ನಂಜನಗೂಡು: ಚುನಾವಣಾ ಆಯೋಗದಿಂದ ಎಸ್.ಐ.ಆರ್ ಪ್ರಕ್ರಿಯೆ ಪ್ರಾರಂಭವಾದ ಹಿನ್ನೆಲೆಯಲ್ಲಿ ನಂಜನಗೂಡು ವಿಧಾನಸಭಾ ಕ್ಷೇತ್ರ ಮತ್ತು ವರುಣ ವಿಧಾನಸಭಾ ಕ್ಷೇತ್ರದ ನೊಂದಾಯಿತ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯನ್ನು ನಂಜನಗೂಡು ತಾಲ್ಲೂಕು ಆಡಳಿತ ಭವನದ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಮತದಾರ ನೊಂದಾಯಿತ ಚುನಾವಣಾ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ತಾಲ್ಲೂಕು ದಂಡಾಧಿಕಾರಿ ಹಾಗೂ ತಹಶೀಲ್ದಾರ್ ಡಾ. ಸ್ಮಿತಾ ರಾಮು ವಹಿಸಿದ್ದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಡಾ. ಸ್ಮಿತಾ ರಾಮ್, ಚುನಾವಣಾ ಆಯೋಗದ ನಿರ್ದೇಶನದಂತೆ ಈಗಾಗಲೇ ಎಸ್.ಐ.ಆರ್ ಪ್ರಕ್ರಿಯೆ ಆರಂಭವಾಗಿದೆ. ನಂಜನಗೂಡು ಮತ್ತು ವರುಣ ವಿಧಾನಸಭಾ ಕ್ಷೇತ್ರಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಬಿ.ಎಲ್.ಓ ಗಳು ಮನೆ-ಮನೆಗೆ ತೆರಳಿ ಗಣತಿ ನಮೂನೆ ಪತ್ರಗಳನ್ನು ವಿತರಿಸಿದ್ದಾರೆ ಎಂದು ತಿಳಿಸಿದರು.
ಮತದಾರರು ಗಣತಿ ನಮೂನೆ ಪತ್ರದಲ್ಲಿ ತಮ್ಮ ಮಾಹಿತಿಯನ್ನು ಸರಿಯಾಗಿ ನಮೂದಿಸಬೇಕು. ಈ ಪ್ರಕ್ರಿಯೆಯಿಂದ ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗಾಗಬಾರದು ಎಂಬ ಉದ್ದೇಶದಿಂದ ಎಸ್.ಐ.ಆರ್ ಕೈಗೊಳ್ಳಲಾಗಿದೆ. ಸಾರ್ವಜನಿಕರು ಆತಂಕಕ್ಕೆ ಒಳಗಾಗುವುದು ಬೇಡ ಎಂದು ಅವರು ಸ್ಪಷ್ಟಪಡಿಸಿದರು.
ಎಸ್.ಐ.ಆರ್ ಪ್ರಕ್ರಿಯೆಯಲ್ಲಿ ಪಕ್ಷಗಳ ಸಹಕಾರ ಅಗತ್ಯವಿದ್ದು, ಎಲ್ಲಾ ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಗೆ ಸೇರುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳು ಮನವಿ ಮಾಡಿದರು.
ಸಭೆಯಲ್ಲಿ ನಂಜನಗೂಡು ಕ್ಷೇತ್ರದ ನೊಂದಾಯಿತ ಮತದಾರ ಅಧಿಕಾರಿ ಆರ್. ರಂಗಸ್ವಾಮಿ, ವರುಣ ಕ್ಷೇತ್ರದ ನೊಂದಾಯಿತ ಮತದಾರ ಅಧಿಕಾರಿ ಮಹೇಶ್ ಆರ್, ಹಾಗೂ ವಿವಿಧ ರಾಜಕೀಯ ಪಕ್ಷಗಳ ನೊಂದಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು.

