News Karnataka Kannada
Wednesday, May 01 2024
ಮಡಿಕೇರಿ

ಮಡಿಕೇರಿ| ಪತ್ರಕರ್ತರು ಸತ್ಯಶೋಧನೆಯ ಮಾರ್ಗದಲ್ಲಿ ಕಾರ್ಯನಿರ್ವಹಿಸಬೇಕು : ಅಂಶಿ ಪ್ರಸನ್ನ ಕುಮಾರ್

Madikeri| Journalists should work on the path of fact-finding: Anshi Prasanna Kumar
Photo Credit : News Kannada

ಮಡಿಕೇರಿ: ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರು ನಿಷ್ಪಕ್ಷಪಾತವಾಗಿ, ಸತ್ಯಶೋಧನೆಯ ಮಾರ್ಗದಲ್ಲಿ ಕಾರ್ಯನಿರ್ವಹಿಸಬೇಕು, ಆಗ ಮಾತ್ರ ಸಮಾಜಕ್ಕೆ ನ್ಯಾಯ ಒದಗಿಸಲು ಸಾಧ್ಯ ಎಂದು ಕನ್ನಡಪ್ರಭ ಮೈಸೂರು ಕಾರ್ಯನಿರ್ವಾಹಕ ಸಂಪಾದಕ ಅಂಶಿ ಪ್ರಸನ್ನ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಕೊಡಗು ಪತ್ರಕರ್ತರ ಸಂಘ ಹಾಗೂ ಕೊಡಗು ಪತ್ರಿಕಾ ಭವನ ಟ್ರಸ್ಟ್ ನ ಸಂಯುಕ್ತಾಶ್ರಯದಲ್ಲಿ ನಗರದ ಪತ್ರಿಕಾಭವನದಲ್ಲಿ ನಡೆದ ‘ಪತ್ರಿಕಾ ದಿನಾಚರಣೆ’ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಪತ್ರಕರ್ತರಿಗೆ ಹುಡುಕುವ ಕಣ್ಣು ಮತ್ತು ಪ್ರ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಮನಸ್ಸಿರಬೇಕು. ಸಮಾಜದ ಕಣ್ಣು, ಕಿವಿ, ಬಾಯಿಯಾಗಿ ಸುಸ್ಥಿರ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕು ಎಂದರು. ಪತ್ರಕರ್ತರಿಗೆ ಅಧ್ಯಯನಶೀಲತೆ ಮುಖ್ಯ, ಪ್ರತಿನಿತ್ಯವೂ ಒಂದಿಲ್ಲ ಒಂದು ವಿಚಾರವನ್ನು ಕಲಿಯುವ ಹಂಬಲ ಅವರಲ್ಲಿರಬೇಕು. ಪತ್ರಿಕೆಗಳು ಜನರಿಗೆ ಯಾವುದೇ ಆಡಂಬರವಿಲ್ಲದ ಸತ್ಯಕ್ಕೆ ಸಮೀಪವಾದ ಸುದ್ದಿಯನ್ನು ನೀಡಬೇಕು. ಸುಳ್ಳು ಸುದ್ದಿ, ಗಾಳಿ ಸುದ್ದಿಯನ್ನೆಂದೂ ಹರಡಬಾರದು. ಮಾಧ್ಯಮ, ಪೊಲೀಸರು ಹಾಗೂ ಜನ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದರೆ ಸಮಾಜ ಉತ್ತಮವಾಗಿರುತ್ತದೆ. ಪತ್ರಕರ್ತರು ವಿಶ್ವಾಸಾರ್ಹತೆ ಮತ್ತು ನೈತಿಕತೆ ಹೊಂದಿದಾಗ ಮಾತ್ರ ಉತ್ತಮವಾದ ವಿಚಾರಗಳನ್ನು ಜನರಿಗೆ ನೀಡಲು ಸಾಧ್ಯ. ಸಕಾರಾತ್ಮಕ ವಿಚಾರಗಳನ್ನು ಸಮಾಜಕ್ಕೆ ನೀಡುವ ಮೂಲಕ ಜನರ ನಂಬಿಕೆಯನ್ನು ಗಳಿಸಬೇಕೆಂದು ಕರೆ ನೀಡಿದರು.

ಪತ್ರಕರ್ತರಿಗೆ ಯಾವತ್ತೂ ವಾಸ್ತವ ಮತ್ತು ಭ್ರಮೆಯ ಬಗ್ಗೆ ಅರಿವಿರಬೇಕು. ಪತ್ರಿಕೋದ್ಯಮದ ಮೂಲ ಮಂತ್ರವನ್ನು ಅರಿತು ಪತ್ರಿಕಾ ದಿನಾಚರಣೆಯಂದು ಆತ್ಮಾವಲೋಕನ ಮಾಡಿಕೊಳ್ಳುವ ಮೂಲಕ ಹಿರಿಯರನ್ನು ಗೌರವಿಸುವ ಮತ್ತು ಕಿರಿಯರಿಗೆ ಇತಿಹಾಸವನ್ನು ತಿಳಿಸುವ ಕೆಲಸ ಆಗಬೇಕು. ಪತ್ರಿಕೆಗಳು ಮತ್ತು ಪುಸ್ತಕಗಳು ಜ್ಞಾನ ವಿಕಾಸಕ್ಕೆ ಸಾಕಷ್ಟು ಸಹಕಾರಿಯಾಗಿದೆ. ಮುದ್ರಣ ಮತ್ತು ದೃಶ್ಯ ಮಾಧ್ಯಮ ಹಾಗೂ ಇಂದಿನ ಸಾಮಾಜಿಕ ಜಾಲ ತಾಣಗಳು ಬದುಕನ್ನು ಅರಳಿಸುವ ಕೆಲಸ ಮಾಡಬೇಕೆ ಹೊರತು, ಅವುಗಳಿಂದ ಸುಳ್ಳು ಸುದ್ದಿಗಳನ್ನು ಹರಡುವ ಕೆಲಸ ಆಗಬಾರದೆಂದು ಅಂಶಿ ಪ್ರಸನ್ನ ಹೇಳಿದರು.

ಹಿರಿಯ ಪತ್ರಕರ್ತ ಗಣೇಶ ಅಮೀನಗಡ ಮಾತನಾಡಿ, ಪತ್ರಿಕೋದ್ಯಮ ಸ್ಥಿತ್ಯಂತರವಾಗಿದೆ. ಇಂದು ಪತ್ರಿಕೆಯ ಜಾಗ ಮಾರಾಟವಾಗುತ್ತಿದೆಯೆಂದು ಬೇಸರ ವ್ಯಕ್ತಪಡಿಸಿದರು. ಪತ್ರಕರ್ತರು ಸಾಂಸ್ಕøತಿಕ ಪತ್ರಿಕೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಆರೋಗ್ಯಕರ ವಾತಾವರಣವನ್ನು ಸೃಷ್ಟಿಸಬೇಕು. ಸುದ್ದಿ ಮಾಡುವಾಗ ಪದಗಳ ಬಗ್ಗೆ ಎಚ್ಚರವಹಿಸಬೇಕು. ಜ್ಞಾನ ದಾಹಿಗಳಾಗಿ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ತÀಪ್ಪಿಲ್ಲದೆ ಬರೆಯುವುದು ಪತ್ರಕರ್ತರ ಮೊದಲ ಆದ್ಯತೆ ಆಗಬೇಕು. ಪತ್ರಕರ್ತರು ಸದಾ ಗಾಜಿನ ಮನೆಯಲ್ಲಿದ್ದು, ಇಡೀ ಜಗತ್ತು ಗಮನಿಸುತ್ತದೆ ಎಂಬ ಅರಿವು ಅವರಲ್ಲಿ ಸದಾ ಜಾಗೃತವಾಗಿರಬೇಕು ಎಂದರು.

ಮಾಧ್ಯಮಗಳು ಸಮಾಜದ ಧ್ವನಿಯಾಗಿ ಕೆಲಸ ಮಾಡಬೇಕು. ಪತ್ರಕರ್ತರು ಯಾವುದೇ ಆಮಿಷಕ್ಕೆ ಒಳಗಾಗಬಾರದು. ಪತ್ರಿಕೆಗಳು ರಾಜಕೀಯ, ಕ್ರೀಡೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಎಲ್ಲಾ ವಿಚಾರಗಳನ್ನು ಒಳಗೊಂಡಿರುತ್ತದೆ. ‘ಕಾಪಿ ಪೇಸ್ಟ್’ ಪತ್ರಿಕೋದ್ಯಮ ನಿಲ್ಲಬೇಕು. ಹೊಸ ಹೊಸ ವಿಚಾರಗಳ ಬಗ್ಗೆ ಯುವ ಪತ್ರಕರ್ತರಿಗೆ ಅರಿವು ಮೂಡಿಸಬೇಕು ಎಂದರು.

ಸಂಘದ ಸಲಹೆಗಾರ ಹಾಗೂ ಹಿರಿಯ ಪತ್ರಕರ್ತರ ಟಿ.ಪಿ.ರಮೇಶ್ ಮಾತನಾಡಿ, ಪ್ರಯತ್ನಶೀಲ ಬದುಕಿನಲ್ಲಿ ಒಳ್ಳೆಯ ಪತ್ರಕರ್ತರು ಸಮಾಜಕ್ಕೆ ಕಾಣಿಕೆಯಾಗಿ ಬರಬೇಕು. ಯುವ ಪತ್ರಕರ್ತರು ಆಳವಾಗಿ ಅಧ್ಯಯನ ಮಾಡುವ ಮೂಲಕ ಉತ್ತಮ ವಾತಾವರಣ ಸೃಷ್ಟಿಸುವ ವರದಿಗಳನ್ನು ಸಮಾಜಕ್ಕೆ ನೀಡಬೇಕೆಂದು ತಿಳಿಸಿದರು.

ಮುಳಿಯ ಜ್ಯುವೆಲ್ಲರ್ಸ್‍ನ ವ್ಯವಸ್ಥಾಪಕ ನಿರ್ದೇಶಕ ಮುಳಿಯ ಕೃಷ್ಣ ನಾರಾಯಣ ಮಾತನಾಡಿ, ಪತ್ರಕರ್ತರು ವೃತ್ತಿ ಧರ್ಮವನ್ನು ಪಾಲನೆ ಮಾಡಬೇಕು, ಸದಾ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಬೇಕು ಎಂದರು.

ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ.ಮುರಳೀಧರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವ ಪತ್ರಕರ್ತರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದರು.

ಕೂರ್ಗ್ ಎಕ್ಸ್‍ಪ್ರೆಸ್ ಪತ್ರಿಕೆಯ ಪ್ರಧಾನ ಸಂಪಾದಕ ಶ್ರೀಧರ್ ನೆಲ್ಲಿತ್ತಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಕೊಡಗು ಪತ್ರಿಕಾಭವನ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ಕೊಡಗು ಸಮಾಚಾರ ಪತ್ರಿಕೆಯ ಸಂಪಾದಕ ಬಿ.ಎನ್.ಮನುಶೆಣೈ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ವಿ.ಪಿ.ಸುರೇಶ್, ಸಿ.ಟಿ.ಅಪ್ಪಯ್ಯ, ಜಿ.ಕೆ.ಬಾಲಕೃಷ್ಣ, ಎಂ.ಇ.ಮಹಮದ್, ಎಂ.ಪಿ.ಕೃಷ್ಣರಾಜು ಹಾಗೂ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷಎಂ.ಪಿ.ಕೇಶವ ಕಾಮತ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ಪತ್ರಕರ್ತರಿಗೆ ಗುರುತಿನ ಚೀಟಿ ವಿತರಿಸಲಾಯಿತು.

ಇದೇ ಸಂದರ್ಭ ಕನ್ನಡಪ್ರಭ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ  ಅಂಶಿ ಪ್ರಸನ್ನ ಕುಮಾರ್, ಹಿರಿಯ ಪತ್ರಕರ್ತರಾದ ಗಣೇಶ ಅಮೀನಗಡ, ಮುಳಿಯ ಜ್ಯುವೆಲ್ಲರ್ಸ್‍ನ ವ್ಯವಸ್ಥಾಪಕ ನಿರ್ದೇಶಕ ಮುಳಿಯ ಕೃಷ್ಣ ನಾರಾಯಣ ಮತ್ತು ಕೊಡಗು ಪತ್ರಿಕಾಭವನ ಟ್ರಸ್ಟ್‍ನ ಸ್ಥಾಪಕ ಮ್ಯಾನೇಜಿಂಗ್ ಟ್ರಸ್ಟಿ ಟಿ.ಪಿ.ರಮೇಶ್ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಅತಿಥಿಗಳನ್ನು ಪತ್ರಕರ್ತರುಗಳಾದ ಉಷಾ ಪ್ರೀತಂ, ಎಂ.ಎಸ್.ಸುನಿಲ್ ಪರಿಚಯಿಸಿದರು. ಸನ್ಮಾನಿತರ ಪರಿಚಯವನ್ನು ಸುರೇಶ್ ಬಿಳಿಗೇರಿ, ಜಿ.ವಿ.ರವಿಕುಮಾರ್, ಕುಡೆಕಲ್ ಸಂತೋಷ್, ಪಿ.ವಿ.ಪ್ರಭಾಕರ್ ಮಾಡಿದರು.

ಪ್ರವೀಣ್ ಪ್ರಾರ್ಥಿಸಿ, ಕೊಡಗು ಪತ್ರಕರ್ತರ ಸಂಘದ ನಿರ್ದೇಶಕ ತೇಲಪಂಡ ಕವನ್ ಕಾರ್ಯಪ್ಪ ಹಾಗೂ ಕೊಡಗು ಪತ್ರಿಕಾ ಭವನ ಟ್ರಸ್ಟ್‍ನ ಟ್ರಸ್ಟಿ ಕೆ.ತಿಮ್ಮಪ್ಪ ನಿರೂಪಿಸಿದರು. ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಎಸ್.ಜಿ.ಉಮೇಶ್ ಸ್ವಾಗತಿಸಿ, ಸಂಘದ ಪ್ರಧಾನ ಕಾರ್ಯದರ್ಶಿ ಉಜ್ವಲ್ ರಂಜಿತ್ ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು