News Karnataka Kannada
Monday, April 29 2024
ಮಂಡ್ಯ

ಮದ್ದೂರು ಕಾಂಗ್ರೆಸ್ ಅಭ್ಯರ್ಥಿ ಉದಯ್ ನಾಮಪತ್ರ ಸಲ್ಲಿಕೆ

Maddur Congress candidate Uday files nomination
Photo Credit : By Author

ಮದ್ದೂರು: ಮದ್ದೂರು ವಿಧಾನಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕದಲೂರು ಕೆ.ಎಂ.ಉದಯ್ ಅವರು ಬುಧವಾರ ಅಧಿಕೃತವಾಗಿ ಚುನಾವಣಾಧಿಕಾರಿ ಆರ್.ನಾಗರಾಜು ಅವರಿಗೆ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕದಲೂರು ಕೆ.ಎಂ.ಉದಯ್ ಮಾತನಾಡಿ ಕಳೆದ 15 ವರ್ಷಗಳಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಇಲ್ಲದಿರುವುದರಿಂದ, ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆಯುತ್ತಿದೆ. ಜತೆಗೆ ಮದ್ದೂರು ಕ್ಷೇತ್ರ ಯಾವುದೇ ಅಭಿವೃದ್ಧಿಯಾಗದೆ ಹಿಂದುಳಿದಿದೆ. ಈ ಚುನಾವಣೆ ಸ್ವಾಭಿಮಾನದ ಸಂಕೇತವಾಗಿದ್ದು. ಕ್ಷೇತ್ರದ ಮತದಾರರು ನನ್ನನ್ನು ಬೆಂಬಲಿಸುವ ಮೂಲಕ ಕ್ಷೇತ್ರದ ಪ್ರಗತಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ನಾನು ಬಡತನದ ಕುಟುಂಬದಲ್ಲಿ ಹುಟ್ಟಿ, ಬಡವರ ಕಷ್ಟವನ್ನು ಹತ್ತಿರದಿಂದ ಬಲ್ಲವನಾಗಿದ್ದೇನೆ. ಮದ್ದೂರು ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಗುರಿ ಮತ್ತು ಸಾಗರೋಪಾದಿಯಲ್ಲಿ ಅಭಿವೃದ್ಧಿ ಮಾಡಬೇಕೆಂಬ ಛಲವನ್ನು ಹೊಂದಿದ್ದೇನೆ. ಈ ಚುನಾವಣೆಯಲ್ಲಿ ನಾನಲ್ಲ ಅಭ್ಯರ್ಥಿ, ನೀವೇ ಅಭ್ಯರ್ಥಿ ಎಂದುಕೊಂಡು ಗ್ರಾಮೀಣ ಭಾಗದಲ್ಲಿ ಹಗಲು ರಾತ್ರಿ ಕೆಲಸ ಮಾಡಿ ನನ್ನ ಗೆಲುವಿಗೆ ಕಾರಣಕರ್ತರಾಗಬೇಕು ಎಂದು ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಮಾತನಾಡಿ, ನನ್ನ ತಂದೆ ಜಿ.ಮಾದೇಗೌಡರು ಬದುಕಿರುವವರೆಗೂ ಮದ್ದೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರನ್ನು ಆಯ್ಕೆ ಮಾಡಬೇಕು ಎಂಬ ಹಂಬಲ ಹೊಂದಿದ್ದರು. ಅದು ಅವರ ಜೀವಿತಾವಧಿಯ ಕೊನೆಯವರೆಗೆ ಅದು ಈಡೇರಲಿಲ್ಲ. ಕಳೆದ ಚುನಾವಣೆಯಲ್ಲಿ ನನಗೆ 55,000 ಮತಗಳನ್ನು ನೀಡುವ ಮೂಲಕ ಪ್ರೀತಿ ತೋರಿರುವಿರಿ. ಪ್ರಸ್ತುತ ಅಭ್ಯರ್ಥಿಯಾಗಿರುವ ಕದಲೂರು ಕೆ.ಎಂ. ಉದಯ್ ಅವರನ್ನು ಹೆಚ್ಚಿನ ಮತಗಳಿಂದ ಆಯ್ಕೆ ಮಾಡುವ ಮೂಲಕ ನನ್ನ ತಂದೆ ಜಿ.ಮಾದೇಗೌಡರ ಕನಸು ನನಸು ಮಾಡಿ ಅವರ ಆತ್ಮಕ್ಕೆ ಶಾಂತಿ ಕೋರಬೇಕು ಎಂದು ಮನವಿ ಮಾಡಿದರು.

ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಮಾತನಾಡಿ,ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ನಿರುದ್ಯೋಗಿ ಪದವೀಧರ ಯುವಕರಿಗೆ ನಿರುದ್ಯೋಗ ಭತ್ಯೆ, ಪ್ರತಿ ಕುಟುಂಬಕ್ಕೆ 200 ಯೂನಿಟ್ ಉಚಿತ ವಿದ್ಯುತ್, 10 ಕೆಜಿ ಉಚಿತ ಅಕ್ಕಿ ಸೇರಿದಂತೆ ಅನೇಕ ಯೋಜನೆಗಳನ್ನು ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿದೆ. ನುಡಿದಂತೆ ನಡೆಯುವ ಏಕೈಕ ಪಕ್ಷ ಕಾಂಗ್ರೆಸ್. ಮುಂಬರುವ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ಎಂ.ಉದಯ್ ಅವರನ್ನು ಆಯ್ಕೆ ಮಾಡುವ ಮೂಲಕ ಮದ್ದೂರು ಕ್ಷೇತ್ರದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.

ನಾಮಪತ್ರ ಸಲ್ಲಿಕೆಗೂ ಮುನ್ನ ಕೆ.ಎಂ.ಉದಯ್ ಅವರ ತವರು ಗ್ರಾಮ ಕದಲೂರು ಗ್ರಾಮಕ್ಕೆ ತೆರಳಿ, ಗ್ರಾಮ ದೇವತೆಗೆ ವಿಶೇಷ ಪೂಜೆ ಸಲ್ಲಿಸಿ, ಗ್ರಾಮಸ್ಥರಿಂದ ಅಭಿನಂದನೆ ಸ್ವೀಕರಿಸಿ ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಮದ್ದೂರಮ್ಮ, ಶ್ರೀ ಹೊಳೆ ಆಂಜನೇಯ ಸ್ವಾಮಿ ಹಾಗೂ ಉಗ್ರ ನರಸಿಂಹಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ, ನರಸಿಂಹಸ್ವಾಮಿ ದೇಗುಲದ ಆವರಣದಿಂದ ವೀರಗಾಸೆ, ಡೊಳ್ಳು ಕುಣಿತ, ಪೂಜೆ ಕುಣಿತ, ಕೀಲು ಕುದುರೆ, ಗಾರುಡಿ ಗೊಂಬೆ ಸೇರಿದಂತೆ ಅನೇಕ ಜಾನಪದ ಕಲಾ ಪ್ರಕಾರಗಳೊಂದಿಗೆ ತೆರೆದ ವಾಹನದಲ್ಲಿ ಬೃಹತ್ ಜನಸ್ತೋಮ ಹಾಗೂ ಕಾಂಗ್ರೆಸ್ ನಾಯಕರೊಂದಿಗೆ ತಾಲೂಕು ಕಚೇರಿವರೆಗೆ ತೆರಳಿ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸುವ ವೇಳೆ ಹಾಗೂ ಮೆರವಣಿಗೆ ಸಮಯದಲ್ಲಿ ಕಾಂಗ್ರೆಸ್ ಬಾವುಟಗಳೊಂದಿಗೆ ಕನ್ನಡದ ಬಾವುಟಗಳು ರಾರಾಜಿಸಿದವು. ಕೊಲ್ಲಿ ವೃತ್ತದಿಂದ ಟಿಬಿ ವೃತ್ತದ ಎರಡು ಬದಿಗಳಲ್ಲಿ ಸಾವಿರಾರು ಜನರು ಸೇರುವ ಮೂಲಕ ಉದಯ್ ಅವರ ನಾಮಪತ್ರ ಸಲ್ಲಿಕೆಯ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ವಿಧಾನ ಪರಿಷತ್ ಸದಸ್ಯರಾದ ಮಧು ಜಿ.ಮಾದೇಗೌಡ, ದಿನೇಶ್ ಗೂಳಿಗೌಡ, ಮಾಜಿ ಸದಸ್ಯ ಬಿ.ರಾಮಕೃಷ್ಣ, ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ. ಗಂಗಾಧರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಲಿಂಗೇಗೌಡ, ಕೆಪಿಸಿಸಿ ಸದಸ್ಯ ಕದಲೂರು ರಾಮಕೃಷ್ಣ, ಮುಖಂಡರಾದ ಅಜ್ಜಳ್ಳಿ ರಾಮಕೃಷ್ಣ, ಸುರೇಶ್ ಕಂಠಿ, ಪಣ್ಣೆದೊಡ್ಡಿ ಸುಧಾಕರ, ತಾ.ಪಂ ಮಾಜಿ ಸದಸ್ಯ ತೈಲೂರು ಚಲುವರಾಜು, ಕದಲೂರು ರವಿ, ಚಿಂತಕ ನ.ಲಿ.ಕೃಷ್ಣ ಸೇರಿದಂತೆ ಇತರರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು