ಮೈಸೂರು : ಕಾವೇರಿ ನದಿಯಲ್ಲಿ ಮುಳುಗುತ್ತಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡಿದ ಘಟನೆ ಕೆ.ಆರ್.ನಗರ ತಾಲೂಕಿನ ಕಪ್ಪಡಿ ದೇವಸ್ಥಾನದ ಬಳಿ ನಡೆದಿದೆ.
ಜೀವದ ಹಂಗು ತೊರೆದು ನೀರಿನಲ್ಲಿ ಮುಳುಗುತ್ತಿದ್ದ ವ್ಯಕ್ತಿಯನ್ನು ಯುವಕ ರಕ್ಷಿಸಿದ್ದಾನೆ. ಅರಸನಕೊಪ್ಪಲು ಗ್ರಾಮದ ಪೂಜಾರಪ್ಪನ ಪುತ್ರ ಮಂಜುವನ್ನು ರಕ್ಷಣೆ ಮಾಡಲಾಗಿದೆ.
ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ವೇಳೆ ಅವಘಡ ಸಂಭವಿಸಿದೆ. ಈಜು ಬಾರದೇ ಕಾವೇರಿ ನದಿಯಲ್ಲಿ ಮಂಜು ಮುಳುಗಿದ್ದಾನೆ. ನೀರಿನಲ್ಲಿ ಮುಳುಗುತ್ತಿದ್ದ ಮಂಜುವನ್ನು ಮಧು ನೋಡಿ ತಕ್ಷಣ ನೀರಿಗೆ ಹಾರಿ ಮಂಜುನನ್ನು ರಕ್ಷಣೆ ಮಾಡಿದ್ದಾನೆ.
ಹೆಬ್ಬಾಳು ಕೊಪ್ಪಲು ಗ್ರಾಮದ ಕಪ್ಪಡಿ ಮಧು ಎಂಬಾತನಿಂದ ರಕ್ಷಣೆ ಮಾಡಲಾಗಿದೆ. ನದಿಯ ಮಧ್ಯಭಾಗದಿಂದ ಮಂಜುವನ್ನು ಸುರಕ್ಷಿತವಾಗಿ ಮಧು ದಡಕ್ಕೆ ಕರೆತಂದಿದ್ದಾನೆ. ಪ್ರಾಣ ಉಳಿಸಿದ ಮಧು ಕಾಲಿಗೆ ಮಂಜು ನಮಸ್ಕರಿಸಿದ್ದಾರೆ. ಕಪ್ಪಡಿ ಮಧು ಕಾರ್ಯಕ್ಕೆ ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ.

