ಸೋಮವಾರಪೇಟೆ : ಪ್ರಾಥಮಿಕ ಶಾಲಾ ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಎಲ್ಲಾ ತರಬೇತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸೋಮವಾರಪೇಟೆ ತಾಲೂಕು ಘಟಕದ ವತಿಯಿಂದ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಿದ ಸಂಘದ ಪದಾಧಿಕಾರಿಗಳು ಇಲಾಖೆಯ ಸೂಪರಿಂಟೆಂಡೆಂಟ್ ಕಿರಣ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ತಾಲೂಕು ಘಟಕದ ಅಧ್ಯಕ್ಷ ಟಿ.ಕೆ. ಬಸವರಾಜು, 2017 ರಲ್ಲಿ ತಿದ್ದುಪಡಿ ಮಾಡಿರುವ ಪ್ರಾಥಮಿಕ ಶಾಲಾಶಿಕ್ಷರ ನೇಮಕಾತಿ ನಿಯಮದಿಂದ ಸೇವಾನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷರಿಗೆ ಅನ್ಯಾಯವಾಗಿದೆ. ಈ ಬಗ್ಗೆ ಸಾಕಷ್ಟು ಬಾರಿ ಹಕ್ಕೊತ್ತಾಯ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ವಿಷಾದಿಸಿದರು.
ನಮಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವವರೆಗೂ ನಿಷ್ಟಾ 3.0 ತರಬೇತಿಯಲ್ಲಿ ಲಾಗಿನ್ ಆಗದೆ ತರಬೇತಿಯನ್ನು ಬಹಿಷ್ಕರಿಸುತ್ತಿದ್ದೇವೆ ಎಂದು ತಿಳಿಸಿದರು. ಈ ಸಂದರ್ಭ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಜಿ.ಪಿ.ಕವಿತಾ, ಖಜಾಂಚಿ ಎಸ್.ಎಂ.ರವಿ, ಜಿಲ್ಲಾಧ್ಯಕ್ಷ ಹೆಚ್.ಎನ್.ಮಂಜುನಾಥ್, ಉಪಾಧ್ಯಕ್ಷ ಎಸ್.ಎ. ಯೋಗೇಶ್, ಪ್ರಮುಖರಾದ ಪ್ರೇಮ, ಆಶಾ, ಎನ್.ಎಂ.ನಾಗೇಶ್, ಸುರೇಶ್, ದಿನೇಶ್,ಉಮಾದೇವಿ ಮುಂತಾದವರು ಹಾಜರಿದ್ದರು.