ನಂಜನಗೂಡು: ತೆಂಗಿನಕಾಯಿ ಕೀಳುವ ವೇಳೆ ಆಯತಪ್ಪಿ ಬಿದ್ದು ಕೂಲಿ ಕಾರ್ಮಿಕ ಸಾವನ್ನಪ್ಪಿದ ಘಟನೆ ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತಾಲ್ಲೂಕಿನ ಹುಣಸನಾಳು ಗ್ರಾಮದ ನಿಂಗರಾಜು(35) ಮೃತ ದುರ್ದೈವಿ.

ಸಂತೋಷ್ ಎಂಬುವರಿಗೆ ಸೇರಿದ ತೆಂಗಿನ ತೋಟದಲ್ಲಿ ತೆಂಗಿನಕಾಯಿ ಕೀಳುವ ವೇಳೆ ದುರ್ಘಟನೆ ನಡೆದಿದೆ. ಮೇಸ್ತ್ರಿ, ಹುಲ್ಲಹಳ್ಳಿಯ ಮಂಜು ಎಂಬಾತ ಗುತ್ತಿಗೆ ಪಡೆದಿದ್ದು 5 ಕಾರ್ಮಿಕರನ್ನ ಕಾಯಿ ಕೀಳಲು ಕರೆತಂದಿದ್ದರು.

ಇಂದು ಬೆಳಿಗ್ಗೆ ಮರ ಹತ್ತಿದ್ದ ವೇಳೆ ಕಾಯಿ ಕೇಳುವ ಕಾರ್ಮಿಕರಿಗೆ ಯಾವುದೇ ರಕ್ಷಣಾ ಕವಚ ಇಲ್ಲದಿರುವುದೇ ದುರ್ಘಟನೆಗೆ ಕಾರಣವಾಗಿದೆ ಹುಣಸನಾಳು ಗ್ರಾಮದ ಕಾರ್ಮಿಕ ನಿಂಗರಾಜು ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಶಾಸಕ ದರ್ಶನ್ ಧೃವ ನಾರಾಯಣ್ ಮತ್ತು ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಭೇಟಿ ನೀಡಿ 20 ಸಾವಿರ ಪರಿಹಾರ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ದುರ್ಘಟನೆಗೆ ಮೂಲ ಕಾರಣ ಮೇಸ್ತ್ರಿ ಮಂಜು ಮತ್ತು ತೋಟದ ಮಾಲೀಕ ಸಂತೋಷ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಮತ್ತು ನೊಂದ ಕುಟುಂಬಸ್ಥರು ಆಗ್ರಹಿಸಿದರು. ಹುಲ್ಲಹಳ್ಳಿ ಪೊಲೀಸ್ ಠಾಣೆಯ ಎಎಸ್ ಐ ಪ್ರಕಾಶ್ ದಫೆದರ್ ಶಿವಕುಮಾರ್ ಮೃತ ವ್ಯಕ್ತಿಯ ಶವವನ್ನು ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.