News Karnataka Kannada
Monday, May 20 2024
ಮಡಿಕೇರಿ

ʼಮೇ 18-19 ಹಳ್ಳಿಗಟ್ಟು ಬೋಡ್ ನಮ್ಮೆ: ಮೇ 11 ರಂದು ದೇವ ಕಟ್ಟ್ ಬೀಳುವುದುʼ

ಕೆಸರಿನ ಓಕುಳಿಯ ಹಬ್ಬವೆಂದು ಖ್ಯಾತಿ ಪಡೆದಿರುವ ಹಳ್ಳಿಗಟ್ಟು ಶ್ರೀ ಭದ್ರಕಾಳಿ ಹಾಗೂ ಶ್ರೀ ಗುಂಡಿಯತ್ ಅಯ್ಯಪ್ಪ ದೇವರ ವಾರ್ಷಿಕ ಬೋಡ್ ನಮ್ಮೆ (ಬೇಡು ಹಬ್ಬ) ಇದೆ. ಮೇ18 ಹಾಗೂ 19ರಂದು ಶನಿವಾರ ಭಾನುವಾರ ನಡೆಯಲ್ಲಿದ್ದು ಮೇ 11ಕ್ಕೆ ಹಬ್ಬದ ಸಾಂಪ್ರದಾಯಿಕ ಕಟ್ಟು ಬೀಳುವ ಮೂಲಕ ವಿವಿಧ ಕಟ್ಟುಪಾಡುಗಳಿಗೆ ಚಾಲನೆ ನೀಡಲಾಗುತ್ತದೆ ಎಂದು ತಕ್ಕಮುಖ್ಯಸ್ಥರು ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಚಮ್ಮಟೀರ ಪ್ರವೀಣ್ ಉತ್ತಪ್ಪ ತಿಳಿಸಿದ್ದಾರೆ.
Photo Credit : NewsKarnataka

ಮಡಿಕೇರಿ: ಕೆಸರಿನ ಓಕುಳಿಯ ಹಬ್ಬವೆಂದು ಖ್ಯಾತಿ ಪಡೆದಿರುವ ಹಳ್ಳಿಗಟ್ಟು ಶ್ರೀ ಭದ್ರಕಾಳಿ ಹಾಗೂ ಶ್ರೀ ಗುಂಡಿಯತ್ ಅಯ್ಯಪ್ಪ ದೇವರ ವಾರ್ಷಿಕ ಬೋಡ್ ನಮ್ಮೆ (ಬೇಡು ಹಬ್ಬ) ಇದೆ. ಮೇ18 ಹಾಗೂ 19ರಂದು ಶನಿವಾರ ಭಾನುವಾರ ನಡೆಯಲ್ಲಿದ್ದು ಮೇ 11ಕ್ಕೆ ಹಬ್ಬದ ಸಾಂಪ್ರದಾಯಿಕ ಕಟ್ಟು ಬೀಳುವ ಮೂಲಕ ವಿವಿಧ ಕಟ್ಟುಪಾಡುಗಳಿಗೆ ಚಾಲನೆ ನೀಡಲಾಗುತ್ತದೆ ಎಂದು ತಕ್ಕಮುಖ್ಯಸ್ಥರು ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಚಮ್ಮಟೀರ ಪ್ರವೀಣ್ ಉತ್ತಪ್ಪ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಚಮ್ಮಟೀರ ಪ್ರವೀಣ್ ಉತ್ತಪ್ಪ ಮಾತನಾಡಿ ಇದೇ ಮೇ 11ರಂದು ಸಂಜೆ 05-00 ಗಂಟೆಗೆ ಮೂಕಳೇರ ಬಲ್ಯಮನೆ ಸಮೀಪದ ಅಂಬಲದಲ್ಲಿ ಹಬ್ಬಕ್ಕೆ ಕಟ್ಟು ಬೀಳಲಿದ್ದು ಅಂದಿನಿಂದ ಹಬ್ಬ ಆಚರಣೆಯ ತನಕ ಹಳ್ಳಿಗಟ್ಟು ಊರಿನೊಳಗೆ ಪ್ರಾಣಿ ಹಿಂಸೆ ಹಾಗೂ ಹತ್ಯೆ ಮಾಡುವಂತಿಲ್ಲ,

