News Karnataka Kannada
Thursday, May 02 2024
ಮಡಿಕೇರಿ

30 ವರ್ಷಗಳಿಂದ ಮೂಲಭೂತ ಸೌಕರ್ಯಗಳಿಂದ ತಾರತಮ್ಯ: ಮತ ಬಹಿಷ್ಕಾರಕ್ಕೆ ಮುಂದಾದ ಗ್ರಾಮಸ್ಥರು

ಕಳೆದ 30 ವರ್ಷಗಳಿಂದ ಗ್ರಾಮಕ್ಕೆ ತೀರಾ ಅಗತ್ಯವಿರುವ ಸರಕಾರದ ಮತ್ತು ಜನಪ್ರತಿನಿಧಿಗಳ ಮೂಲಭೂತ ಸೌಲಭ್ಯಗಳ ತಾರತಮ್ಯವನ್ನು ವಿರೋಧಿಸಿ ಬಿಟ್ಟಂಗಾಲ ಗ್ರಾ.ಪಂ. ವ್ಯಾಪ್ತಿಯ ಅಂಬಟ್ಟಿ ಗ್ರಾಮಸ್ಥರು ಇದೀಗ ಮತ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.
Photo Credit : NewsKarnataka

ಮಡಿಕೇರಿ: ಕಳೆದ 30 ವರ್ಷಗಳಿಂದ ಗ್ರಾಮಕ್ಕೆ ತೀರಾ ಅಗತ್ಯವಿರುವ ಸರಕಾರದ ಮತ್ತು ಜನಪ್ರತಿನಿಧಿಗಳ ಮೂಲಭೂತ ಸೌಲಭ್ಯಗಳ ತಾರತಮ್ಯವನ್ನು ವಿರೋಧಿಸಿ ಬಿಟ್ಟಂಗಾಲ ಗ್ರಾ.ಪಂ. ವ್ಯಾಪ್ತಿಯ ಅಂಬಟ್ಟಿ ಗ್ರಾಮಸ್ಥರು ಇದೀಗ ಮತ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.

ಮತ ಬಹಿಷ್ಕಾರ ಕುರಿತ ಬ್ಯಾನರ್ ಗಳನ್ನು ಇದೀಗ ಮುಖ್ಯ ರಸ್ತೆಯಲ್ಲಿ ಗ್ರಾಮಸ್ಥರು ಅಳವಡಿಸಿದ್ದು, ‘ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ, ಚರಂಡಿ, ಶುದ್ಧ ಕುಡಿಯುವ ನೀರು, ದಾರಿದೀಪ ಮೊದಲಾದ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಗ್ರಾಮಕ್ಕೆ ಕಲ್ಪಿಸುವವರೆಗೂ ಯಾವುದೇ ಪಕ್ಷಗಳು ಮತ್ತು ಮುಖಂಡರು ಮತಯಾಚನೆಗಾಗಿ ನಮ್ಮ ಗ್ರಾಮವನ್ನು ಪ್ರವೇಶಿಸಬೇಡಿ’ ಎಂದು ಬ್ಯಾನರ್ ನಲ್ಲಿ ಬರೆದು ಪ್ರದರ್ಶಿಸಲಾಗಿದೆ.

ಗ್ರಾಮಕ್ಕೆ ಕನಿಷ್ಠ ಮೂಲಸೌಕರ್ಯ ಒದಗಿಸಲು ಇದುವರೆಗೂ ಸಾಧ್ಯವಾಗದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಅತಿ ದೊಡ್ಡ ದುರಂತ. ಬಹುತೇಕ ಬಡತನ ರೇಖೆಗಿಂತ ಕೆಳಗಿನ ಜನರು ಹೆಚ್ಚಾಗಿ ನೆಲೆಸಿರುವ ಈ ಗ್ರಾಮದಲ್ಲಿ ಸರಕಾರದ ಕನಿಷ್ಠ ಸೌಲಭ್ಯವನ್ನು ಒದಗಿಸಿ ಎಂದು ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಮನವಿ ನೀಡುತ್ತಾ ಬಂದಿದ್ದರೂ ಅಂಬಟ್ಟಿ ಗ್ರಾಮವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಈ ಕಾರಣದಿಂದ ಇದೀಗ ಗ್ರಾಮವಾಸಿಗಳಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ ಬಹಿಷ್ಕರಿಸುವುದು ಅನಿವಾರ್ಯವಾಗಿದೆ ಎಂದು ಗ್ರಾಮಸ್ಥರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೂಲಸೌಕರ್ಯ ವಂಚಿತ ಅಂಬಟ್ಟಿ ಗ್ರಾಮದ ದುಸ್ಥಿತಿಯ ಬಗ್ಗೆ ಈಗಾಗಲೇ ಹಲವು ಬಾರಿ ವಿವಿಧ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿದೆ. ಅಲ್ಲದೆ ಶಾಸಕರ ಬಳಿ ತೆರಳಿಯೂ ಮನವಿ ಸಲ್ಲಿಸಲಾಗಿದೆ. ಆದರೂ ಇದುವರೆಗೆ ಯಾವುದೇ ಸ್ಪಂದನೆ ದೊರೆತಿಲ್ಲ. ಜಲಜೀವನ್ ಯೋಜನೆಯಡಿ ನೀರಿನ ಟ್ಯಾಂಕ್ ಮತ್ತು ಕೊಳವೆಬಾವಿ ಅಳವಡಿಸಿದರೂ ಇದುವರೆಗೂ ನೀರಿನ ಸಂಪರ್ಕ ಕಲ್ಪಿಸಿಲ್ಲ.

ಸಂಜೆ ವೇಳೆ ವನ್ಯಪ್ರಾಣಿಗಳ ಹಾವಳಿ ಈ ಭಾಗದಲ್ಲಿ ಹೆಚ್ಚಿದ್ದು, ಇದಕ್ಕಾಗಿ ಬೀದಿ ದೀಪಗಳನ್ನು ಅಳವಡಿಸುವಂತೆ ಒತ್ತಾಯಿಸಿದರೂ ಅದು ಇದುವರೆಗೂ ಅನುಷ್ಠಾನಗೊಂಡಿಲ್ಲ. ಮಳೆಗಾಲದಲ್ಲಿ ರಸ್ತೆಯ ನೀರು ಸರಾಗವಾಗಿ ಹರಿಯಲು ಚಿಕ್ಕ ಚರಂಡಿ ವ್ಯವಸ್ಥೆ ಕೂಡ ಇದುವರೆಗೂ ಸರಕಾರದಿಂದ ಒದಗಿಸಲು ಸಾಧ್ಯವಾಗಿಲ್ಲ ಎಂದು ವಿವರಿಸಿರುವ ಅಂಬಟ್ಟಿ ಗ್ರಾಮದ ನಿವೃತ್ತ ಸೈನಿಕರಾದ ಎಂ.ಕೆ. ಮುಸ್ತಫಾ, ಕಳೆದ 30 ವರ್ಷಗಳಿಂದ ಗ್ರಾಮದ ಕಿರಿದಾದ ರಸ್ತೆ ಡಾಂಬರನ್ನೇ ಕಂಡಿಲ್ಲ ಎಂದು ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದೇಶ ಸೇವೆಯ ಭಾಗವಾಗಿ ಸೇನೆಯಲ್ಲಿ ಕರ್ತವ್ಯದಲ್ಲಿದ್ದಾಗ ಭಾರತದ ಹಲವಾರು ರಾಜ್ಯಗಳ ಕುಗ್ರಾಮಗಳನ್ನು ಖುದ್ದಾಗಿ ಕಂಡಿದ್ದೇನೆ. ಆದರೆ ಅಂಬಟ್ಟಿ ಗ್ರಾಮದಂತಹ ನಿರ್ಲಕ್ಷಿತ ಪ್ರದೇಶವನ್ನು ನೋಡಿರಲಿಲ್ಲ. ಆಳುವ ವರ್ಗ ಕುಗ್ರಾಮವೊಂದನ್ನು ಈ ರೀತಿಯಾಗಿ ನಿರ್ಲಕ್ಷಿಸಬಾರದಿತ್ತು.

ಚುನಾವಣೆ ಸಂದರ್ಭದಲ್ಲಿ ಮತಯಾಚನೆಗೆ ಮಾತ್ರ ಬರುವ ರಾಜಕೀಯ ಪಕ್ಷದ ಪ್ರಮುಖರು, ಗ್ರಾಮದ ಸ್ಥಿತಿಯನ್ನು ಕಂಡು ಕೂಡಲೇ ಪರಿಹಾರ ಒದಗಿಸುವುದಾಗಿ ಸುಳ್ಳು ಭರವಸೆಯನ್ನು ನೀಡಿ ಹೋದರೆ ಮತ್ತೆ ಅಂಬಟ್ಟಿ ಗ್ರಾಮವನ್ನು ಸಂಪೂರ್ಣವಾಗಿ ಮರೆತು ಬಿಡುತ್ತಾರೆ. ಕಳೆದ ಹಲವು ವರ್ಷಗಳಿಂದ ಎಲ್ಲ ರಾಜಕೀಯ ಪಕ್ಷಗಳು ಇದನ್ನೇ ಮಾಡಿಕೊಂಡು ಬಂದಿದೆ. ಆದ್ದರಿಂದ ನಮಗೆ ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕಾರಣಿಗಳು ನೀಡುವ ಭರವಸೆಗಳ ಬಗ್ಗೆ ಯಾವುದೇ ನಂಬಿಕೆ ಉಳಿದಿಲ್ಲ. ಈ ಕಾರಣದಿಂದ ಈ ಚುನಾವಣೆಯಲ್ಲಿ ಮತ ಬಹಿಷ್ಕಾರದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಗ್ರಾಮಸ್ಥರ ಪರವಾಗಿ ಮಾಜಿ ಸೈನಿಕ ಮುಸ್ತಫಾ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು