News Karnataka Kannada
Saturday, April 27 2024
ಮಡಿಕೇರಿ

ಯುವ ಜನರಲ್ಲಿ ಮತದಾನದ ಅರಿವುಂಟು ಮಾಡಲು ವಿವಿಧ ಕಾರ್ಯಕ್ರಮ- ಡಾ.ಬಿ.ಸಿ.ಸತೀಶ

Various programmes to create awareness about voting among the youth- Dr. B.C. Satheesh
Photo Credit : By Author

ಮಡಿಕೇರಿ, ಏ.16: ಮತದಾನದ ಮಹತ್ವ ಮತ್ತು ಮತದಾನ ಮಾಡಿ ಎಂಬ ಜಾಗೃತಿ ಸಂದೇಶದ ಬೈಕ್ ಜಾಥಾ ಮಡಿಕೇರಿಯಲ್ಲಿ ಜನಮನ ಸೆಳೆಯಿತು.

ಕೊಡಗು ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿಯ ವತಿಯಿಂದ (ಸ್ವೀಪ್) ಮತ್ತು ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್ ಆಯೋಜಿಸಿದ್ದ ಬೈಕ್ ಜಾಥಾಕ್ಕೆ ನಗರದ ಬನ್ನಿಮಂಟಪದಲ್ಲಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಹಸಿರುನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಜಿಲ್ಲಾಧಿಕಾರಿ ಸತೀಶ್ ಅವರ ಪತ್ನಿ ರೂಪಶ್ರೀ ಅವರೊಂದಿಗೆ ಬೈಕ್ ಜಾಥಾದಲ್ಲಿ ಪಾಲ್ಗೊಂಡರೆ, ಜಿ.ಪಂ.ಸಿಇಒ ಮತ್ತು ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಎಸ್.ಆಕಾಶ್ ಬುಲೆಟ್ ಬೈಕ್ ನಲ್ಲಿ ಬಂದು ಗಮನ ಸೆಳೆದರು.

ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತ, ಮಂಗೇರಿರ ಮುತ್ತಣ್ಣ ವೃತ್ತ, ಜನರಲ್ ತಿಮ್ಮಯ್ಯ ವೃತ್ತ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತಕ್ಕಾಗಿ ಸಾಗಿದ ಬೈಕ್ ಜಾಥಾ ರಾಜಾಸೀಟು ಉದ್ಯಾನವನದಲ್ಲಿ ಕೊನೆಗೊಂಡಿತು.

ರಾಜಾಸೀಟ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್, ಮತದಾನ ಪ್ರತೀಯೊಬ್ಬರ ಹಕ್ಕಾಗಿದೆ. ಯುವಜನತೆ ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸಲು ಪ್ರೋತ್ಸಾಹ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ 18 ವರ್ಷ ತುಂಬಿದ ಮೊದಲ ಬಾರಿಗೆ ಮತದಾನ ಮಾಡುತ್ತಿರುವ ಯುವಕ, ಯುವತಿಯರಿಗೆ ಮತದಾನ ಮಾಡಿದ ಬಳಿಕ ಮೊಬೈಲ್ ಸೆಲ್ಫಿ ಸ್ಪರ್ಧೆ ಯನ್ನು ಮತಗಟ್ಟೆಯ ಹೊರ ಆವರಣದಲ್ಲಿ ನಡೆಸಲು ಯೋಜನೆ ರೂಪಿಸಲಾಗುತ್ತಿದೆ. ಸಖಿ ಬೂತ್, ಯಂಗ್ ಬೂತ್ ಗಳು ಕೂಡ ಈ ಬಾರಿಯ ವಿಶೇಷವಾಗಿದೆ ಎಂದರು.

ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಎಸ್.ಆಕಾಶ್ ಮಾತನಾಡಿ, ಮತದಾನದ ಜಾಗ್ರತಿ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ಆಯೋಜಿತವಾಗಿದೆ. ಏಪ್ರಿಲ್ 30 ರಂದು ಮಡಿಕೇರಿಯಲ್ಲಿ ಮತದಾನ ಮಹತ್ವ ಸಾರುವ ರಂಗೋಲಿ ಸ್ಪರ್ಧೆ ಮತ್ತು ಮೊಬೈಲ್ ಲೈಟ್ ನಲ್ಲಿ ನಾನು ಮತಹಾಕುವೆ ಎಂಬ ಅಭಿಯಾನವೂ ವಿಭಿನ್ನವಾಗಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಕೊಡಗು ಜಿಲ್ಲಾ ಮತದಾನದ ರಾಯಭಾರಿ ಕೆ.ರವಿಮುತ್ತಪ್ಪ ಮಾತನಾಡಿ, ತಾನು 20 ವರ್ಷಗಳಿಂದ 39 ಮೃತದೇಹಗಳನ್ನು ನದಿಯಾಳದಿಂದ ಹೊರತೆಗೆದು ಯಾವುದೇ ಹಣ ಪಡೆಯದೇ ಮೃತರ ಕುಟುಂಬಸ್ಥರಿಗೆ ಒಪ್ಪಿಸುವ ಕಾಯಕದಲ್ಲಿ ನಿರತನಾಗಿದ್ದೇನೆ. ತನ್ನ ಸೇವೆಯನ್ನು ಕೊಡಗು ಜಿಲ್ಲಾಡಳಿತ ಗುರುತಿಸಿ ಮತದಾನದ ರಾಯಭಾರಿಯನ್ನಾಗಿ ಮಾಡಿದ್ದು ಸಂತೋಷ ತಂದಿದೆ ಎಂದರು. ಪ್ರತಿಯೊಬ್ಬರೂ ನೀರ್ಭಿತಿಯಿಂದ ಮತ ಹಾಕುವಂತೆ ಅವರು ಕರೆ ನೀಡಿದರು.