ಮರಗಿಡಗಳನ್ನು ಕುಡಿಯುವಂತ್ತಿಲ್ಲ, ಊರಿನೊಳಗಿರುವ ಮಂದಿ ಊರಿನ ಹೊರಗೆ ಹೋಗಿ ರಾತ್ರಿ ತಂಗುವಂತಿಲ್ಲ. ಒಂದು ಸಮಯ ಉಳಿದುಕೊಳ್ಳುವುದು ಅನಿವಾರ್ಯವಾದರೆ ಊರಿನವರಿಗೆ ತಿಳಿಸಿ ಹೋಗಬೇಕು ಹಾಗೂ ನಂತರ ತಪ್ಪು ಕಾಣಿಕೆಯನ್ನು ಹಾಕಬೇಕು. ಹೀಗೆ ಹಲವಾರು ಬಗೆಯ ಕಟ್ಟುಪಾಡುಗಳಿದ್ದು ಅದನ್ನು ಪಾಲಿಸಬೇಕಾಗುತ್ತದೆ ಪಾಲಿಸದಿದ್ದರೆ ದಂಡವನ್ನು ತೆರಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.

ಕೆಸರು ಎರಚಾಟದ ಹಬ್ಬವೆಂದೇ ಖ್ಯಾತಿ ಪಡೆದಿರುವ ಹಳ್ಳಿಗಟ್ಟ್ ಬೋಡ್ ನಮ್ಮೆ ಪ್ರತಿ ವರ್ಷ ಮೇ ತಿಂಗಳ ಮೂರನೇ ಶನಿವಾರ ಹಾಗೂ ಭಾನುವಾರ ನಡೆಯಲಿದ್ದು, ಪ್ರಸ್ತುತ ವರ್ಷ ಮೇ 18 ಹಾಗೂ 19ರಂದು ನಡೆಯಲಿದೆ.

ಮೇ 18ರಂದು ಶನಿವಾರ ಜೋಡುಬೀಟಿಯಲ್ಲಿರುವ ಗುಂಡಿಯತ್ ಅಯ್ಯಪ್ಪ ದೇವರ ಅವುಲ್ ಎಂಬ ವಿಶೇಷ ಆಚರಣೆ ನಡೆಯಲಿದ್ದು ಇಲ್ಲಿ ಕೊಡವ ಜನಾಂಗದವರೇ ಪೂಜಾರಿಗಳಾಗಿದ್ದಾರೆ (ಚಮ್ಮಟೀರ ಹಾಗೂ ಮೂಕಳೇರ). 18ರಂದು ಶನಿವಾರ ಮಧ್ಯಾಹ್ನದ ನಂತರ ಊರುತಕ್ಕರಾದ ಚಮ್ಮಟೀರ ಕುಟುಂಬದ ಬಲ್ಯಮನೆಯಿಂದ ಪೊಲವಪ್ಪ ಹೊರಡುವ ಮೂಲಕ ಎರಡು ದಿನಗಳ ಹಬ್ಬಕ್ಕೆ ಚಾಲನೆ ದೊರೆಯುತ್ತದೆ.

ಚಮ್ಮಟೀರ ಕುಟುಂಬದ ಬಲ್ಯಮನೆಯಿಂದ ಹೊರಟ ಪೊಲವಪ್ಪ ತೆರೆ ಮಚ್ಚಿಯಂಡ ಬಲ್ಯಮನೆ ಸಮೀಪದ ಅಂಬಲಕ್ಕೆ ತೆರಳಿ ವಿವಿಧ ಪೂಜಾವಿಧಿವಿದಾನಗಳು ಹಾಗೂ ಆಚರಣೆಯೊಂದಿಗೆ ಊರಿನ ವಿವಿಧ ನಿಗದಿತ ಸ್ಥಳಗಳಿಗೆ ತೆರಳಿ ಅಪರಾಹ್ನ ಸುಮಾರು 3ಗಂಟೆಯ ಸಮಯದಲ್ಲಿ ಪೊಲವಪ್ಪ ದೇವಸ್ಥಾನಕ್ಕೆ (ಜೋಡುಬೀಟಿಯಿಂದ ಮೂಕಳೇರ ಬಲ್ಯಮನೆಗೆ ಹೋಗುವ ರಸ್ತೆಯಲ್ಲಿರುವ ದೇವಸ್ಥಾನ) ತೆರಳಿ ಅಲ್ಲಿ ವಿಶೇಷ ಪೂಜಾ ವಿಧಿ ವಿಧಾನಗಳನ್ನು ಆಚರಿಸುತ್ತಾರೆ.

ಬೆಳಿಗ್ಗೆಯಿಂದ ವಿವಿಧ ಕಟ್ಟುಪಾಡುಗಳನ್ನು ಆಚರಿಸುವ ಮೂಲಕ ಉಪವಾಸ ವೃತ್ತದಲ್ಲಿರುವ ಇಬ್ಬರು ಕೊಡವ ಪೂಜಾರಿಗಳು ಪೊಲವಪ್ಪ ದೇವಸ್ಥಾನಕ್ಕೆ ಆಗಮಿಸಿ ವಿವಿಧ ಆಚರಣೆಯನ್ನು ಮಾಡುತ್ತಾರೆ ಮಾತ್ರವಲ್ಲ ಇಲ್ಲಿಗೆ ಮಣ್ಣಿನ ಬೋಟೆಕಾರ (ಮಣ್ಣಿನಿಂದ ಮಾಡಲಾದ ನಾಯಿ) ಅರ್ಪಿಸುತ್ತಾರೆ ನಂತರ ವಿವಿಧ ಆಚರಣೆಯ ಬಳಿಕ ಭಕ್ತರು ಹರಕೆ ಕಾಣಿಕೆ ಸಲ್ಲಿಸುತ್ತಾರೆ.

ಇಲ್ಲಿಗೆ ಮಾತ್ರ ಮಹಿಳೆಯರು ಬರಬಹುದಾಗಿದ್ದು ನಂತರ ಜೋಡುಬೀಟಿಯಲ್ಲಿರುವ ಗುಂಡಿಯತ್ ಅಯ್ಯಪ್ಪ ದೇವಸ್ಥಾನದಲ್ಲಿ ನಡೆಯುವ ಆಚರಣೆಗೆ ಮಹಿಳೆಯ ಆಗಮನ ನಿಷೇಧ. ಈ ಎಲ್ಲಾ ಆಚರಣೆಗಳಿಗೂ ಬ್ರಾಹ್ಮಣ ಪೂಜಾರಿಗಳ ಪೂಜೆ ನಿಷೇಧವಾಗಿದ್ದು ಈ ಎರಡು ದೇವಸ್ಥಾನಗಳಲ್ಲಿ ಚಮ್ಮಟೀರ ಹಾಗೂ ಮೂಕಳೇರ ಕುಟುಂಬದ ಸದಸ್ಯರೇ ಪೂಜಾರಿಗಳು.

18ರಂದು ಶನಿವಾರ ಸಂಜೆ 5ಗಂಟೆಯ ನಂತರ ಪೊನ್ನಂಪೇಟೆ ಗೋಣಿಕೊಪ್ಪ ಮುಖ್ಯ ರಸ್ತೆಯ ಜೋಡುಬೀಟಿಯಲ್ಲಿರುವ ಗುಂಡಿಯತ್ ಅಯ್ಯಪ್ಪ ದೇವಸ್ಥಾನದಲ್ಲಿ ವಿಶೇಷ ಅವುಲ್ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆಯಿಂದ ವಿವಿಧ ವ್ರತಗಳನ್ನು ಪಾಲಿಸುವ ಇಬ್ಬರು ಕೊಡವ ಪೂಜಾರಿಗಳು ಊರಿನ ನಿಗದಿತ ಸ್ಥಳದಲ್ಲಿ ದೇವರ ಕೆರೆಯಲ್ಲಿ ಸ್ನಾನಮಾಡಿ ಅಲ್ಲಿಯೇ ಬೆಂಕಿಯನ್ನು ಹಾಕಿ ಮಣ್ಣಿನ ಮಡಿಕೆಯಲ್ಲಿ ಭತ್ತವನ್ನು ಬೇಯಿಸಿ ಹದಮಾಡಿ ನಂತರ ಅದನ್ನು ಮತ್ತೊಂದು ಮಣ್ಣಿನ ಪಾತ್ರೆಯಲ್ಲಿ ಹುರಿದು ಅಲ್ಲಿಯೇ ನಿರ್ಮಿಸಲಾಗಿರುವ ಕಲ್ಲಿನಲ್ಲಿ ಒನಕೆಯಿಂದ ಕುಟ್ಟಿ ಅವಲಕ್ಕಿ ಮಾಡುತ್ತಾರೆ.

ಇದಕ್ಕೆ ಒಂದಷ್ಟು ಬೆಲ್ಲ ಹಾಗೂ ಬಾಳೆಹಣ್ಣು ಸೇರಿಸಿ ಗುಂಡಿಯತ್ ಅಯ್ಯಪ್ಪ ದೇವಸ್ಥಾನಕ್ಕೆ ತಂದು ಇದನ್ನೆ ಪ್ರಸಾದ ರೂಪದಲ್ಲಿ ಜನರಿಗೆ ನೀಡುತ್ತಾರೆ ಹಾಗೂ ದೇವರಿಗೆ ನೈವೇದ್ಯ ರೂಪದಲ್ಲಿ ಅರ್ಪಿಸುತ್ತಾರೆ. ನಂತರ ಇಲ್ಲಿ ಭಕ್ತರಿಂದ ಹರಕೆಯ ರೂಪದಲ್ಲಿ ಸಾವಿರಾರು ತೆಂಗಿನಕಾಯಿಯನ್ನು ಈಡುಕಾಯಿ ರೂಪದಲ್ಲಿ ಒಡೆಯುತ್ತಾರೆ. ವಿವಿಧ ಆಚರಣೆಯ ಬಳಿಕ ಅಲ್ಲಿಂದ ತೆರಳಿ ಚಮ್ಮಟೀರ ಕುಟುಂಬದ ಬಲ್ಯಮನೆಯಿಂದ ರಾತ್ರಿ ಹನ್ನೆರಡು ಗಂಟೆಯೊಳಗೆ ಮನೆಕಳಿ ಹೊರಡಲಿದ್ದು 19ರಂದು ಮುಂಜಾನೆ ಮಚ್ಚಿಯಂಡ ಕುಟುಂಬದ ಅಂಬಲದಲ್ಲಿ ಮನೆ ಕಳಿ ಮುಗಿಯಲಿದೆ.

19ರಂದು ಭಾನುವಾರ ಚಮ್ಮಟೀರ ಹಾಗೂ ಮೂಕಳೇರ ಮನೆಯಿಂದ ತಲಾ ಒಂದೊಂದು ಕುದುರೆ ಹಾಗೂ ದೇವರ ಮೊಗ ಹೊರಡಲಿದ್ದು, ಸಂಜೆ ಸುಮಾರು 3ಗಂಟೆಯ ನಂತರ ಹಳ್ಳಿಗಟ್ಟುವಿನಲ್ಲಿರುವ ಭದ್ರಕಾಳಿ ದೇವಸ್ಥಾನದ ಹತ್ತಿರದ ಅಂಬಲದಲ್ಲಿ ಎರಡು ಕುದುರೆ ಹಾಗೂ ದೇವರ ಮೊಗ ಮುಖಾಮುಖಿಯಾಗಿ ಸಂಭ್ರಮಿಸಿ ವಿವಿಧ ರೀತಿಯ ಆಚರಣೆಯ ಬಳಿಕ ಹತ್ತಿರದಲ್ಲಿರುವ ದೇವರ ಕೆರೆಯಿಂದ ಕೆಸರನ್ನು ತಂದು ಊರಿನವರು ಪರಸ್ಪರ ಕೆಸರು ಎರಚಾಟದೊಂದಿಗೆ ಹಬ್ಬವನ್ನು ವಿಶಿಷ್ಟವಾಗಿ ಆಚರಿಸುತ್ತಾರೆ.

ಇಲ್ಲಿ ಹೊರಗಿನ ಊರಿನವರಿಗೆ ಅತಿಥಿಗಳಿಗೆ, ನೆಂಟರಿಗೆ ಕೆಸರು ಎರಚುವಂತಿಲ್ಲ. ಆದರೆ ಅವರಿಗೂ ಮುಕ್ತವಾಗಿ ಊರಿನವರೊಂದಿಗೆ ಸಂಭ್ರಮಿಸಲು ಅವಕಾಶವಿದ್ದು ಅಂತಹವರಿಗೆ ಒಂದೊಂದು ಬೆತ್ತ ನೀಡಲಾಗುತ್ತದೆ. ಬೆತ್ತದ ಕೋಲು ಹಿಡಿದವರಿಗೆ ಕೆಸರು ಹಾಕುವಂತಿಲ್ಲ, ಹಾಕಿದ್ದರೆ ಅವರಿಗೆ ದಂಡ ಬೀಳುತ್ತದೆ. ಕೆಸರು ಎರಚಾಟದ ನಂತರ ಹತ್ತಿರದ ದೇವಸ್ಥಾನಕ್ಕೆ ಹೋಗಿ ಪ್ರದಕ್ಷಿಣೆ ಹಾಕಿ ಹರಕೆ ಕಾಣಿಕೆಗಳನ್ನು ಸಲ್ಲಿಸುತ್ತಾರೆ ಎಂದು ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಮಾಹಿತಿ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು