News Karnataka Kannada
Tuesday, April 30 2024
ಮಡಿಕೇರಿ

ಕೊಡಗು ಗೌಡ ಸಮಾಜ ಒಕ್ಕೂಟದ ಅಧ್ಯಕ್ಷರ ಹೇಳಿಕೆಗೆ ಅಖಿಲ ಕೊಡವ ಸಮಾಜ ಯೂತ್ ವಿಂಗ್ ತಿರುಗೇಟು

Kodava
Photo Credit : News Kannada

ಕೊಡವ ಜನಾಂಗಕ್ಕೆ ಜಾತಿ ರಾಜಕೀಯ ಮಾಡಿ ಗೊತ್ತಿಲ್ಲ, ರಾಜರ ಕಾಲದಿಂದ ಹಿಡಿದು ಇಲ್ಲಿಯತನಕ ಕೊಡವರು ಸ್ವಾಮಿ ನಿಷ್ಠರಾಗಿದ್ದವರು, ಎಲ್ಲಿಯೂ ಜಾತಿ ರಾಜಕೀಯ ಮಾಡಿದವರಲ್ಲ ಹಾಗೂ ರಾಜರಾಗಿಯೂ ರಾಜ್ಯಭಾರ ಮಾಡಿದವರು ಅಲ್ಲಾ. ಜಾತಿ ರಾಜಕೀಯ ಮಾಡಲೇಬೇಕು ಎಂದಿದ್ದರೆ ಹೇಳಿ ಮಾಡಿ ತೋರಿಸುವಷ್ಟು ಜನ ಬೆಂಬಲ ಹಾಗೂ ಎದೆಗಾರಿಕೆ ಕೊಡವರಿಗೆ ಇದೆ ಎಂದು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಕೊಡಗು ಗೌಡ ಸಮಾಜ ಒಕ್ಕೂಟದ ಅಧ್ಯಕ್ಷರ ಹೇಳಿಕೆಗೆ ತಿರುಗೇಟು ನೀಡಿದೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಕೊಡಗು ಗೌಡ ಸಮಾಜ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣನವರ ಹೇಳಿಕೆಗೆ ತಿರುಗೇಟು ನೀಡುತ್ತಾ ಮಾನ್ಯ ಗೌರವಾನ್ವಿತ ಸೂರ್ತಲೆ ಸೋಮಣ್ಣನವರೇ ಎರಡು ತಲೆಯ ಹಾವಿನಂತೆ ಇಬ್ಬಗೆಯ ಹೇಳಿಕೆಯನ್ನು ನೀಡುತ್ತಿದ್ದೀರಲ್ಲ, ಅಂದು ತಮ್ಮದೇ ಸಮುದಾಯದ ಚೇತನ್ ಎಂಬುವವರು ಕೋವಿ ವಿಷಯದಲ್ಲಿ ಕೇಸು ಹಾಕಿದ್ದಾಗ ನಿಮ್ಮ ಹೋರಾಟ ಎಲ್ಲಿ ಹೋಗಿತ್ತು.

ಕೊನೆಗೆ ಹಿನ್ನಡೆಯಾದಾಗ ಕಣ್ಣೊರೆಸಲು ಅವರ ವಿರುದ್ಧ ಖಂಡನಾ ನಿರ್ಣಯದ ಸಭೆ ನಡೆಸಿ ಕೊಡವ ಹಾಗೂ ಅರೆಭಾಷಿಕ ಗೌಡರು ಒಂದಾಗಿ ಹೋಗಬೇಕು, ಚೇತನ್ ಅವರದ್ದು ಅವರ ವೈಯಕ್ತಿಕ ವಿಷಯ, ಅವರ ಕೇಸಿನ ವಿಷಯಕ್ಕೆ ಒಕ್ಕೂಟ ಬೆಂಬಲವಿಲ್ಲ ಒಕ್ಕೂಟ ಅವರ ನಿರ್ಧಾರವನ್ನು ಖಂಡಿಸುತ್ತದೆ ಎಂದವರು ಇದೀಗ ಎರಡು ತಲೆಯ ಹಾವಿನಂತೆ ರಾಜಕೀಯ ಮಾತನಾಡುತಿದ್ದೀರಲ್ಲ, ನಿಮಗೆ ಎರಡು ನಾಲಿಗೆ ಇದೆಯಾ.? ಹಲವಾರು ಊರು, ಕೇರಿ ನಾಡುಗಳಲ್ಲಿ ಕೊಡವ ಹಾಗೂ ಅರೆಭಾಷಿಕ ಜನಾಂಗದ ನಡುವಿನ ಸಂಬಂಧ ಈಗಲೂ ಉತ್ತಮವಾಗಿಯೇ ಇದೆ, ಮುಂದೆಯೂ ಹಾಗೆಯೇ ಇರುತ್ತೆ. ಅವರವರ ಬಾಂಧವ್ಯಗಳನ್ನು ಒಡೆಯಲು ನಮ್ಮ ನಿಮ್ಮಂತಹ ಅಧ್ಯಕ್ಷರಿಂದ ಸಾದ್ಯವಿಲ್ಲ ಎನ್ನುವುದು ತಿಳಿದಿರಲಿ.

ಹಾಗೇ ಕೋವಿ ವಿಷಯದಲ್ಲಿ ರಾಜಕೀಯವನ್ನು ಎಳೆದು ತಂದು ಅನೂನ್ಯವಾಗಿರುವ ಕೊಡವ ಹಾಗೂ ಕೊಡವ ಭಾಷಿಕರ ನಡುವೆ ಹುಳಿ ಹಿಂಡಲು ಪ್ರಯತ್ನಿಸುತ್ತಿರುವ ನಿಮ್ಮ ಆಟ ಯಾವತ್ತು ಫಲಕಾರಿಯಾಗದು. ಇಲ್ಲಿಯತನಕ ಕೊಡವ ಭಾಷಿಕರ ಏಳಿಗೆಗೆ ನೀವು ಮಾಡಿದಾದರೂ ಏನೂ.? ಇದೀಗ ಜನಾಂಗವನ್ನು ಎತ್ತಿಕಟ್ಟಲು ಇಲ್ಲದ ಹೇಳಿಕೆಗಳನ್ನು ನೀಡುವುದರಿಂದ ಕೊಡವ ಹಾಗೂ ಭಾಷಿಕರ ನಡುವಿನ ಬಾಂಧವ್ಯ ಒಡೆಯಲು ಆಗುವುದಿಲ್ಲ, ಕೊಡವ ಭಾಷಿಕರು ಯಾವತ್ತಿದ್ದರೂ ಕೊಡವ ಜನಾಂಗದ ಸಹೋದರರಂತೆ ಎನ್ನುವುದು ಮರೆಯಬೇಡಿ.

ಕೊಡವರಾಗಲಿ ಅಥವಾ ಕೊಡವ ಭಾಷಿಕ ಜನಾಂಗವಿರಲಿ ಕಳೆದ 60 ವರ್ಷಗಳಿಂದ ಯಾವುದೇ ರಾಜಕೀಯ ಮೀಸಲಾತಿ ಸ್ಥಾನಮಾನವಿಲ್ಲದೆ ಹಾಗೂ ಯಾವುದೇ ಮೂಲಭೂತ ಸೌಲಭ್ಯವಿಲ್ಲದೆ ಕೇವಲ ಸ್ವಾಮಿ ನಿಷ್ಠೆಯಿಂದ ಪಕ್ಷಕ್ಕೆ ಬೆಂಬಲ ಕೊಟ್ಟುಕೊಂಡು ಕೆಲಸ ಮಾಡಿಕೊಂಡು ಬಂದಿದ್ದಾರೆ. ಹಾಗೇ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ಈ ಹಿಂದೆ ಮೀಸಲಾತಿ ತೆರವುಗೊಂಡು ಸಾಮಾನ್ಯ ಅಭ್ಯರ್ಥಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಯಿತು.

ಆ ಸಮಯದಲ್ಲಿ ಕೂಡ ಕೊಡವರಲ್ಲಿ ಶಾಸಕರಾಗುವ ಆರ್ಹತೆ ಇರುವವರು ಅನೇಕರಿದ್ದರೂ ಕಳೆದ 20 ವರ್ಷಗಳಿಂದ ಸುದೀರ್ಘವಾಗಿ ತಮ್ಮದೇ ಜನಾಂಗದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ನಮ್ಮ ಜನಾಂಗದ ಪ್ರತಿನಿಧಿ ಇದ್ದರೂ ಕೂಡ ಅವರನ್ನು ಸೋಲಿಸಿದವರು ಇದೇ ಕೊಡವರು ಎನ್ನುವುದನ್ನು ಮರೆಯಬಾರದು. ಹೀಗಿರುವಾಗ ಕೊಡವರಿಗೆ ಜಾತಿ ರಾಜಕೀಯ ಮಾಡುತ್ತಿದ್ದಾರೆ ಎನ್ನುವ ನೀವು ಇದೀಗ ತಾನೇ ಆಯ್ಕೆಯಾದ “ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ” ಗೆಲುವಿನ ಅಂತರವನ್ನು ತೆಗೆದು ನೋಡಿ. ಆತ ಯಾರಿಂದ ಗೆದ್ದಿದ್ದಾರೆ ಹಾಗೂ ಅಡ್ಡ ಮತದಾನ ಎಲ್ಲಾಗಿದೆ ಎಂದು ಗೊತ್ತಾಗುತ್ತದೆ.

