ಮೈಸೂರು: ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಿದ ಮೈಸೂರು ಮಹಾರಾಜ ಕಾಲೇಜು ಉತ್ತಮ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಮೈಸೂರಿನ ಸರಸ್ವತಿಪುರಂನಲ್ಲಿರುವ ಎನ್ಎಸ್ಎಸ್ ಭವನದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ ಹಾಗೂ 2023- 24ನೇ ಮತ್ತು 2024-25 ನೇ ಸಾಲಿನ ಎನ್ಎಸ್ಎಸ್ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಮೈಸೂರು ವಿವಿ ಕುಲಪತಿಗಳಾದ ಪ್ರೊ.ಎನ್.ಕೆ ಲೋಕನಾಥ್ ಉದ್ಘಾಟಿಸಿದರು.
ಬಳಿಕ ಮಹಾರಾಜ ಕಾಲೇಜಿನ ಡಾ.ಎಸ್ ಕೃಷ್ಣಪ್ಪ ಮತ್ತು ಡಾ.ಪಿಎಸ್ ಮಧುಸೂದನ್ ರವರಿಗೆ ಉತ್ತಮ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಮಹಾರಾಜ ಕಾಲೇಜಿನ ಎನ್ಎಸ್ಎಸ್ ಘಟಕ-1 ಮತ್ತು ಘಟಕ- 2 ಉತ್ತಮ ಘಟಕ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಅಲ್ಲದೆ ಮಹಾರಾಜ ಕಾಲೇಜಿನ ಯಶಸ್ ಕೆ.ರಾಜ್ ಮತ್ತು ಎಂ. ಭಾರ್ಗವ್ ಎಂಬ ಶಿಬಿರಾರ್ಥಿಗಳು ಉತ್ತಮ ಸ್ವಯಂ ಸೇವಕ ಪ್ರಶಸ್ತಿಯನ್ನು ಪಡೆದುಕೊಂಡು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಈ ಸಂದರ್ಭದಲ್ಲಿ ಮೈಸೂರು ವಿವಿ ಕುಲಪತಿಗಳಾದ ಪ್ರೊ.ಎನ್.ಕೆ ಲೋಕನಾಥ್, ವಿಶ್ರಾಂತ ಎನ್ಎಸ್ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿಗಳಾದ ಬಿ.ಕೆ ಶಿವಣ್ಣ, ಪ್ರೊ.ಎಂ ರುದ್ರಯ್ಯ, ಮೈಸೂರು ವಿವಿ ಎನ್ಎಸ್ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಪ್ರೊ. ಎಂ.ಬಿ ಸುರೇಶ್ ಪ್ರಶಸ್ತಿಯನ್ನು ಪ್ರಧಾನ ಮಾಡಿ ಅಭಿನಂದಿಸಿದರು.
ಮೈಸೂರು ಮಹಾರಾಜ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಡಾ.ಎಸ್ ಕೃಷ್ಣಪ್ಪ ಮತ್ತು ಡಾ.ಪಿ.ಎಸ್ ಮಧುಸೂದನ್ ನೇತೃತ್ವದಲ್ಲಿ ನಂಜನಗೂಡು ತಾಲ್ಲೂಕಿನ ಉಪ್ಪನಹಳ್ಳಿ, ಕಲ್ಮಹಳ್ಳಿ, ಚುಂಚನಹಳ್ಳಿ ಗ್ರಾಮಗಳು ಮತ್ತು ಮೈಸೂರು ತಾಲ್ಲೂಕಿನ ನಾಗನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮೈಸೂರು ಮಹಾರಾಜ ಕಾಲೇಜು ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ವಾರ್ಷಿಕ ಶಿಬಿರಗಳನ್ನು ಹಮ್ಮಿಕೊಂಡು ಎನ್ಎಸ್ಎಸ್ ಶಿಬಿರಾರ್ಥಿಗಳ ಜೊತೆ ಒಂದು ವಾರಗಳ ಕಾಲ ಶಿಬಿರದಲ್ಲಿ ಗ್ರಾಮಸ್ಥರಿಗೆ ಶಿಕ್ಷಣ, ಆರೋಗ್ಯ, ಗ್ರಾಮಗಳ ಇತಿಹಾಸ,
ಕಲೆ, ಸಂಸ್ಕ್ರತಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ಬೀದಿ ನಾಟಕಗಳು ಸೇರಿದಂತೆ ಕಾನೂನಿನ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿಕೊಂಡು ಜನರಲ್ಲಿ ಜಾಗೃತಿ ಮೂಡಿಸಿಕೊಂಡು ಬರಲಾಗುತ್ತಿದೆ. ಎನ್‌ಎಸ್‌ಎಸ್ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದವರಿಗೆ ಪ್ರಶಸ್ತಿ ನೀಡಲಾಯಿತು. ಎನ್‌ಎಸ್‌ಎಸ್ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಾಧನೆಗೈದ ಸಾಧಕರನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಿ ಉತ್ತೇಜಿಸಲಾಗಿದೆ.
