತಿಯಿಂದ ಕಾರ್ಯನಿರ್ವಹಿಸಿ ಇನ್ನಷ್ಟು ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು.

ನಂಜನಗೂಡು ನಗರದ ತಾಲ್ಲೂಕು ಪಂಚಾಯಿತಿ ಕಛೇರಿಯ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯನ್ನು ಶಾಸಕ ದರ್ಶನ್ ಧ್ರುವನಾರಾಯಣ್ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಇಲಾಖೆಗಳಲ್ಲಿ ನಡೆದಿರುವ ಪ್ರಗತಿಯ ವರದಿಯನ್ನು ಅಧಿಕಾರಿಗಳ ಬಳಿ ಕೇಳಿ ಮಾಹಿತಿ ಪಡೆದುಕೊಂಡರು.

ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕ ಸ್ಮಶಾನ, ಕೆರೆಕಟ್ಟೆಗಳು, ಮತ್ತು ರೈತರು ತಿರುಗಾಡುವ ಜಮೀನಿರುವ ರಸ್ತೆಗಳ ಅಭಿವೃದ್ಧಿಗೆ ಒತ್ತು ನೀಡಬೇಕು. ಒತ್ತುವರಿಯಾಗಿರುವ ಕೆರೆ ಮತ್ತು ರಸ್ತೆಯನ್ನು ಕೂಡಲೇ ತೆರವುಗೊಳಿಸಬೇಕು. ನ್ಯಾಯಾಲಯಗಳಲ್ಲಿರುವ ಪ್ರಕರಣಗಳನ್ನು ಮುಂದೂಡದೇ ಇತ್ಯರ್ಥಪಡಿಸಬೇಕು. ಕಂದಾಯ ಇಲಾಖೆಗೆ ಸಾರ್ವಜನಿಕರು ಆಗಮಿಸಿದಾಗ ವಿಳಂಬ ಮಾಡದೆ ವೇಗವಾಗಿ ಕೆಲಸ ಕಾರ್ಯಗಳು ನಡೆಯಬೇಕು ಎಂದು ತಹಶೀಲ್ದಾರ್ ರವರಿಗೆ ಸೂಚಿಸಿದರು.

ಅಬಕಾರಿ ಅಧಿಕಾರಿಗಳು ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಅಕ್ರಮ ಮದ್ಯೆಕ್ಕೆ ಕಡಿವಾಣ ಹಾಕಬೇಕು. ಹಳ್ಳಿಗಳಿಗೆ ಸರಬರಾಜು ಮಾಡುವ ಬಾರ್ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಆಗ ಮಾತ್ರ ಅಕ್ರಮ ಮದ್ಯೆ ತಡೆಯಲು ಸಾಧ್ಯ ಎಂದರು. ನೀರಾವರಿ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಹೆಗ್ಗಿಲ್ಲದೆ ಅಕ್ರಮ ಮಣ್ಣು ಮಾರಾಟದ ದಂಧೆ ನಡೆಯುತ್ತಿದೆ. ಯಾಕಾಗಿ ಅಧಿಕಾರಿಗಳು ಪ್ರಕರಣ ದಾಖಲಿಸಿಲ್ಲ ಕ್ರಮಕ್ಕೆ ಮುಂದಾಗಿಲ್ಲ ಎಂದು ನೀರಾವರಿ ಇಲಾಖೆ ಇಂಜಿನಿಯರ್ ದರ್ಶನ್ ಎಂಬುವರಿಗೆ ಪ್ರಕರಣ ದಾಖಲಿಸಬೇಕು ಎಂದು ತಿಳಿಸಿದರು.

ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯಲ್ಲಿ ಸಾಕಷ್ಟು ಸಮಸ್ಯೆಗಳು ಕಂಡು ಬಂದಿದೆ. ಜಲಜೀವನ್ ಮಿಷನ್ ಎಂಬ ಯೋಜನೆಯ ಬಗ್ಗೆ ಮಾತನಾಡಲು ಸಾಧ್ಯವಾಗದಂತಹ ಮಟ್ಟಕ್ಕೆ ಸಮಸ್ಯೆಗಳಾಗಿ ಮಾರ್ಪಾಡಾಗಿದೆ. 2017 ರಲ್ಲಿ ಪ್ರಾರಂಭವಾದ ಕೆರೆಗೆ ನೀರು ತುಂಬಿಸುವ ಯೋಜನಯ ಕಾಮಗಾರಿ ಇನ್ನೂ ಕೂಡ ಮುಗಿದಿಲ್ಲ. ಒಂದು ತಿಂಗಳ ಒಳಗಾಗಿ ಕಾಮಗಾರಿಗೆ ಚಾಲನೆ ನೀಡಬೇಕು‌.

ನಂಜುಂಡೇಶ್ವರನ ಬೆಳ್ಳಿರಥ ಯೋಜನೆಯನ್ನು ಯಾವಾಗ ಕಲ್ಪಿಸಿ ಕೊಡುತ್ತೀರಿ ಇನ್ನೆಷ್ಟು ತಿಂಗಳುಗಳು ಬೇಕು ನಿಮಗೆ ಎಂದು ದೇವಾಲಯದ ಅಧಿಕಾರಿಗಳನ್ನು ಜಾಲಾಡಿದರು. ದೊಡ್ಡ ಜಾತ್ರೆ ಆಗಿರುವ ದಿನಾಂಕವನ್ನೇ ನೆನಪಿನಲ್ಲಿಟ್ಟುಕೊಳ್ಳದೆ ತಬ್ಬಿಬಾದ ಅಧಿಕಾರಿಗಳು ಪ್ರಗತಿ ಪರಿಶೀಲನ ಸಭೆಯಲ್ಲಿ ನಗೆ ಪಾಟಲಿಗೆ ಈಡಾದರೂ.

ಇನ್ನು ಅನೇಕ ಇಲಾಖೆಯ ಪ್ರಗತಿ ವರದಿಗಳನ್ನು ಪರಿಶೀಲಿಸಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಜಾಗೃತಿಯಿಂದ ಮತ್ತು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಅಧಿಕಾರಿಗಳಿಗೆ ಎಚ್ಚರಿಸಿದರು. ಕೆಡಿಪಿ ಸಭೆಯಲ್ಲಿ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜೆರಾಲ್ಡ್ ರಾಜೇಶ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಕೆ.ಮಾರುತಿ, ನಗರಸಭಾ ಅಧ್ಯಕ್ಷ ಶ್ರೀಕಂಠ, ಟಿಎಪಿಸಿಎಂಎಸ್ ಅಧ್ಯಕ್ಷ ಕುರಹಟ್ಟಿ ಮಹೇಶ್, ಹಗಿನವಾಳು ಚೆನ್ನಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಕೆಡಿಪಿ ಸಭೆಗೆ ಗೈರಾದ ಡಾ.ಯತೀಂದ್ರ ಸಿದ್ದರಾಮಯ್ಯ
ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಸಭೆಗೆ ಗೈರಾಗಿದ್ದರು. ವರುಣ ವಿಧಾನಸಭಾ ಕ್ಷೇತ್ರದ ಗ್ರಾಮಗಳ ಅಭಿವೃದ್ಧಿಯಲ್ಲಿ ಪ್ರಗತಿಯಾಗಿರುವ ವಿಚಾರವನ್ನು ತಾಲ್ಲೂಕು ಮಟ್ಟದ ಅಧಿಕಾರಿಗಳಿಂದ ವರದಿ ಕೇಳಿ ಪರಿಶೀಲಿಸಬೇಕಾಗಿತ್ತು. ಸಭೆಗೆ ಗೈರಾಗಿರುವುದು ವರುಣ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ನಿರಾಳ ಎನಿಸಿತು.