ಮೈಸೂರು: ಬೆಳಗಾವಿಯ ಸುವರ್ಣ ವಿಧಾನಸೌಧದ ಚಳಿಗಾಲದ ಅಧಿವೇಶನದಲ್ಲಿ ನಂಜನಗೂಡು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕಾಡಂಚಿನ ಗ್ರಾಮವಾದ ಹೆಡಿಯಾಲದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಮರ್ಪಕ ಚಿಕಿತ್ಸೆ ಸಿಗದೆ ಸ್ಥಳೀಯ ನಿವಾಸಿಗಳು ಗಂಭೀರ ತೊಂದರೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ, ಅದನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ (CHC) ಉನ್ನತೀಕರಿಸುವಂತೆ ಶಾಸಕ ದರ್ಶನ್ ಧ್ರುವನಾರಾಯಣ್ ರವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಗಮನ ಸೆಳೆದರು.
ಹೆಡಿಯಾಲ ಹಾಗೂ ಸುತ್ತಮುತ್ತಲಿನ ಗ್ರಾಮ ಪಂಚಾಯತಿಗಳು ಕಾಡಂಚಿನ ಪ್ರದೇಶವಾಗಿದ್ದು, ಇಲ್ಲಿ ಮಾನವ–ಪ್ರಾಣಿ ಸಂಘರ್ಷ, ರೈತರ ಸಮಸ್ಯೆಗಳು ಸೇರಿದಂತೆ ಹಲವು ಗಂಭೀರ ಸವಾಲುಗಳು ನಿರಂತರವಾಗಿ ಎದುರಾಗುತ್ತಿವೆ. ತುರ್ತು ಆರೋಗ್ಯ ಸೇವೆಗಳ ಅವಶ್ಯಕತೆ ಹೆಚ್ಚಾಗಿರುವ ಈ ಪ್ರದೇಶದ ಜನರು ಚಿಕಿತ್ಸೆಗಾಗಿ ನಂಜನಗೂಡು ಪಟ್ಟಣಕ್ಕೆ ದೂರ ಪ್ರಯಾಣ ಮಾಡಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಇದರಿಂದ ವಿಶೇಷವಾಗಿ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಅಪಾರ ತೊಂದರೆ ಉಂಟಾಗುತ್ತಿದೆ.
ನಮ್ಮ ತಾಲ್ಲೂಕಿನಲ್ಲಿ ಈಗಾಗಲೇ ಹುಲ್ಲಹಳ್ಳಿ ಹಾಗೂ ತಗಡೂರುಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಿದ್ದು, ಇನ್ನೊಂದು ಕೇಂದ್ರ ಸ್ಥಾಪಿಸುವ ಅವಕಾಶ ಇರುವ ಹಿನ್ನೆಲೆಯಲ್ಲಿ ಹೆಡಿಯಾಲ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಉನ್ನತೀಕರಿಸಿದಲ್ಲಿ, ಕಾಡಂಚಿನ ಪ್ರದೇಶದ ಜನರು ಹಾಗೂ ರೈತರಿಗೆ ಅನುಕೂಲವಾಗಲಿದೆ ಎಂದು ಸಚಿವರಲ್ಲಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಆರೋಗ್ಯ ಸಚಿವರ ಪರವಾಗಿ ಮಾನ್ಯ ಅರಣ್ಯ ಮತ್ತು ಪರಿಸರ ಸಚಿವರಾದ ಈಶ್ವರ್ ಖಂಡ್ರೆ ಅವರು, ಮನವಿಗೆ ಸಾಕಾರಾತ್ಮಕವಾಗಿ ಸ್ಪಂದಿಸಿ, ಮುಂದಿನ ವರ್ಷ ಮೇಲ್ ದರ್ಜೆಗೆ ತೆಗೆದುಕೊಂಡು ಉನ್ನತೀಕರಣ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಸರ್ಕಾರದ ವತಿಯಿಂದ ಭರವಸೆ ನೀಡಿದರು.