ಗಮನ ಸೆಳೆದಿದ್ದ ಚುಂಚನಹಳ್ಳಿ ಎನ್ಎಸ್ಎಸ್ ಶಿಬಿರ..!
ನಂಜನಗೂಡು ತಾಲ್ಲೂಕಿನ ಚುಂಚನಹಳ್ಳಿ ಗ್ರಾಮದಲ್ಲಿ ಕಳೆದ ಫೆಬ್ರವರಿ ತಿಂಗಳಲ್ಲಿ ಮೈಸೂರು ಮಹಾರಾಜ ಕಾಲೇಜಿನ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಗಳಾದ ಡಾ.ಕೃಷ್ಣಪ್ಪ ಮತ್ತು ಡಾ.ಪಿ.ಎಸ್ ಮಧುಸೂದನ್ ನೇತೃತ್ವದಲ್ಲಿ ವಿಶೇಷ ವಾರ್ಷಿಕ ಶಿಬಿರವನ್ನು ಒಂದು ವಾರಗಳ ಕಾಲ ಹಮ್ಮಿಕೊಳ್ಳಲಾಗಿತ್ತು. ಶಿಬಿರದಲ್ಲಿ ಶಿಬಿರಾರ್ಥಿಗಳು ಗ್ರಾಮವನ್ನು ಸ್ವಚ್ಛತೆ ಮಾಡಿ, ಬೀದಿ ನಾಟಕದ ಮೂಲಕ ಬಾಲ್ಯ ವಿವಾಹ ನಿಷೇಧ, ಧೂಮಪಾನ ಮತ್ತು ಮಧ್ಯಪಾನದಿಂದಾಗುವ ದುಷ್ಪರಿಣಾಮ, ಕಾನೂನಿನ ಅರಿವಿನ ಬಗ್ಗೆ ಜಾಗೃತಿ ಮೂಡಿಸಲಾಯಿತು. ಪಾಳು ಬಿದ್ದಿದ್ದ ಸರ್ಕಾರಿ ಶಾಲೆಗೆ ಮರುಜೀವ ನೀಡಲಾಯಿತು, ಊರಿನ ಹೊರವಲಯದಲ್ಲಿ ಶಾಸನವನ್ನು ಪತ್ತೆ ಹಚ್ಚಿ ಸಂರಕ್ಷಿಸಲಾಯಿತು.
ಚುಂಚನಹಳ್ಳಿ ಗ್ರಾಮಕ್ಕೆ ಶ್ರೀ ಮಲೆ ಮಹದೇಶ್ವರರು ಬಂದು ಮಂಡಿಯೂರಿದ ಸ್ಥಳವನ್ನು ಗುರುತಿಸಿ ಇತಿಹಾಸವನ್ನು ಗ್ರಾಮಸ್ಥರಿಗೆ ತಿಳಿಸಿದ್ದರು. ಹೀಗೆ ಸಾಮಾಜಿಕ ಸೇವೆಯಲ್ಲಿ ನಿರತರಾಗಿರುವ ಡಾ.ಎಸ್. ಕೃಷ್ಣಪ್ಪ ಮತ್ತು ಡಾ.ಪಿಎಸ್ ಮಧುಸೂದನ್ ರವರ ಸೇವೆಯನ್ನು ಗುರುತಿಸಿ ಮೈಸೂರು ವಿವಿ, ರಾಷ್ಟ್ರೀಯ ಸೇವಾ ಯೋಜನೆ ಉತ್ತಮ ಕಾರ್ಯಕ್ರಮಾಧಿಕಾರಿ ಪ್ರಶಸ್ತಿ, ಉತ್ತಮ ಘಟಕ ಪ್ರಶಸ್ತಿ, ಉತ್ತಮ ಸ್ವಯಂಸೇವಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಪ್ರಶಸ್ತಿಯನ್ನು ಪಡೆದುಕೊಂಡಿರುವ ಅಧಿಕಾರಿಗಳಿಗೆ ಮತ್ತು ಸ್ವಯಂಸೇವಕರಿಗೆ ಹಾಗೂ ಮಹಾರಾಜ ಕಾಲೇಜಿಗೆ ಚುಂಚನಹಳ್ಳಿ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.

