ನಂಜನಗೂಡು: ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಸಿಂಧುವಳ್ಳಿ ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ದರ್ಶನ್ ಧ್ರುವನಾರಾಯಣ್ ಗುದ್ದಲಿ ಪೂಜೆ ನೆರವೇರಿಸಿದರು.
ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರ ಅಹವಾಲುಗಳನ್ನು ಸ್ವೀಕರಿಸಿ ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿ, ಸಿಂಧುವಳ್ಳಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ 44 ಲಕ್ಷ ರೂ. ವೆಚ್ಚದಲ್ಲಿ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದೇವೆ.
ಇದರೊಂದಿಗೆ ಗ್ರಾಮದಲ್ಲಿ ಕುಡಿಯುವ ನೀರು, ಕಾಂಕ್ರಿಟ್ ರಸ್ತೆ, ವಿದ್ಯುತ್ ಕಂಬ ಇತ್ಯಾದಿ ಹಲವು ಬೇಡಿಕೆಗಳನ್ನು ಗಮನಕ್ಕೆ ತಂದಿದ್ದೀರಿ, ಈ ಸಮಸ್ಯೆಗಳನ್ನು ತ್ವರಿತ ಗತಿಯಲ್ಲಿ ಬಗೆಹರಿಸುತ್ತೇನೆ. ಗ್ರಾಮದ ಯಾವುದೇ ಸಮಸ್ಯೆ ಇರಲಿ, ತಾವುಗಳು ನನ್ನನ್ನು ಭೇಟಿ ಮಾಡಿ ಗಮನಕ್ಕೆ ತಂದರೆ ಅದನ್ನು ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಒಣಕಾರ್ ನಾಯಕ, ಉಪಾಧ್ಯಕ್ಷೆ ಲತಾ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಂ.ಬಿ. ಶಬಾನಾ, ಗ್ರಾ.ಪಂ ಸದಸ್ಯರಾದ ಮಣಿಂಠ, ಕುಮಾರ, ಗುರುಪ್ರಸಾದ್, ಸ್ವಾಮಿ , ಶಾಂತಮಲ್ಲು, ಸಿದ್ದರಾಜು, ನಾಗಮ್ಮ, ಸುಮ ಸೇರಿದಂತೆ ಹಲವರು ಭಾಗವಹಿಸಿದ್ದರು.

