ಮಂಡ್ಯ: ನಟ ದರ್ಶನ್ ಅವರು ಮಂಡ್ಯದಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿದ್ದಾರೆ. ಸ್ಟಾರ್ ಚಂದ್ರು ಪರವಾಗಿ ದರ್ಶನ್ ಕ್ಯಾಂಪೇನ್ ಮಾಡುತ್ತಿದ್ದಾರೆ. ಸುಮಲತಾ ಅಂಬರೀಷ್ ಅವರು ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡುವುದರಿಂದ ಹಿಂದೆ ಸರಿದು, ಬಿಜೆಪಿ ಸೇರಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಹೀಗಾಗಿ, ಇದು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿತ್ತು.
ಇದಕ್ಕೆ ದರ್ಶನ್ ಅವರು ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದೇಕೆ ಎಂದು ಹೇಳಿದ್ದಾರೆ.
‘ನಾನು ಪಕ್ಷದ ಪರ ಬರುವುದಿಲ್ಲ, ನಾನು ವ್ಯಕ್ತಿ ಪರ. ಐದು ವರ್ಷಗಳ ಹಿಂದೆ ನರೇಂದ್ರಣ್ಣ ಮಾಡಿದ ಸಹಾಯ ನೆನಪಿಸಿಕೊಳ್ಳುತ್ತೇನೆ’ ಎಂದು ಮಾತು ಆರಂಭಿಸಿದರು ದರ್ಶನ್. ‘ಮಾಧ್ಯಮದವರು ಏನೇನೋ ಹಾಕಿದ್ರೆ ತುಂಬಾ ಕಷ್ಟ ಆಗುತ್ತದೆ. ಹೀಗಾಗಿ ನಾನು ಸ್ಪಷ್ಟನೆ ಕೊಡುತ್ತೇನೆ. ಸುಮಲತಾಗೆ ಮಂಡ್ಯ ಸೀಟ್ ಸಿಕ್ಕಿಲ್ಲ ಎಂದರೆ ನಮ್ಮ ಪರ ನೀವು ಪ್ರಚಾರ ಮಾಡಬೇಕು ಎಂದು ಉದಯ್ ಗೌಡ್ರು ಕೇಳಿದ್ದರು.
ಮೊದಲು ಕರೆದರು ಎನ್ನುವ ಕಾರಣಕ್ಕೆ ಪ್ರಚಾರಕ್ಕೆ ಬಂದಿದ್ದೇನೆ. ಕಾಂಗ್ರೆಸ್ನಿಂದ ಸ್ಟಾರ್ ಚಂದ್ರು ನಿಂತಿದ್ದಾರೆ. ನಿಮ್ಮ ಅತ್ಯಮೂಲ್ಯ ಮತವನ್ನು ಅವರಿಗೆ ನೀಡಿ. ನರೇಂದ್ರ ಹಾಗೂ ಉದಯ್ ಅವರ ಕೈಗಳನ್ನು ಬಲಪಡಿಸಿ’ ಎಂದು ಕೋರಿದ್ದಾರೆ ದರ್ಶನ್.