ನಿಮ್ಮ ಈಗಿನ ಹೇಳಿಕೆಯನ್ನು ಗಮನಿಸಿದ್ದಾಗ ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಎಲ್ಲಿ ಆಗಿದೆ ಎನ್ನುವುದು ಸ್ಪಷ್ಟವಾಗಿ ಕಾಣುತ್ತಿದೆಯಲ್ಲವೇ.? ಒಂದು ತಿಳಿದಿರಲಿ ಈ ದೇಶಕ್ಕೆ ಇಬ್ಬರು ವೀರ ಕಲಿಗಳು ಸೇರಿದಂತೆ ಮೊದಲ ಮಹಾದಂಡನಾಯಕನನ್ನು ಹಾಗೂ ಕಲ್ಪನೆಗೆ ನಿಲುಕದಷ್ಟು ವೀರ ಯೋಧರನ್ನು ಕೊಡುಗೆಯಾಗಿ ನೀಡಿದ ಕೊಡವರ ಜನಸಂಖ್ಯೆ ರಾಜ್ಯದಲ್ಲಿ ಕಡಿಮೆ ಇರಬಹುದು ಹಾಗೇ ಕೊಡಗಿನಲ್ಲಿ ಎರಡು ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಕಷ್ಟಸಾಧ್ಯ ಎನ್ನುವುದು ನಿಮ್ಮ ಆಲೋಚನೆಯಲ್ಲಿರಬಹುದು. ಆದರೆ ಒಬ್ಬ ಅಭ್ಯರ್ಥಿಯನ್ನು ಸೋಲಿಸುವ ತಾಕತ್ತು ಹಾಗೂ ಜನಸಂಖ್ಯೆ ಮತ್ತು ಜನಬೆಂಬಲ ಕೊಡವರಿಗೆ ಇದೆ ಎನ್ನುವುದನ್ನು ಮರೆಯಬೇಡಿ. ಈ ಹಿಂದೆ ರಾಜರ ಕಾಲದಲ್ಲಿ ಕೂಡ ಕೊಡವರು ಜಾತಿ ರಾಜಕೀಯ ಮಾಡಿದವರಲ್ಲ. ಒಬ್ಬ ಜಂಗಮನನ್ನು ಪದವಿಯಲ್ಲಿ ಕೂರಿಸಿ ರಾಜ್ಯಭಾರ ಮಾಡಿಸಿದವರು ಇದೇ ಕೊಡವರು ಎನ್ನುವುದು ತಿಳಿದಿರಲಿ.

ಮಾನ್ಯ ಶಾಸಕರ ವಿಷಯವಾಗಿ ಯಾರೋ ವೈಯಕ್ತಿಕವಾಗಿ ನೀಡಿದ ಹೇಳಿಕೆಗಳು ಅಥವಾ ಚರ್ಚೆಗಳಿಗೆ ಕೊಡವ ಸಮಾಜಗಳು ಜವಾಬ್ದಾರಿ ಅಲ್ಲ ಎನ್ನುವುದು ತಿಳಿದಿರಲಿ. ಹಾಗೇ ಜಿಲ್ಲಾಡಳಿತ ನಡೆಯನ್ನು ಪ್ರಶ್ನೆ ಮಾಡಬಾರದು ಎಂದಾದರೆ ನೀವು ಹೇಳಿದಂತೆ ಜಿಲ್ಲಾಡಳಿತ ನಡೆಯಬೇಕು ಎನ್ನುವ ಅಪೇಕ್ಷೆ ಕೂಡ ಸರಿಯಲ್ಲವಲ್ಲವೇ.? ನಮ್ಮ ಜನಾಂಗ ಕೇಳಿರುವುದು ನಮ್ಮ ಹಕ್ಕು ಹೊರತು ಯಾರ ಹಕ್ಕನ್ನು ಕಸಿದುಕೊಳ್ಳುವುದಲ್ಲ. ಇದೇ ಕೋವಿ ಹಕ್ಕು ವಿಷಯವಾಗಿ ನಿಮ್ಮದೇ ಜನಾಂಗದ ವ್ಯಕ್ತಿಯೊಬ್ಬರು ಅಂದು ಕಾನೂನು ಮೊರೆ ಹೋದಾಗ ಆ ಸಮಯದಲ್ಲಿ ನಿಮ್ಮ ನಿಲುವು ಏನಾಗಿತ್ತು ಎಂದು ಯೋಚಿಸಿ ನೋಡಿ.

ನಿಮಗೆ ಒಂದು ತಿಳಿದಿರಲಿ ಬ್ರಿಟಿಷರು ಈ ದೇಶಕ್ಕೆ ಕಾಲಿಡುವುದಕ್ಕೆ ಮೊದಲೇ ಕೊಡವರು “ತಿರಿ ತೋಕ್” ಹಿಡಿದವರು. ಹಾಗೇ ಕೊಡವರಿಗೆ ಬೇಕಿರುವುದು ಕೇವಲ “ಕೂರ್ಗ್ ಬೈ ರೇಸ್” ಮಾತ್ರ. ಆದರೆ ನಿಮ್ಮವರೇ ಕೋರ್ಟಿನಲ್ಲಿ ಕೇಸು ಹಾಕಿದ್ದಾಗ ಕೊಡವ ಭಾಷಿಕ ಸಹೋದರರು ಸೇರಿದಂತೆ ಎಲ್ಲಾರನ್ನು ಮನದಲ್ಲಿಟ್ಟುಕೊಂಡು ಜಮ್ಮ ಹಿಡುವಳಿದಾರರಿಗೂ ಅನ್ಯಾಯ ಆಗಬಾರದು ಎಂದು ಕೂರ್ಗ್ ಬೈ ರೇಸ್’ನೊಂದಿಗೆ ಜಮ್ಮ ಹಿಡುವಳಿದಾರರಿಗೂ ಕೋವಿ ಹಕ್ಕು ಬೇಕು ಎಂದು ಹೋರಾಟ ಮಾಡಿದ್ದವರು ಇದೇ ಕೊಡವರು ಹಾಗೂ ಕೊಡವ ಸಮಾಜಗಳು ಎನ್ನುವುದನ್ನು ಯಾರು ಮರೆಯಬಾರದು. ಆದರೆ ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ನಿಮ್ಮ ಈ ರೀತಿಯ ಹೇಳಿಕೆ ನಿಮಗೆ ಮುಜುಗರ ಅನಿಸುತ್ತಿಲ್ಲವೇ.? ಇಷ್ಟಕ್ಕೂ ನಮ್ಮ ಮಾತೃ ಸಂಸ್ಥೆಯ ಅಧ್ಯಕ್ಷರ ಹೇಳಿಕೆಯನ್ನು ನೋಡಿ ನೀವು ಕಲಿಯಬೇಕಾದದ್ದು ಬಹಳಷ್ಟಿದೆ, ಎಲ್ಲಿಯೂ ಯಾವ ಜನಾಂಗವನ್ನು ಬೊಟ್ಟು ಮಾಡದೆ ನಮ್ಮ ಹಕ್ಕು ಏನಿದೆ ಅದನ್ನು ಪ್ರತಿಪಾದಿಸಿದ್ದಾರೆ ಅಷ್ಟೇ. “ಕೂರ್ಗ್ ಬೈ ರೇಸ್” ಹೋರಾಟಕ್ಕೆ ರಾಜಕೀಯ ಅಥವಾ ಜಾತಿಯ ಲೇಪನವನ್ನು ಹಚ್ಚಬೇಡಿ.

ರಾಜಕೀಯವನ್ನು ಮೀರಿದ್ದು ಈ ಜಾತಿ ಧರ್ಮಗಳ ನಡುವಿನ ಅನೂನ್ಯ ಸಂಬಂಧ ಎನ್ನುವುದನ್ನು ಕೂಡ ಮರೆಯಬಾರದು. ನಿಮ್ಮದೆಯಾದ ಪರಿಭಾಷೆಯಲ್ಲಿ ಹೇಳುವುದಾದರೆ ಕೊನೆಯದಾಗಿ ನಿಮಗೊಂದು ಮಾತು ನೇರವಾಗಿ ಹೇಳ ಬಯಸುತ್ತೇವೆ. ನಿಮಗೆ ರಾಜಕೀಯ ಮಾಡಲೇಬೇಕು ಎಂದಾದರೆ ಆಯ್ತು ರಾಜಕೀಯವಾಗಿ ತೊಡೆ ತಟ್ಟಲು ನಾವು ತಯಾರು ಎಂದು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ತಿರುಗೇಟು ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು