ನಂಜನಗೂಡು: ಕರ್ನಾಟಕ ರಾಜ್ಯ ರೈತ ಸಂಘಗಳ ಏಕೀಕರಣ ಸಮಿತಿ ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮೈಸೂರು ಚಾಮರಾಜನಗರ ಜಿಲ್ಲಾ ಘಟಕದ ವತಿಯಿಂದ ನಾಳೆ ವಿಧಾನಸೌಧ ಚಲೋ ಬೃಹತ್ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘಟನೆಗಳ ಏಕೀಕರಣ ಸಮಿತಿಯ ರಾಜ್ಯಾಧ್ಯಕ್ಷ ಪಚ್ಚೆ ನಂಜುಂಡಸ್ವಾಮಿ ಹೇಳಿದ್ದಾರೆ.
ನಂಜನಗೂಡಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೈತರ ಸಮಸ್ಯೆಗಳನ್ನು ಸರ್ಕಾರಕ್ಕೆ ಮುಟ್ಟಿಸಲು ಬೃಹತ್ ಹೋರಾಟವನ್ನು ನಡೆಸಲಾಗುತ್ತಿದೆ. ರೈತ ವಿರೋಧಿ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ಖಾಸಗೀಕರಣ ಹಿಂಪಡೆಯಬೇಕು.
ಕೃಷಿ ಮತ್ತು ಕೃಷಿಕರಿಗೆ ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿ ಮಾಡಬೇಕು. ರೈತರ ಸಮಸ್ಯೆಗಳನ್ನು ಬಗೆಹರಿಸಲು ರೈತ ಕೃಷಿ ಪರಿಷತ್ತು ರೂಪಿಸಬೇಕು. ಕಾವೇರಿ ನದಿಗೆ ಮೇಕೆದಾಟು ಅಣೆಕಟ್ಟು ನಿರ್ಮಾಣ ಮಾಡಬೇಕು. ರೇಷ್ಮೆಗೆ ಪ್ರತಿ ಕೆಜಿಗೆ ಕನಿಷ್ಠ ಒಂದು ಸಾವಿರ ಬೆಲೆ ನಿಗದಿ ಮಾಡಬೇಕು. ಲೀಟರ್ ಹಾಲಿಗೆ 55 ರೂಪಾಯಿ ಬೆಲೆ ನಿಗದಿ ಮಾಡಬೇಕು. ಕ್ವಿಂಟಲ್ ಭತ್ತಕ್ಕೆ 3500, ಒಂದು ಟನ್ ಕಬ್ಬು ಬೆಳೆಗೆ 5500 ಬೆಲೆ ನಿಗದಿಪಡಿಸಬೇಕು.
ಬಗರ್ ಹುಕುಂ ಸಾಗುವಳಿಯಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರವನ್ನು ನಿಲ್ಲಿಸಬೇಕು ಸೇರಿದಂತೆ ಸುಮಾರು 34 ಹಾಕ್ಕೋತ್ತಾಯಗಳನ್ನು ಸರ್ಕಾರಕ್ಕೆ ಮಂಡಿಸುತಿದ್ದೇವೆ. ಬೆಂಗಳೂರಿನ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣದಿಂದ ವಿಧಾನಸೌಧದ ವರೆಗೆ ಬೃಹತ್ ಪಾದಯಾತ್ರೆ ಮೂಲಕ ಮನವಿ ಸಲ್ಲಿಸಲಾಗುವುದು. ರೈತರ ಹೋರಾಟಕ್ಕೆ ಮೈಸೂರು ಜಿಲ್ಲೆಯಿಂದ 2,000ಕ್ಕೂ ಹೆಚ್ಚು ರೈತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಟಿ.ಆರ್.ವಿದ್ಯಾಸಾಗರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಮ್ಮಾವು ರಘು, ಹರತಲೆ ಕೆಂಪಣ್ಣ, ಶಿರಮಳ್ಳಿ ಮಂಜುನಾಥ್, ಮಹದೇವಸ್ವಾಮಿ, ಹಲ್ಲರೆ ಸ್ವಾಮಿ, ಉಪ್ಪನಹಳ್ಳಿ ದೇವರಾಜು, ಕೃಷ್ಣಾಪುರ ಮೋಹನ್ ಹಾಜರಿದ್ದರು.

