ನಂಜನಗೂಡು: ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕದ್ದು ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ನಂಜನಗೂಡಿನಲ್ಲಿ ಬೆಳಕಿಗೆ ಬಂದಿದೆ.

ಕೆಲ ದಿನಗಳ ಹಿಂದೆ ಯುವಕನೊಬ್ಬನ ಸಜೀವ ದಹನ ಪ್ರಕರಣ ನಡೆದ ಸಮೀಪವೇ ಬೈಕ್ ಗೆ ಬೆಂಕಿ ಹಚ್ಚಲಾಗಿದೆ. ನಂಜನಗೂಡು ಪಟ್ಟಣದ ಮಹದೇಶ್ವರ ಬಡಾವಣೆಯಲ್ಲಿ ಕಳ್ಳತನವಾಗಿದ್ದ ದ್ವಿಚಕ್ರ ವಾಹನ ಬೆಂಕಿಗೆ ಆಹುತಿಯಾಗಿದೆ.

ಮಹದೇಶ್ವರ ಬಡಾವಣೆಯ ಸುರೇಶ್ ಎಂಬುವರಿಗೆ ಸೇರಿದ ದ್ವಿಚಕ್ರ ವಾಹನ ಕೆಎ 09 ಎಚ್ ಎ 1155 ಪಲ್ಸರ್ ಬೈಕ್ ಸುಟ್ಟು ಕರುಕಲಾಗಿದೆ. ನಂಜನಗೂಡಿನ ನೆಸ್ಲೆ ಕಾರ್ಖಾನೆಯಲ್ಲಿ ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ಸುರೇಶ್. ಮನೆಯ ಮುಂಭಾಗದಲ್ಲಿ ನಿಲ್ಲಿಸಿದ ಪಲ್ಸರ್ ಬೈಕ್ ರಾತ್ರೋರಾತ್ರಿ ಕಳ್ಳತನವಾಗಿತ್ತು. ಬೆಳಗಾಗುವುದರೊಳಗೆ ಕೊರೆಹುಂಡಿ ಸಮೀಪದ ಹುಲ್ಲಹಳ್ಳಿ ನಾಲೆಯ ಬಳಿ ಸುಟ್ಟು ಕರಕಲಾಗಿದೆ.

ನಂಜನಗೂಡು ಪಟ್ಟಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳೆದ ವಾರ ಇದೇ ಸ್ಥಳದಲ್ಲಿ ಯುವಕನೊಬ್ಬ ಬೈಕ್ ಸಮೇತ ಸಜೀವ ದಹನವಾಗಿದ್ದ ಪ್ರಕರಣ ಮಾಸುವ ಮುನ್ನ ಘಟನೆ ನಡೆದಿರುವುದು ನಂಜನಗೂಡಿನ ಜನತೆಗೆ ಆತಂಕ ತಂದಿದೆ.

ದ್ವಿಚಕ್ರ ವಾಹನವನ್ನು ಸುಟ್ಟ ವಿಚಾರವಾಗಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಕಿಡಿಗೇಡಿಗಳನ್ನು ಬಂಧಿಸುತ್ತೇವೆ ಎಂದು ನಂಜನಗೂಡು ಪಟ್ಟಣ ಪೊಲೀಸರು ಭರವಸೆ ನೀಡಿದ್ದಾರೆ.