ನಂಜನಗೂಡು : ದಕ್ಷಿಣ ಕಾಶಿ ನಂಜನಗೂಡಿನ ಕಪಿಲ ನದಿ ತೀರದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮಕರ ಸಂಕ್ರಮಣ ಹಬ್ಬದ ಪ್ರಯುಕ್ತ ಮಕರ ಜ್ಯೋತಿ ಹಾಗೂ ಪಡಿ ಪೂಜಾ ಕಾರ್ಯಕ್ರಮವು ಶ್ರದ್ಧಾ ಭಕ್ತಿಯಿಂದ ನೆರವೇರಿತು.

ಕಾರ್ಯಕ್ರಮದ ಪ್ರಯುಕ್ತ ದೇವಾಲಯವನ್ನು ಬಣ್ಣ ಬಣ್ಣದ ಹೂವು ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು ರಾಜ್ಯದ ನಾನಾ ಮೂಲೆಗಳಿಂದ ಸಾವಿರಾರು ಅಯ್ಯಪ್ಪ ಭಕ್ತರು ಮಕರ ಸಂಕ್ರಮಣ ಜ್ಯೋತಿ ಪೂಜೆ ಯಲ್ಲಿ ಪಾಲ್ಗೊಂಡು ಭಕ್ತಿ ನಮನ ಸಲ್ಲಿಸಿದರು.

ಶ್ರೀ ಕ್ಷೇತ್ರ ಶಬರಿಮಲೆಯಲ್ಲಿ ಮಕರ ಸಂಕ್ರಾಂತಿಯಂದು ಸಂಜೆ 6 ಗಂಟೆ ವೇಳೆಗೆ ಕಾಣಿಸಿಕೊಳ್ಳುವ ಮಕರ ಜ್ಯೋತಿ ಸಂದರ್ಭ ಇಲ್ಲೂ ಕೂಡ ಅದೇ ವೇಳೆಗೆ ಕರ್ಪೂರ ಜ್ಯೋತಿ ಹಚ್ಚುವ ಜ್ಯೋತಿ ಪೂಜೆ ಆಚರಿಸಲಾಗುತ್ತದೆ.

ಇದೇವೇಳೆ ದೇವಾಲಯದ ಗುರುಸ್ವಾಮಿ ಅವರ ನೇತೃತ್ವದಲ್ಲಿ ದೇವಾಲಯದ ಸುತ್ತ ಸಾವಿರಾರು ಭಕ್ತರು ಅಯ್ಯಪ್ಪನ ನಾಮಸ್ಮರಣೆ ಮಾಡುತ್ತಾ ಕುಣಿಯುತ್ತಾ ಪ್ರದಕ್ಷಿಣೆ ಹಾಕಿ ತಮ್ಮ ಭಕ್ತಿಯ ಪರಾಕಾಷ್ಠೆ ಮೆರೆದರು.

ಸಂಜೆ 6 ಗಂಟೆ ಆಗುತ್ತಿದ್ದಂತೆ ಭಕ್ತರ ಹರ್ಷೋದ್ಗಾರದೊಂದಿಗೆ ದೇವಾಲಯದ ದ್ವಾರದ ಬಳಿ ಹಾಗು ಸುತ್ತ ಕರ್ಪೂರ ಜ್ಯೋತಿ ಹಚ್ಚುವ ಮೂಲಕ ಮಕರ ಜ್ಯೋತಿ ಪೂಜೆ ಆಚರಿಸಲಾಯಿತು. ಇದಾದ ಬಳಿಕ ಪವಿತ್ರ 18 ಮೆಟ್ಟಿಲುಗಳಿಗೆ ಹಲವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜೆ ಸಲ್ಲಿಸಿ ಮೆಟ್ಟಿಲುಗಳನ್ನು ಶುದ್ದಿ ಮಾಡಲಾಯಿತು.

ಪಡಿಪೂಜೆ ನಡೆದ ಬಳಿಕ ಇರುಮುಡಿ ಹೊತ್ತ ಅಯ್ಯಪ್ಪ ಭಕ್ತರಿಗೆ ಪವಿತ್ರ ಮೆಟ್ಟಿಲು ಹತ್ತುವ ಅವಕಾಶ ಕಲ್ಪಿಸಲಾಯಿತು. ಗುರುಸ್ವಾಮಿಗಳಾದಿಯಾಗಿ ನೂರಾರು ಅಯ್ಯಪ್ಪ ಭಕ್ತರು ಪವಿತ್ರ 18 ಮೆಟ್ಟಿಲುಗಳನ್ನು ಹತ್ತಿ ಬಂದು ಶ್ರೀ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದರು.

ಸ್ವಾಮಿಗೆ ಮಹಾ ಮಂಗಳಾರತಿ ನಂತರ ಬಂದ ಎಲ್ಲಾ ಭಕ್ತರಿಗೆ ದೇವಾಲಯದ ವತಿಯಿಂದ ಪ್ರಸಾದ ವಿನಿಯೋಗ ಮಾಡಲಾಯಿತು. ಇದೇ ಸಂದರ್ಭ 27ನೇ ಬ್ರಹ್ಮೋತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾವಿದರನ್ನು ಗೌರವಿಸಿ ಮಕ್ಕಳಿಗ ಬಹುಮಾನ ವಿತರಣೆ ಮಾಡಲಾಯಿತು.