ನಂಜನಗೂಡು: ಆರ್ ಎಸ್ ಎಸ್ ಗೆ ನೂರು ವರ್ಷ ತುಂಬಿದೆ. ದೇಶ ಸೇವೆ ಮಾಡುವ ಸಂಘಟನೆಯನ್ನು ನಿಷೇಧ ಮಾಡಬೇಕು ಎನ್ನುವ ಸಚಿವ ಪ್ರಿಯಾಂಕ ಖರ್ಗೆ ಹೇಳಿಕೆ ಹಾಸ್ಯಾಸ್ಪದ ಎಂದು ಮಾಜಿ ಶಾಸಕ ಬಿ.ಹರ್ಷವರ್ಧನ್ ತಿಳಿಸಿದರು.

ನಂಜನಗೂಡು ನಗರದ ಬಿಜೆಪಿ ಕಛೇರಿಯಲ್ಲಿ ಸೋಮವಾರ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಆರ್ ಎಸ್ ಎಸ್ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಇತಿಹಾಸ ತಿಳಿದಿಲ್ಲ ಅನಿಸುತ್ತದೆ. ರಾಷ್ಟ್ರ ಮತ್ತು ರಾಷ್ಟ್ರೀಯತೆ ಬಗ್ಗೆ ಆರ್ ಎಸ್ಎಸ್ ಮಾತನಾಡುತ್ತಾರೆ. ಹೊರತು ಮಸೀದಿಯಲ್ಲಿ ನಡೆಯುವ ಭಯೋತ್ಪಾದನೆ ರೀತಿ ಅವರು ಮಾಡ್ತಾ ಇಲ್ಲ. ಸಚಿವ ಸಂಪುಟದಲ್ಲಿ ನನ್ನನ್ನು ಕೈ ಬಿಡುತ್ತಾರೆ ಅಂತ ಪ್ರಿಯಾಂಕ ಖರ್ಗೆ ಅವರು ಈ ವಿಚಾರವನ್ನು ತೆಗೆದುಕೊಂಡಿದ್ದಾರೆ.

ಸರ್ಕಾರಕ್ಕೆ ಎರಡುವರೆ ವರ್ಷ ಆಗಿದೆ. ಗ್ಯಾರಂಟಿ ಯೋಜನೆಗಳನ್ನು ಎಷ್ಟರಮಟ್ಟಿಗೆ ಜನರಿಗೆ ತಲುಪಿದೆ ಎಂಬುದನ್ನು ಒಮ್ಮೆ  ನೋಡಬೇಕು. ಮೂರ್ನಾಲ್ಕು ತಿಂಗಳುಗಳಿಂದ ಗ್ಯಾರಂಟಿ ಯೋಜನೆಯ ಗೃಹಲಕ್ಷ್ಮಿ ಹಣ ಬಂದಿಲ್ಲ.‌ ಈ ಬಗ್ಗೆ ಜನ ಕೇಳುತ್ತಾರೆ ಎಂದು ಈ ರೀತಿಯ  ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಸರ್ಕಾರ ಏನು ಸಾಧನೆ ಮಾಡದೇ ವಿವಾದಗಳನ್ನು ಸೃಷ್ಟಿ ಮಾಡಿ  ಕಾಲಹರಣ ಮಾಡುತ್ತಿದ್ದಾರೆ. ಆರ್ ಎಸ್ ಎಸ್ ಚಟುವಟಿಕೆಗಳಿಗೆ ಬ್ಯಾನ್ ಮಾಡಬೇಕು ಎಂದು ಹೇಳಿದ್ದಾರೆ. ಅದೇ ರೀತಿ ನಮಾಜ್ ಮಾಡುವುದನ್ನು ಬ್ಯಾನ್ ಮಾಡಿ ಎಂದರೆ ಅದನ್ನು ಸ್ವೀಕಾರ ಮಾಡುತ್ತೀರಾ ಎಂದು ಕಿಡಿಕಾರಿದರು .

ಇನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೋಟ್ಯಂತರ ಹಣ  ದುರ್ಬಳಕೆಯಾಗಿದೆ.  ಈ ಬಗ್ಗೆ ಸದನದಲ್ಲಿ ಯಾವುದೇ  ಬಾಯಿಬಿಟ್ಟಿಲ್ಲ. ಪಂಚಾಯತ್ ರಾಜ್ ಇಲಾಖೆ ಸಚಿವರಾಗಿ ಏನು ಮಾಡಿದ್ದೀರಿ. ಮನೆ ಕಳೆದುಕೊಂಡ ಕುಟುಂಬಗಳಿಗೆ ಪರಿಹಾರ ನೀಡಿಲ್ಲ.‌ ಮೊದಲು ಈ ರೀತಿ ಹೇಳಿಕೆ ಕೊಡುವುದನ್ನು ನಿಲ್ಲಿಸಿ ಎಂದರು.

ತಿ. ನರಸೀಪುರ ಪಟ್ಟಣದಲ್ಲಿ ಆರ್ ಎಸ್ ಎಸ್ ಪಥ ಸಂಚಲನ ರೂಟ್ ಮ್ಯಾಪನ್ನು ತಹಶೀಲ್ದಾರ್ ಬದಲಾವಣೆ ಮಾಡಿದ್ದಾರೆ. ನಮಗೆ ಸ್ವಾತಂತ್ರ್ಯ ಇಲ್ಲವೇ.. ಎಲ್ಲಿ ಹೋಗಬೇಕು ಯಾವ ದಾರಿಯಲ್ಲಿ ನಡೆಯಬೇಕು ಎಂಬ ಸ್ವಾತಂತ್ರ್ಯವೂ ಇಲ್ಲವೇ. ಹನುಮ ಜಯಂತಿ ಮಾಡ್ತಾರೆ ಅಂತ ಅದಕ್ಕೂ ಬ್ಯಾನ್ ಮಾಡ್ತೀರಾ. ನಂಜನಗೂಡಿನಲ್ಲಿ ಆರ್ ಎಸ್ ಎಸ್ ಪಥ ಸಂಚಲನ ಮಾಡುತ್ತೇವೆ.‌ ಟಿ.ನರಸೀಪುರದಲ್ಲಿ ಸರಿಯಾದ ಲೀಡರ್ ಇಲ್ಲದೆ ಇರದ ಕಾರಣ ಪಥಸಂಚಲನ ನಡೆಯದೆ ಸ್ಥಗಿತಗೊಂಡಿತು.ರಾಷ್ಟ್ರ ಸೇವೆ ಮಾಡಲು ರಿಜಿಸ್ಟ್ರೇಷನ್ ಮಾಡಿಸಬೇಕಾ..‌ ಆರ್ ಎಸ್ ಎಸ್ ಒಬ್ಬ ಭಾರತೀಯ ಕಟ್ಟಿರುವ ಸಂಘಟನೆಯಾಗಿದೆ.‌ ಕಾಂಗ್ರೆಸ್ ಪಕ್ಷವನ್ನು ಬೇರೆ ದೇಶದವರು ಕಟ್ಟಿರುವುದು ಇವರಿಗೆ ತಿಳಿದಿಲ್ಲವೇ? ನಂಜನಗೂಡಿನಲ್ಲಿ ಆರ್ ಎಸ್ ಎಸ್ ಪಥ ಸಂಚಲನ ಮಾಡೇ ಮಾಡ್ತೀವಿ. ಯಾರು ತಡೆಯುತ್ತಾರೋ  ನಾನು ನೋಡ್ತೀನಿ ಎಂದು ಸವಾಲ್ ಹಾಕಿದರು.

ಟಿವಿ ಸೀರಿಯಲ್ ತರ ಸರ್ಕಾರ ನಡಿತಾ ಇದೆ, ಒಳ ಮೀಸಲಾತಿ, ಸಿಎಂ ಬದಲಾವಣೆ ಹೀಗೆ ಅನೇಕ ವಿಷಯವನ್ನು ತೆಗೆದುಕೊಂಡು ಕಾಂಗ್ರೆಸ್ ನವರೆ ಬರುತ್ತಿದ್ದಾರೆ.  ಸಿಎಂ ಸಿದ್ದರಾಮಯ್ಯ ಮೇಲೆ ಶಾಸಕರಿಗೆ ನಂಬಿಕೆ ಇಲ್ಲ. ಎರಡುವರೆ ವರ್ಷದಲ್ಲಿ ಸರಿಯಾದ  ಅನುದಾನವನ್ನು ನೀಡಿಲ್ಲ.  ರಾಜ್ಯದಲ್ಲಿ ಅರಾಜಕತೆ ನಿರ್ಮಾಣವಾಗಿದೆ. ಕಾಂಗ್ರೆಸ್ ಶಾಸಕರಿಗೆ ಮಾತ್ರ 50 ಕೋಟಿ ಅನುದಾನ ನೀಡ್ತಾ ಇದ್ದಾರೆ.‌ ಈ ವರ್ಷದ ಕೊನೆಯ ತಿಂಗಳಿನಲ್ಲಿ ಅಥವಾ ಜನವರಿ ಮಾರ್ಚ್ ನಲ್ಲಿ ಸಿಎಂ ಬದಲಾವಣೆ ಆಗುತ್ತದೆ ಎಂದು ಮಾಜಿ ಶಾಸಕ ಬಿ. ಹರ್ಷವರ್ಧನ್ ಹೇಳಿದರು.