ನಂಜನಗೂಡು: ಗ್ರಾಮೀಣ ಜನರ ಬದುಕಿನ ರಕ್ಷಣೆಗಾಗಿ ಮೂಲಭೂತ ಸೌಕರ್ಯಗಳನ್ನು ನೀಡದ ಸ್ಥಳೀಯ ಗ್ರಾ.ಪಂಗಳ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ರೈತರು ಶನಿವಾರ ಬೃಹತ್ ಪ್ರತಿಭಟನೆಯನ್ನು ನಡೆಸಿದರು.
ಸಂಘದ ರಾಜ್ಯ ಕಾರ್ಯಾಧ್ಯಕ್ಷ ಟಿ.ಆರ್ ವಿದ್ಯಾಸಾಗರ್ ನೇತೃತ್ವದಲ್ಲಿ ನಗರದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಜಮಾವನೆಗೊಂಡ ನೂರಾರು ರೈತರು ಸರ್ಕಾರ ಹಾಗೂ ಗ್ರಾಮ ಪಂಚಾಯಿತಿ ಆಡಳಿತದ ಅಧಿಕಾರಿಗಳ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಂಜನಗೂಡು ತಾಲ್ಲೂಕು ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಕ್ಷೇತ್ರವಾಗಿದೆ . ಆದರೂ ಕೂಡ ಇಲ್ಲಿ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲ. ತಾಲ್ಲೂಕಿನ 45 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಸ್ಮಶಾನಗಳನ್ನು ಮಂಜೂರು ಮಾಡಿಲ್ಲ. ತಾಲ್ಲೂಕಿನಲ್ಲಿರುವ ಕೆರೆಕಟ್ಟೆಗಳಿಗೆ ಚರಂಡಿ ನೀರು ಸೇರ್ಪಡೆಯಾಗುತ್ತಿದ್ದರು ಗಮನ ಹರಿಸುತ್ತಿಲ್ಲ. ಗ್ರಾಮ ಪಂಚಾಯಿತಿ ಕಟ್ಟಡಗಳು ದುಸ್ಥಿತಿಯ ಹಂತಕ್ಕೆ ತಲುಪಿದೆ.
ತಾಲ್ಲೂಕಿನ ಚಿಲ್ಲರೆ ಅಂಗಡಿಗಳಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ನಡೆಯುತ್ತಿದೆ. ಬಡ ಮಕ್ಕಳು ವಿದ್ಯಾಭ್ಯಾಸ ಮಾಡುವ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಬೇಕು. 14,15ನೇ ಹಣಕಾಸು ಯೋಜನೆಯ ಹಣ ಅಭಿವೃದ್ಧಿಗೆ ಬಳಕೆಯಾಗಿಲ್ಲ. ಜಲಜೀವನ್ ಮಿಷನ್ ಯೋಜನೆ ತಾಲ್ಲೂಕಿನಲ್ಲಿ ಹಳ್ಳ ಹಿಡಿದಿದೆ. ಗ್ರಾಮ ಪಂಚಾಯಿತಿಗಳಲ್ಲಿ ಖಾತೆ ಮಾಡಿಕೊಡಲು ಲಂಚ ಕೇಳುತ್ತಿದ್ದಾರೆ. ಇನ್ನು ಕೂಡ ಸರಿಯಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರು ದೊರಕುತ್ತಿಲ್ಲ. ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿಗಳನ್ನು ಗ್ರಾಮಾಂತರ ಪ್ರದೇಶಗಳಲ್ಲಿ ನಿರ್ಮಿಸಬೇಕು.
ಮಹಾತ್ಮ ಗಾಂಧಿ ನರೇಗಾ ಯೋಜನೆ ಗ್ರಾಮಾಂತರ ಭಾಗಗಳಲ್ಲಿ ಸರಿಯಾದ ಆದ್ಯತೆ ನೀಡುತ್ತಿಲ್ಲ. ಕಾಡಂಚಿನ ಪ್ರದೇಶ ಹಾಗೂ ಕೆರೆಕಟ್ಟೆಗಳು ಹಾಗೂ ರಸ್ತೆ ಬದಿಗಳಲ್ಲಿ ಪೊದೆಗಳು ಬೆಳೆದು ನಿಂತಿದ್ದು, ಕಳ್ಳರು ಹಾಗೂ ಕಾಡುಪ್ರಾಣಿಗಳ ವಾಸಸ್ಥಾನವಾಗಿ ಮಾರ್ಪಾಟಾಗಿದ್ದು, ರೈತರು ದಿನನಿತ್ಯ ಕಾಡುಪ್ರಾಣಿಗಳಿಂದ ಬಲಿಯಾಗುತ್ತಿದ್ದಾರೆ ಎಂದು ಆರೋಪ ಮಾಡಿದರು. ತಕ್ಷಣವೇ ಸಮಸ್ಯೆಗಳಿಗೆ ಪರಿಹಾರ ಸಿಗದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡಿದರು.
ಬೆಳಿಗ್ಗೆಯಿಂದಲೇ ಪ್ರಾರಂಭಗೊಂಡ ಪ್ರತಿಭಟನೆಯಲ್ಲಿ ಸ್ಥಳದಲ್ಲಿ ಮಧ್ಯಾಹ್ನದ ಉಪಹಾರ ತಯಾರಿಸಿ ಊಟ ಮಾಡುವ ಮೂಲಕ ಪರಿಹಾರ ದೊರಕುವವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಪ್ರತಿಭಟನಾ ಸ್ಥಳಕ್ಕೆ ತಾಲ್ಲೂಕು ಪಂಚಾಯಿತಿ ಇಒ ಜೆರಾಲ್ಡ್ ರಾಜೇಶ್ ಆಗಮಿಸಿ ರೈತರ ಮನ ಒಲಿಸಲು ಪ್ರಯತ್ನಿಸಿದರಾದರು ಪ್ರಯೋಜನವಾಗಲಿಲ್ಲ. ಬಳಿಕ ರೈತರ ಸಮಸ್ಯೆ ಇರುವ ವ್ಯಾಪ್ತಿಯ ಗ್ರಾಪಂ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಪ್ರತಿಭಟನೆಯಲ್ಲಿ ಸಂಘಟನೆಯ ಕಾರ್ಯಾಧ್ಯಕ್ಷ ವಿದ್ಯಾಸಾಗರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಇಮ್ಮಾವು ರಘು ತಾಲ್ಲೂಕು ಅಧ್ಯಕ್ಷ ಸತೀಶ್ ರಾವ್, ಉಪ್ಪಿನಹಳ್ಳಿ ದೇವರಾಜು,ಶಂಕರ ನಾಯಕ, ಮಹದೇವ ನಾಯಕ, ನಂಜುಂಡ , ಶ್ವೇತ , ಸವಿತಾ ,ಅಳಗಂಚಿ ದೊಡ್ಡಯ್ಯ ,ಅಡುಗೆ ಸೂರಹಳ್ಳಿ ಮಾದಪ್ಪ, ಮಹದೇವಸ್ವಾಮಿ , ವಿಜಯಕುಮಾರ್, ಸಿದ್ದಪ್ಪಾಜಿ , ಕೃಷ್ಣಾಪುರ ಮೋಹನ್, ಕೃಷ್ಣಮೂರ್ತಿ ಸೇರಿದಂತೆ ಮತ್ತು ಇತರರು ಹಾಜರಿದ್ದರು.

