News Karnataka Kannada
Saturday, May 11 2024
ಮಡಿಕೇರಿ

ಮಡಿಕೇರಿ: ಜನಕಲ್ಯಾಣ ಕಾರ್ಯಕ್ರಮಗಳೇ ಅರಸು ನೆನಪಿನಲ್ಲಿ ಉಳಿಯಲು ಕಾರಣ- ನೀಲಗಿರಿ ತಳವಾರ

Madikeri: People's welfare programmes are the reason why Arasu will be remembered: Nilgiris Talavara
Photo Credit :

ಮಡಿಕೇರಿ, ಆ.20: ಜನೋಪಯೋಗಿ ಕಲ್ಯಾಣ ಕಾರ್ಯಕ್ರಮಗಳ ಮೂಲಕವೇ ಸುದೀರ್ಘ ಕಾಲ ಮುಖ್ಯಮಂತ್ರಿಗಳಾಗಿದ್ದ ಡಿ.ದೇವರಾಜು ಅರಸು ಹಾಗೂ ಅವರ ಆಡಳಿತವನ್ನು ಇಂದಿಗೂ ರಾಜ್ಯ ಸ್ಮರಿಸಿಕೊಳ್ಳುತ್ತಿದೆ. ಆದರೆ ಇಂದಿನ ವ್ಯವಸ್ಥೆಗಳನ್ನು ಗಮನಿಸಿದರೆ ನಾವುಗಳು ನೈತಿಕ ಅಧ:ಪತನದಲ್ಲಿದ್ದೇವೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕ ನೀಲಗಿರಿ ತಳವಾರ ವಿಷಾದ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಸುಧಾರಣೆಯ ಹರಿಕಾರ ಡಿ.ದೇವರಾಜ ಅರಸು ಅವರ 107ನೇ ಜನ್ಮದಿನಾಚರಣೆ ಮತ್ತು ಹಿಂದುಳಿದ ವರ್ಗಗಳ ಆರ್ಥಿಕ, ಸಾಮಾಜಿಕ ಸಮಾನತೆಗೆ ಕಾರಣವಾದ ಹಾವನೂರು ಅವರ ವರದಿ ಜಾರಿಗೊಂಡು 50 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಸಹಮತ ವೇದಿಕೆ ಹಾಗೂ ಅಹಿಂದ ಒಕ್ಕೂಟದಿಂದ ಇಬ್ಬರು ಮಹಾನ್ ಚೇತನಗಳನ್ನು ಸ್ಮರಿಸಿಕೊಳ್ಳುವ ಕಾರ್ಯಕ್ರಮ ನಗರದ ಪತ್ರಿಕಾ ಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಳವಾರ ಅಷ್ಟಮದಗಳಲ್ಲಿ ಅಧಿಕಾರದ ಮದವೂ ಒಂದಾಗಿದ್ದು, ಸತ್ಯ, ಸೌಹಾರ್ದತೆ ಮತ್ತು ಆದರ್ಶಗಳನ್ನು ಉಳಿಸಿಕೊಂಡು ಅಧಿಕಾರ ನಡೆಸುವುದು ತುಂಬಾ ಕಷ್ಟ. ಆದರೆ ಇದೆಲ್ಲವನ್ನು ಸಾಧಿಸಿ ತೋರಿಸಿದವರು ಡಿ.ದೇವರಾಜ ಅರಸು ಹಾಗೂ ಹಾವನೂರು ಎಂದು ಶ್ಲಾಘಿಸಿದರು.

ಜನಕಲ್ಯಾಣ ಕಾರ್ಯಕ್ರಮಗಳನ್ನು ಅತ್ಯಂತ ಬುದ್ಧಿವಂತಿಕೆಯಿಂದ ಬಳಸಿಕೊಂಡು ಸಾಮಾಜಿಕ ಸುಧಾರಣೆಯ ಮೂಲಕ ಅಧಿಕಾರ ನಡೆಸಿದ ಕಾರಣಕ್ಕಾಗಿ ಅರಸು ಅವರನ್ನು ರಾಜ್ಯದ ಜನರು ಇಂದಿಗೂ ನೆನಪಿನಲ್ಲಿ ಉಳಿಸಿಕೊಂಡಿದ್ದಾರೆ. ಆದರೆ ಇಂದಿನ ಆಡಳಿತ ವ್ಯವಸ್ಥೆಯ ಪರಿಸ್ಥಿತಿಯೇ ಬದಲಾಗಿದ್ದು, ಮಂತ್ರಿಗಳ ಜುಟ್ಟು ಐಎಎಸ್ ಅಧಿಕಾರಿಗಳ ಕೈಯಲ್ಲಿದೆ. ಅಧಿಕಾರ ನಡೆಸುವವರಿಗೆ ಬುದ್ಧಿ ಮತ್ತು ಚಾಕಚಕ್ಯತೆ ಬೇಕು, ಇದು ಎರಡೂ ಇಲ್ಲದ ಕಾರಣ ಎಡವಟ್ಟುವಗಳಾಗುತ್ತಿವೆ ಎಂದು ಅವರು ಆರೋಪಿಸಿದರು.

ಸಂಘಟನಾ ಶಕ್ತಿ ಮತ್ತು ದೂರದೃಷ್ಟಿ ಇದ್ದ ಕಾರಣದಿಂದಲೇ ಅರಸು ಅವರು ಸುದೀರ್ಘ ಕಾಲ ಆಡಳಿತ ನಡೆಸಿದರು. ವಿರೋಧ ಪಕ್ಷವನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆದರು. ಅಧಿಕಾರವನ್ನು ವಿವೇಚನೆಯಿಂದ ಬಳಸಬೇಕು, ಪ್ರತಿಕೂಲ ವಾತಾವರಣವನ್ನು ಅನುಕೂಲಕರ ಮಾಡಿಕೊಂಡಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದು ತಳವಾರ ಅಭಿಪ್ರಾಯಪಟ್ಟರು.

ಹಾವನೂರು ಆಯೋಗದ ವರದಿ ಐತಿಹಾಸಿಕವಾಗಿದ್ದು, ಬಹುಜನ ಕಲ್ಯಾಣಕ್ಕೆ ಪೂರಕವಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ರಾಜ್ಯ ಉಚ್ಚ ನ್ಯಾಯಾಲಯದ ವಕೀಲ ಎ.ಎಸ್.ಪೊನ್ನಣ್ಣ ಸಾಮಾಜಿಕ ಮತ್ತು ಶೈಕ್ಷಣಿಕ ಮೀಸಲಾತಿ ಪದ್ಧತಿಯನ್ನು ನ್ಯಾಯಾಲಯವೇ ಒಪ್ಪಿಕೊಂಡಿದೆ. ಆದರೆ ಇದರ ಸಮರ್ಪಕ ಅನುಷ್ಠಾನಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆ ಎದುರಾಗಿದೆ. ಇಲ್ಲಿಯವರೆಗೆ ರಾಜ್ಯವನ್ನಾಳಿದ ಯಾವುದೇ ಸರ್ಕಾರ ಮೀಸಲಾತಿ ಜಾರಿಗೆ ನೈಜ ಕಾಳಜಿ ತೋರಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ಜಾತೀವಾರು ಸಮೀಕ್ಷೆ ಪೂರ್ಣಗೊಳಿಸದೆ ಮೀಸಲಾತಿಗಾಗಿ ಲೆಕ್ಕ ನೀಡಲಾಗುತ್ತಿದ್ದು, ಒಟ್ಟು ವ್ಯವಸ್ಥೆ ಗೊಂದಲಮಯವಾಗಿದೆ. ಇದು ಹೀಗೆ ಮುಂದುವರೆದರೆ 50 ವರ್ಷ ಕಳೆದರೂ ಜಾತಿ ರಾಜಕೀಯ ನಿಲ್ಲುವುದಿಲ್ಲ ಎಂದು ಅಭಿಪ್ರಾಯಪಟ್ಟರು. ನಾಮಕಾವಸ್ಥೆಗೆ ದೇವರಾಜ ಅರಸು ಅವರಂತಹ ಆದರ್ಶ ವ್ಯಕ್ತಿಗಳನ್ನು ಸ್ಮರಿಸಿಕೊಂಡರೆ ಸಾಲದು. ಅವರು ಹಾಕಿಕೊಟ್ಟ ಸಾಮಾಜಿಕ ಸುಧಾರಣೆ ಮತ್ತು ಮೀಸಲಾತಿಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು. ಜನರು ಕೂಡ ಮೀಸಲಾತಿ ಮತ್ತು ಕಾನೂನಿನ ಬಗ್ಗೆ ಅಧ್ಯಯನ ನಡೆಸಿ ಸಾಧಕ ಬಾಧಕಗಳನ್ನು ಅರಿತುಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಸಾಹಿತಿ ಹಾಗೂ ಉಪನ್ಯಾಸಕ ಡಾ.ಮೋಹನ್ ಪಾಳೇಗಾರ್ ಮಾತನಾಡಿ ಡಿ.ದೇವರಾಜ ಅರಸು ಅವರ ಆದರ್ಶಗಳನ್ನು ಎಲ್ಲರೂ ಪಕ್ಷಾತೀತವಾಗಿ ಸ್ಮರಿಸಿಕೊಳ್ಳುತ್ತಾರೆ. ಆದರೆ ಇಂದು ಪ್ರತಿಯೊಂದನ್ನೂ ರಾಜಕೀಯವಾಗಿ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ರಾಜಕೀಯದಲ್ಲಿ ವೈಜ್ಞಾನಿಕ ಪರಿಕಲ್ಪನೆ ಇರಬೇಕೆ ಹೊರತು ತಿರುಚುವ ಕೆಲಸವಾಗಬಾರದು. ಆಗ ಮಾತ್ರ ಒಟ್ಟು ವ್ಯವಸ್ಥೆಗೆ ಗೌರವ ದೊರೆಯುತ್ತದೆ ಎಂದು ಅಭಿಪ್ರಾಯಪಟ್ಟರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಹಮತ ವೇದಿಕೆಯ ಅಧ್ಯಕ್ಷ ಟಿ.ಪಿ.ರಮೇಶ್ ಧೀಮಂತ ರಾಜಕಾರಣಿ, ಸಾಮಾಜಿಕ ನ್ಯಾಯದ ಹರಿಕಾರ, ಹಿಂದುಳಿದ ವರ್ಗಗಳ ಮಹಾನ್ ಚೇತನ ದೇವರಾಜ ಅರಸು ಅವರ ಆದರ್ಶಗಳನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವ ಅಗತ್ಯವಿದೆ ಎಂದು ತಿಳಿಸಿದರು.

ನ್ಯಾಯಾಲಯವೇ ಶ್ಲಾಘಿಸಿದ ಹಾವನೂರು ಆಯೋಗದ ವರದಿ ಹಿಂದುಳಿದ ವರ್ಗಗಳಿಗೆ ಆಧಾರ ಸ್ತಂಭ ಮತ್ತು ಧರ್ಮಗ್ರಂಥವಿದ್ದಂತೆ. ಮುಂದುವರಿದ ಜನಾಂಗದಲ್ಲಿರುವ ಆರ್ಥಿಕವಾಗಿ ಹಿಂದುವಳಿದವರಿಗೂ ಮೀಸಲಾತಿಯಿಂದ ಲಾಭವಾಗಿದೆ ಮತ್ತು ಸಾಮಾಜಿಕ ನ್ಯಾಯ ದೊರೆತ್ತಿದೆ. ಮೀಸಲಾತಿ ಕುರಿತು ಯುವ ಸಮೂಹ ಹೆಚ್ಚು ತಿಳಿದುಕೊಳ್ಳಬೇಕಾಗಿದೆ ಎಂದರು.

ಅರಸು ಅವರು ಹಿಂದುಳಿದ ವರ್ಗಗಳಿಗೆ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಮೀಸಲಾತಿ ಕಲ್ಪಿಸುವ ಸಲುವಾಗಿ ಎಲ್.ಜಿ.ಹಾವನೂರು ಅವರ ಅಧ್ಯಕ್ಷತೆಯಲ್ಲಿ 1972-73ನೇ ಸಾಲಿನಲ್ಲಿ ‘ಹಿಂದುಳಿದ ವರ್ಗಗಳ ಆಯೋಗ’ ರಚಿಸಿದ್ದರು. 1975 ನವಂಬರ್ 25 ರಂದು ಆಯೋಗ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಆ ವರದಿ 50 ವರ್ಷ ಪೂರೈಸಿದೆ ಎಂದು ಮಾಹಿತಿ ನೀಡಿದರು.

ವರದಿಯ ಫಲವಾಗಿ ಹಿಂದುಳಿದ ವರ್ಗಗಳು ಸಾಮಾಜಿಕವಾಗಿ ಮೇಲೆರಲು ಸಾಧ್ಯವಾಯಿತು. ಇಂದು ಹಿಂದುಳಿದ ವರ್ಗಗಳ ನೂರಾರು ಒಳ ಪಂಗಡಗಳಿಗೆ ಪ್ರವರ್ಗ 1, 2, 3 ರ ಮೂಲಕ ಸಹಾಯವಾಗಿದೆ ಎಂದು ಟಿ.ಪಿ.ರಮೇಶ್ ತಿಳಿಸಿದರು. ಅಹಿಂದ ಒಕ್ಕೂಟದ ಅಧ್ಯಕ್ಷ ಟಿ.ಎಂ.ಮುದ್ದಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸನ್ಮಾನ

ಇದೇ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ರೆಹನಾ ಸುಲ್ತಾನ (ಸ್ತ್ರಿಶಕ್ತಿ ಸಂಘಟನೆ), ಬಿ.ಆರ್.ಶರವಣ (ಸಹಕಾರ ಕ್ಷೇತ್ರ) ಹಾಗೂ ಬಿ.ಎನ್.ರಂಗಪ್ಪ (ದುರ್ಬಲ ವರ್ಗಗಳ ಸಂಘಟನಾ ಕ್ಷೇತ್ರ) ಅವರನ್ನು ಸನ್ಮಾನಿಸಲಾಯಿತು. ಎಂ.ಎಂ.ನಂದಕುಮಾರ್ (ಮುಖ್ಯಮಂತ್ರಿಗಳ ಪೊಲೀಸ್ ಪದಕ ವಿಜೇತ ಸಬ್ ಇನ್ಸ್ಪೆಕ್ಟರ್) ಅವರ ಗೈರು ಹಾಜರಿಯಲ್ಲಿ ತಾಯಿ ಸನ್ಮಾನ ಸ್ವೀಕರಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್, ಸರ್ವೋದಯ ಸಮಿತಿಯ ಜಿಲ್ಲಾಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. ಅಹಿಂದ ಒಕ್ಕೂಟದ ಕಾರ್ಯದರ್ಶಿ ಮುನೀರ್ ಅಹಮ್ಮದ್ ನಿರೂಪಿಸಿ ವಂದಿಸಿದರು. ಸಹ ಕಾರ್ಯದರ್ಶಿ ಎಂ.ಎಂ.ಲಿಯಾಕತ್ ಆಲಿ ಪ್ರಾರ್ಥಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು