ನಂಜನಗೂಡು: ಸಾರ್ವಜನಿಕರು ಮತ್ತು ರೈತರ ಕೆಲಸ ಕಾರ್ಯಗಳನ್ನು ಮಾಡದೆ ನಿದ್ರೆಗೆ ಜಾರಿರುವ ತಾಲ್ಲೂಕು ಆಡಳಿತದ ವಿರುದ್ಧ ನಂಜನಗೂಡಿನಲ್ಲಿ ಅ.27 ರಂದು ಬೃಹತ್ ಬಾರುಕೋಲು ಚಳುವಳಿ ಮಾಡಲಾಗುತ್ತದೆ ಎಂದು ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಟಿ.ಆರ್ ವಿದ್ಯಾಸಾಗರ್ ಹೇಳಿದರು.

ನಂಜನಗೂಡು ಪಟ್ಟಣದ ಎಪಿಎಂಸಿ ಆವರಣದ ಸಭಾಂಗಣದಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರೈತ ಮುಖಂಡರ ಸಭೆಯನ್ನು ನಡೆಸಿ ಮಾತನಾಡಿದರು.

ಅ.27 ರಂದು ಸೋಮವಾರ  ರೈತರಿಗೆ ಸಂಭಂದಿಸಿದ ವಿವಿಧ ಸಮಸ್ಯೆಗಳನ್ನು ಇಟ್ಟುಕೊಂಡು ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ. ನಂಜನಗೂಡು ತಾಲ್ಲೂಕಿನಾದ್ಯಂತ ಎಲ್ಲಾ ಹೋಬಳಿಗಳು ಸೇರಿದಂತೆ ಬಗರ್ ಹುಕುಂ ಸಾಗುವಳಿ ಹಂಚಿಕೆಯು ಸರಿಯಾಗಿ ಆಗುತ್ತಿಲ್ಲ. ಸಾಮಾನ್ಯ ಜನರ ಸಮಸ್ಯೆಗಳನ್ನು ಬಗೆ ಹರಿಸಲು ತಾಲ್ಲೂಕು ತಹಶೀಲ್ದಾರ್ ರವರು ಜನಸಾಮಾನ್ಯರಿಗೆ ಸಿಗುತ್ತಿಲ್ಲ ಎಂಬ ದೂರು ನಮ್ಮ ಸಂಘಟನೆಗೆ ಬಂದಿದೆ.

ತಹಶೀಲ್ದಾರ್ ರವರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ತಾಲ್ಲೂಕು  ಕಛೇರಿಯಲ್ಲಿ ಜನಸಾಮಾನ್ಯರ  ಕೆಲಸಗಳು ವಿಳಂಬವಾಗುತ್ತಿದೆ. ತಾಲ್ಲೂಕು ಪಂಚಾಯಿತಿ  ಬದುಕಿದೀಯಾ ಎಂಬ ಪ್ರಶ್ನೆ  ಕಾಡುತ್ತಿದೆ. ಗ್ರಾಮ ಪಂಚಾಯಿತಿಗಳು ಸರಿಯಾಗಿ ತಮ್ಮ ಕೆಲಸ ಕಾರ್ಯನಿರ್ವಹಿಸದೆ  ಚರಂಡಿಗಳು ಗಬ್ಬೇದ್ದು ನಾರುತ್ತಿದ್ದು, ಗ್ರಾಮಗಳು ನೈರ್ಮಲ್ಯದಿಂದ ಕೂಡಿದೆ. ಇತ್ತೀಚಿನ  ದಿನಗಳಲ್ಲಿ ಕಾಡಂಚಿನ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಗೆ ಕಾಡು ಪ್ರಾಣಿಗಳ ಹಾವಳಿ  ಹೆಚ್ಚಾಗಿದೆ. ಬೆಳೆಹಾನಿ ಮತ್ತು ಪ್ರಾಣಹಾನಿಗೆ ಪರಿಹಾರ ನೀಡಬೇಕೆಂದು ಬಹಳ ವರ್ಷಗಳಿಂದ ರೈತರು ಬೇಡಿಕೆ ಬಿಟ್ಟಿದ್ದಾರೆ.

ಒಂದು ಕೋಟಿ ಪರಿಹಾರ ನೀಡಬೇಕೆಂಬುದು ನಮ್ಮ ಒತ್ತಾಯ. ಧಾರಾಕಾರ ಮಳೆಯಿಂದಾಗಿ ಮನೆ ಕಳೆದುಕೊಂಡು ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ನಿರುದ್ಯೋಗ ಸಮಸ್ಯೆ ಇದೆ. ನಂಜನಗೂಡು ಕೈಗಾರಿಕಾ ಪ್ರದೇಶಗಳನ್ನು ಹೊಂದಿದ್ದು  ಸ್ಥಳೀಯರಿಗೆ ಹೆಚ್ಚು ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡಬೇಕು. ಈ  ನಿಟ್ಟಿನಲ್ಲಿ ರೈತರ ಸಮಸ್ಯೆಗಳನ್ನು  ಮುಂದಿಟ್ಟುಕೊಂಡು ಅ.27 ರಂದು ನಂಜನಗೂಡಿನ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಿಂದ ಬೈಕ್ ಜಾಥಾ, ಎತ್ತಿನಗಾಡಿ ಮೂಲಕ ತಾಲ್ಲೂಕು ಆಡಳಿತ ಭವನದ ವರೆಗೆ ಕಾಲ್ನಡಿಯಲ್ಲಿ ಬಾರುಕೋಲು ಚಳುವಳಿ ಮಾಡಲಾಗುತ್ತದೆ‌. ಈ ಬೃಹತ್ ಪ್ರತಿಭಟನೆಗೆ ತಾಲ್ಲೂಕಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಬಾರುಕೋಲು ಚಳುವಳಿಯನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ  ತಾಲ್ಲೂಕು ಅಧ್ಯಕ್ಷ ಸತೀಶ್ ರಾವ್, ಮಹಿಳಾ ಅಧ್ಯಕ್ಷೆ ಶ್ವೇತಾ, ಉಪ್ಪನಹಳ್ಳಿ ದೇವರಾಜ್, ಮೋಹನ್, ಮಹದೇವಸ್ವಾಮಿ, ಹೆಡತಲೆ ಶಂಕರನಾಯಕ, ರಂಗಸ್ವಾಮಿ ನಾಯಕ, ಅಹಲ್ಯನಂಜುಂಡ, ಸೂರಹಳ್ಳಿ ಮಹದೇವನಾಯಕ, ದೊಡ್ಡೇಗೌಡ, ಸಿದ್ದು, ರಮೇಶ್ ನಾಯಕ, ಸವಿತಾ, ಹಲ್ಲರೆ ಸ್ವಾಮಿ, ಗೋವಿಂದ ನಾಯಕ, ಮಹದೇವನಾಯಕ, ಶಿವಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.