ಕೊಡಗು: ನೆರೆ ರಾಜ್ಯ ಕೇರಳದಲ್ಲಿ ಕೊರೊನಾ ವೈರಸ್ ರೂಪಾಂತರಿ ಜೆಎನ್.1 (JN.1) ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದಿದೆ. ಈ ಹಿನ್ನಲೆಯಲ್ಲಿ 60 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಹೃದಯ ಸಂಬಂಧಿ ಸಮಸ್ಯೆ ಇದ್ರೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಡಿಕೇರಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿಯೂ ಕಟ್ಟೆಚ್ಚರ ವಹಿಸಲಾಗುತ್ತಿದೆ. ಆದರೆ, ಯಾವುದೇ ನಿರ್ಬಂಧ ಹೇರುವ ಯೋಚನೆ ಸದ್ಯಕ್ಕಿಲ್ಲ ಎಂದರು.
ಕೊರೊನಾ ಲಕ್ಷಣ ಇದ್ದರೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ರಾಜ್ಯದಲ್ಲಿ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಸಭೆ ಮಾಡಿ ಚರ್ಚೆ ಮಾಡಿದ್ದೇವೆ. ಕೇಂದ್ರ ಸರ್ಕಾರ ಹಾಗೂ ತಜ್ಞರ ಜೊತೆ ಕೂಡ ಚರ್ಚೆ ಮಾಡಲಾಗಿದೆ. ಹೆಚ್ಚು ಸೋಂಕು ಪತ್ತೆ ಪರೀಕ್ಷೆ ಮಾಡುವಂತೆ ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ. ಅಗತ್ಯವಿರುವ ಬೆಡ್, ಪಿಪಿಇ ಕಿಟ್, ಆಕ್ಸಿಜನ್ ಸಿದ್ಧವಾಗಿಡಲಾಗಿದೆ ಎಂದರು.