ಚುನಾವಣಾ ರಾಯಭಾರಿ ವಿಶೇಷ ಚೇತನ ಮಹಿಳೆ ಎಸ್.ಕೆ.ಈಶ್ವರಿ ಮಾತನಾಡಿ, ಮತದಾನದ ಬಗ್ಗೆ ಕೆಲವರಲ್ಲಿ ನಿರ್ಲಕ್ಷ್ಯ ತೊರಬಾರದು. ಮತದಾನ ಮಾಡುವ ಮೂಲಕ ಪ್ರಜೆಯಾಗಿರುವುದನ್ನು ಪ್ರತಿಯೊಬ್ಬರೂ ಸಾಬೀತು ಪಡಿಸಬೇಕು ಎಂದು ಮನವಿ ಮಾಡಿದರು.

ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಪ್ರಧಾನ ಆಯುಕ್ತ ಕೆ.ಟಿ. ಬೇಬಿ ಮ್ಯಾಥ್ಯು ಮಾತನಾಡಿ, ಬಡವರ್ಗದವರು ತಮ್ಮ ಹಕ್ಕು ಚಲಾಯಿಸಲು ಸಂಭ್ರಮದಿಂದ ಮತಗಟ್ಟೆಗೆ ಬರುತ್ತಾರೆ. ಆದರೆ ಶ್ರೀಮಂತ ವರ್ಗದ ಅನೇಕರು ಮತದಾನದ ಬಗ್ಗೆ ನಿರಾಸಕ್ತಿ ತೋರುವ ಬೆಳವಣಿಗೆ ಸರಿಯಲ್ಲ ಎಂದು ಹೇಳಿದರು.

ದಿಶ ಪೌಂಡೇಶನ್ ನ ಅಜಯ್ ಸೂದ್ ಮಾತನಾಡಿ, ವಿಶೇಷ ಚೇತನರೂ ಮತದಾನದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಚುನಾವಣಾ ಆಯೋಗ ಈ ವರ್ಗದವರಿಗೆ ಮತ ಚಲಾಯಿಸಲು ಎಲ್ಲಾ ರೀತಿಯ ಅನುಕೂಲತೆ ಕಲ್ಪಿಸಿದೆ, ಇದರ ಸದುಪಯೋಗವನ್ನು ಅರ್ಹರು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್‍ನ ಜಂಟಿ ಕಾರ್ಯದರ್ಶಿ ವಿನಾಯಕ್ ಎಸ್.ಎ. ತೇಜರಾಜ್, ರಾಜು, ಸುಮೇಶ್ ರಾಮನ್, ವಿಶ್ವ, ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ, ಮಡಿಕೇರಿ ತಾಲ್ಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ., ಕಾರ್ಯದರ್ಶಿ ರವಿಕುಮಾರ್, ಕೌಸರ್, ರೋಟರಿ ವುಡ್ಸ್ ನಿರ್ದೇಶಕ ವಿಕ್ರಂ ಜಾದೂಗಾರ್, ಲೋಕೇಶ್, ವಿವೇಕಾನಂದ ಯೂತ್ ಮೂವ್‍ಮೆಂಟ್ ನಿರ್ದೇಶಕ ಡಾ.ಪ್ರಶಾಂತ್, ಸಂಚಾಲಕ ಅಂಕಾಚಾರಿ, ಯೂತ್ ರೆಡ್ ಕ್ರಾಸ್ ಉಪಾಧ್ಯಕ್ಷೆ ಡಾ.ಅನುಶ್ರೀ, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಪ್ರಮುಖರು ಹಾಜರಿದ್ದರು.

ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎಂ.ಧನಂಜಯ್ ಸ್ವಾಗತಿಸಿದ ಕಾರ್ಯಕ್ರಮವನ್ನು ಅನಿಲ್ ಎಚ್.ಟಿ. ನಿರೂಪಿಸಿದರು. ರಾಜಾಸೀಟ್ ನಲ್ಲಿ ನಾನು ಮತದಾನ ಮಾಡುತ್ತೇನೆ ಎಂಬ ಘೋಷಣೆಯನ್ನೂ ಕೂಗಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು