ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಮನೆ ಮುಂದೆ ನಿಲ್ಲಿಸಿದ ಎರಡು ಕಾರುಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ನಂಜನಗೂಡು ಪಟ್ಟಣದಲ್ಲಿ ನಡೆದಿದ್ದು, ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ.

ನಂಜನಗೂಡು ನಗರದ ಶ್ರೀರಾಂಪುರ ಬಡಾವಣೆಯಲ್ಲಿರುವ ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಅಭಿನಾಗಭೂಷಣ್ ಮತ್ತು 5ನೇ ಕ್ರಾಸ್ ನಲ್ಲಿರುವ ಸಂತೋಷ್ ಎಂಬುವವರ ಕಾರಿಗೆ ಮಧ್ಯರಾತ್ರಿ ಏಕಕಾಲದಲ್ಲಿ ಪೆಟ್ರೋಲ್ ಸುರಿದು ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಹೊತ್ತಿ ಉರಿಯುತ್ತಿದ್ದ ಕಾರನ್ನು ಕಂಡು ಅಕ್ಕಪಕ್ಕದ ನಿವಾಸಿಗಳು ನೀರು ಎರಚಿ ಬೆಂಕಿಯನ್ನು ನಂದಿಸಿ ಅನಾಹುತವನ್ನು ತಪ್ಪಿಸಿದ್ದಾರೆ.

ಕಾರುಗಳಿಗೆ ಬೆಂಕಿ ಹಾಕಿದ ಪರಿಣಾಮ ಸುಟ್ಟು ಕರಕಲಾಗಿವೆ. ನಂಜನಗೂಡಿನಲ್ಲಿ ಗಾಂಜಾ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಗಾಂಜಾ ವ್ಯಾಪಕವಾಗಿ ಹರಡುತ್ತಿದ್ದು, ಜಾಲವನ್ನು ಪೊಲೀಸರು ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದಾರೆ. ಗಾಂಜಾದ ನಶೆಯಲ್ಲಿ ಈ ಕೃತ್ಯಗಳು ನಡೆಯುತ್ತಿವೆ. ಪಟ್ಟಣದಲ್ಲಿ ದಿನನಿತ್ಯ ಕೊಲೆ, ಸುಲಿಗೆ, ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಂಜನಗೂಡಿನಲ್ಲಿ ಬೀಟ್ ಪೊಲೀಸ್ ಇಲ್ಲದೆ ಇಂತಹ ಘಟನೆಗಳು ನಡೆಯುತ್ತಿವೆ. ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ದುಷ್ಕರ್ಮಿಗಳಿಗೆ ಎಡೆಮುರಿ ಕಟ್ಟಬೇಕಿದೆ. ಕೂಡಲೇ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಬಂಧಿಸಬೇಕು ಎಂದು ಸಂಘಟನೆಯ ಮುಖಂಡರು ಆಗ್ರಹಿಸಿದ್ದಾರೆ. ಈ ಸಂಬಂಧ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.