News Karnataka Kannada
Saturday, May 04 2024
ಮಡಿಕೇರಿ

ಮಡಿಕೇರಿ| ಕೂಟುಹೊಳೆಯಿಂದ ರಸ್ತೆ ಮುಳುಗಡೆ : ಹೆಚ್ಚುವರಿ ಹಲಗೆ ತೆರವಿಗೆ ಗ್ರಾಮಸ್ಥರ ಒತ್ತಾಯ

: Villagers demand removal of additional slabs
Photo Credit :

ಮಡಿಕೇರಿ: ನಗರಕ್ಕೆ ಕುಡಿಯುವ ನೀರು ಒದಗಿಸುವ ಕೂಟುಹೊಳೆಯ ಹೆಚ್ಚುವರಿ ಹಲಗೆಗಳನ್ನು ತೆರವುಗೊಳಿಸದೆ ಇರುವುದರಿಂದ ಸುತ್ತಮುತ್ತಲ ಗ್ರಾಮಗಳಿಗೆ ಸಂಕಷ್ಟ ಎದುರಾಗಿದೆ. ಧಾರಾಕಾರ ಮಳೆಯಿಂದ ರಸ್ತೆ ಮತ್ತು ಗದ್ದೆಗಳು ಮುಳುಗಡೆಯಾಗಿದ್ದು, ಗಾಳಿಬೀಡು ಗ್ರಾಮದ ಮನೆಗಳು ಅಪಾಯನ್ನು ಎದುರಿಸುತ್ತಿವೆ.

ಈ ಕುರಿತು ಜಿಲ್ಲಾಡಳಿತ ಮತ್ತು ಮಡಿಕೇರಿ ನಗರಸಭೆಗೆ ಮನವಿ ಪತ್ರ ಸಲ್ಲಿಸಿರುವ ಗಾಳಿಬೀಡು ಸ್ನೇಹಿತರ ಯುವಕ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಕೂಟುಹೊಳೆಯ ಹಿನ್ನೀರು ಆತಂಕವನ್ನು ಸೃಷ್ಟಿಸಿರುವ ಬಗ್ಗೆ ವಿವರಿಸಿದರು.

ಮಡಿಕೇರಿ ತಾಲ್ಲೂಕು ಕೆ.ನಿಡುಗಣೆ ಗ್ರಾಮ ಹಾಗೂ ಗಾಳಿಬೀಡು ಸರಹದ್ದಿನಲ್ಲಿರುವ ಕೂಟುಹೊಳೆ ಅಣೆಕಟ್ಟಿನ ಮೂಲಕ ನೀರನ್ನು ಸಂಗ್ರಹಿಸಿ ಮಡಿಕೇರಿ ನಗರಕ್ಕೆ ನೀರನ್ನು ಒದಗಿಸಲಾಗುತ್ತಿದೆ. ಗಾಳಿಬೀಡು, ಮೊಣ್ಣಂಗೇರಿಯಿಂದ ಕೂಟುಹೊಳೆ ಅಣೆಕಟ್ಟಿಗೆ ಸಂಪೂರ್ಣ ನೀರಿನ ಒಳಹರಿವು ಇದ್ದು, ಈ ಹೊಳೆಯು ಗಾಳಿಬೀಡು ಮುಖ್ಯರಸ್ತೆಯ ಸನಿಹದಲ್ಲಿ ಹರಿದು ಹೋಗುತ್ತದೆ. ಕೂಟುಹೊಳೆಯ ಅಸುಪಾಸಿನಲ್ಲಿ ಮನೆ ಮತ್ತು ಕೃಷಿ ಗದ್ದೆಗಳಿವೆ.

ಅಣೆಕಟ್ಟಿನ ಮೇಲೆ ತಾತ್ಕಾಲಿಕವಾಗಿ ಹಲಗೆಗಳನ್ನು ಅಳವಡಿಸಿ ಹೆಚ್ಚುವರಿ ನೀರನ್ನು ಸಂಗ್ರಹಿಸಲಾಗುತ್ತದೆ. ಹೆಚ್ಚುವರಿ ನೀರು ಸಂಗ್ರಹಣೆಗಾಗಿ ಅಳವಡಿಸಲಾಗಿರುವ ಹಲಗೆಗಳನ್ನು ಮಳೆಗಾಲದಲ್ಲಿ ತೆರವುಗೊಳಿಸುವುದು ವಾಡಿಕೆ. ಆದರೆ 2018 ರ ನಂತರ ಇಲ್ಲಿಯವರೆಗೆ ಹಲೆಗಳನ್ನು ತೆರವುಗೊಳಿಸಿಲ್ಲ. ಪ್ರಸ್ತುತ ಈ ಭಾಗದಲ್ಲಿ 60 ಇಂಚಿಗೂ ಹೆಚ್ಚು ಮಳೆಯಾಗಿದ್ದು, ಕೂಟುಹೊಳೆ ಹಿನ್ನೀರಿನಿಂದ ರಸ್ತೆ ಮತ್ತು ಗದ್ದೆಗಳು ಮುಳುಗಡೆಯಾಗಿರುವುದಲ್ಲದೆ ಮನೆಗಳು ಅಪಾಯವನ್ನು ಎದುರಿಸುತ್ತಿವೆ ಎಂದು ಗಮನ ಸೆಳೆದರು.

ಪ್ರತಿ ವರ್ಷ ನಗರಸಭೆಯ ಗಮನಕ್ಕೆ ತಂದು ಹಲಗೆ ತೆರವಿಗೆ ಮನವಿ ಮಾಡಿದರೂ ಯಾವುದೇ ಸ್ಪಂದನೆ ದೊರೆತ್ತಿಲ್ಲ ಎಂದು ಆರೋಪಿಸಿದ ಗ್ರಾಮಸ್ಥರು, ಮುಂದಿನ ಎರಡು ತಿಂಗಳುಗಳ ಕಾಲ ಅತಿ ಹೆಚ್ಚು ಮಳೆಯಾಗುವುದರಿಂದ ಕೂಟುಹೊಳೆ ಅಣೆಕಟ್ಟಿಗೆ ಹೆಚ್ಚಿನ ಒಳಹರಿವು ಬಂದು ಅಪಾಯ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ರಸ್ತೆಗಳು ಮುಳುಗಡೆಯಾಗುವುದರಿಂದ ಸಂಪರ್ಕ ಕಡಿತಗೊಂಡು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಸಂಕಷ್ಟ ಎದುರಿಸಬೇಕಾಗುತ್ತದೆ. ಗದ್ದೆಗಳು ಜಲಾವೃತವಾದರೆ ಕೃಷಿ ಕಾರ್ಯವನ್ನು ಕೈಬಿಡಬೇಕಾಗುತ್ತದೆ. ಆದ್ದರಿಂದ ಹೆಚ್ಚುವರಲಿ ಹಲಗೆಗಳನ್ನು ತಕ್ಷಣ ತೆರವುಗೊಳಿಸಲು ನಗರಸಭೆ ತುರ್ತು ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಮುಂದೆ ಆಗುವ ಅನಾಹುತಗಳಿಗೆ ಅಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ ಎಂದು ಸಂಘದ ಪ್ರಮುಖರು ಹಾಗೂ ಗ್ರಾಮಸ್ಥರು ಎಚ್ಚರಿಕೆ ನೀಡಿದರು.

ಈಗಾಗಲೇ ಕುಂಡಾಮೇಸ್ತ್ರಿ ಯೋಜನೆ ಕಾರ್ಯಗತವಾಗಿದ್ದು, ಹೆಚ್ಚುವರಿ ನೀರನ್ನು ತಡೆಹಿಡಿಯುವ ಅಗತ್ಯವಿಲ್ಲವೆಂದು ಅಭಿಪ್ರಾಯಪಟ್ಟರು.

ಸಂಘದ ಅಧ್ಯಕ್ಷ ಕೋಳುಮುಡಿಯನ ಮೋಹನ್, ಪದಾಧಿಕಾರಿಗಳಾದ ಕೊಂಬಾರನ ರೋಶನ್ ಗಣಪತಿ, ಕರಕರನ ಪವನ್, ಕೆ.ಬಾಲಕೃಷ್ಣ, ಹೇಮಂತ್ ಕುಮಾರ್, ಕುಶಾನ್, ಸದಾನಂದ, ಮನೋಜ್ ಮತ್ತಿತರರು ನಗರಸಭಾ ಪೌರಾಯುಕ್ತ ರಾಮದಾಸ್ ಹಾಗೂ ಜಿಲ್ಲಾಡಳಿತದ ಅಧಿಕಾರಿ ಪ್ರಕಾಶ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು