ನಂಜನಗೂಡು: ಬಾಬಾ ಸಾಹೇಬ್ ಡಾ.ಬಿಆರ್ ಅಂಬೇಡ್ಕರ್ ರವರ ಕನಸಿನ ಸಮ ಸಮಾಜ ನಿರ್ಮಾಣವಾಗಲಿ, ದೇಶದಲ್ಲಿ ಜಾಗೃತ ಸಮಾಜ ನಿರ್ಮಾಣವಾಗಬೇಕು ಎಂದು ಕವಲಂದೆ ಪೊಲೀಸ್ ಠಾಣೆಯ ಪಿಎಸ್ಐ ಬಿ.ಬಸವರಾಜು ಅಭಿಪ್ರಾಯ ವ್ಯಕ್ತಪಡಿಸಿದರು.
ನಂಜನಗೂಡು ತಾಲ್ಲೂಕಿನ ಗಟ್ಟವಾಡಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ರವರ 135 ನೇ ಜಯಂತೋತ್ಸವವನ್ನು ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಉದ್ಘಾಟಿಸಿ ಮಾತನಾಡಿದ ಅವರು, ಅಂಬೇಡ್ಕರ್ ರವರು ಈ ದೇಶದ ಬಹುದೊಡ್ಡಶಕ್ತಿ. ರಾಜ ಮಹಾರಾಜರ ಕೈಯಲ್ಲಿ ಆಗದೆ ಇರುವ ಕೆಲಸವನ್ನು ಅವರು ತಮ್ಮ ಜ್ಞಾನದ ಮೂಲಕ ಮಾಡಿ, ಸಮಾಜದ ದಿಕ್ಕನ್ನು ಬದಲಾಯಿಸಿದರು. ಅಸ್ಪೃಶ್ಯತೆಯ ನೋವನ್ನು ಅನುಭವಿಸಿ, ಸಮಾಜದ ಬದಲಾವಣೆಗೆ ಮುನ್ನುಡಿ ಬರೆದರು.
ಅಂಬೇಡ್ಕರ್ ರವರು ನಮ್ಮ ಮನಸ್ಸಿನಲ್ಲಿ ರಾಜರಾಗಿದ್ದಾರೆ. ನಮಗೆಲ್ಲಾ ಶಿಕ್ಷಣವನ್ನು ಅಸ್ತ್ರವನ್ನಾಗಿ ನೀಡಿದ್ದಾರೆ. ಅದನ್ನು ಬಳಸಿಕೊಂಡು ನಾವು ಜಾಗೃತರಾಗಬೇಕು. ಸಮಾಜದಲ್ಲಿ ಜಾಗೃತ ಸಮಾಜ ನಿರ್ಮಾಣ ಆಗಬೇಕು. ಅವರಿಗೆ ಅಧಿಕಾರ ಹೋಗಬೇಕು ಆಗ ಮಾತ್ರ ಸಮ ಸಮಾಜ ನಿರ್ಮಾಣ ಆಗುತ್ತದೆ ಎಂದು ಹೇಳಿದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ವಕೀಲರಾದ ಅಳಗಂಚಿ ಮಹದೇವಸ್ವಾಮಿ ಮಾತನಾಡಿ, ಅಂಬೇಡ್ಕರ್ ರವರಿಗೆ ಈ ದೇಶ ಅವಮಾನಿಸಿದೆ. ಅವರ ಜ್ಞಾನಕ್ಕೆ ಉನ್ನತ ಹುದ್ದೆಗಳಿಗೆ ಹೋಗಬಹುದಿತ್ತು ಆದರೆ ಅವರು ನೊಂದ ಜನರ ಪರವಾಗಿ ನಿಂತು, ಎಲ್ಲ ವರ್ಗದ ಜನರನ್ನು ಮೇಲೆತ್ತಲು ಶ್ರಮಿಸಿದರು. ಮೊಟ್ಟ ಮೊದಲ ಬಾರಿಗೆ ಎಲ್ಲರಿಗೂ ಶಿಕ್ಷಣ ಕೊಡಿ ಎಂದವರು ಬಾಬಾ ಸಾಹೇಬರು. ಭಾರತದ ಪ್ರತಿಯೊಬ್ಬ ಪ್ರಜೆಗೆ ಮತ ಹಾಕುವ ಹಕ್ಕನ್ನು ಕೊಟ್ಟಿದ್ದು ಅಂಬೇಡ್ಕರ್ ರವರು, ಈ ದೇಶಕ್ಕೆ ಸ್ವಾತಂತ್ರ್ಯ ಬರುವಷ್ಟರಲ್ಲಿ ಮೊದಲು ಜನರಿಗೆ ಸ್ವಾತಂತ್ರ್ಯ ಸಿಗಬೇಕು ಎಂಬುದು ಅಂಬೇಡ್ಕರ್ ರವರ ಹೋರಾಟವಾಗಿತ್ತು.
ಕಾರ್ಮಿಕ ಮಂತ್ರಿ ಮತ್ತು ಕಾನೂನು ಮಂತ್ರಿ ಆಗಿದ್ದ ಸಂದರ್ಭದಲ್ಲಿ ಮಹಿಳೆಯರಿಗೆ ಸುರಕ್ಷಿತ ಕಾನೂನುಗಳನ್ನು ಜಾರಿಗೆ ತಂದರು. ದೇಶದ ಅಭಿವೃದ್ಧಿಗೆ ರೈತರಿಗೆ ವಿಮೆ ಮತ್ತು, ಜಲಾಶಯಗಳ ನಿರ್ಮಾಣದ ಮೂಲಕ ನೀರಾವರಿ ಯೋಜನೆಗಳನ್ನು ರೂಪಿಸಿ ರೈತರಿಗೆ ಆದ್ಯತೆ ನೀಡಿದರು. ಹಿಂದೂ ಕೋಡ್ ಬಿಲ್ ಮೂಲಕ ಮಹಿಳೆಯರಿಗೆ ಸ್ವಾತಂತ್ರ್ಯ ನೀಡಿದರು. ಆದರೆ, ಅಂಬೇಡ್ಕರ್ ರವರ ವಿಚಾರಗಳನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಆರ್ ಬಿಐ ಸ್ಥಾಪನೆಗೆ ಅಂಬೇಡ್ಕರ್ ರವರು ಮೂಲ ಕಾರಣರಾಗಿದ್ದಾರೆ. ಮೀಸಲಾತಿ ಕೇವಲ ಎಸ್ಸಿ, ಎಸ್ಟಿ ಸಮುದಾಯಗಳಿಗೆ ಮಾತ್ರ ಸೀಮಿತವಾಗಿಲ್ಲ ಸಮುದಾಯದವರು ಮೀಸಲಾತಿಯನ್ನು ತೆಗೆದುಕೊಳ್ಳುತ್ತಿದ್ದಾರೆ ಇದನ್ನು ತಿಳಿದುಕೊಳ್ಳಬೇಕಾಗಿದೆ. ಶಿಕ್ಷಣ ಮತ್ತು ಉದ್ಯೋಗವನ್ನು ಖಾಸಗೀಕರಣ ಮಾಡುವ ಮೂಲಕ ನಿಯಂತ್ರಿಸಲಾಗುತ್ತಿದೆ. ಇದರ ಹುನ್ನಾರ ಏನು ಎಂದು ಅರ್ಥ ಮಾಡಿಕೊಳ್ಳಬೇಕು. ಅಂಬೇಡ್ಕರ್ ಅವರ ಆಶಯದಂತೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಿ ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಪತ್ರಕರ್ತರಾದ ಸಿ.ಎಂ ಸುಗಂಧರಾಜು ರವರಿಗೆ ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಅಂಬೇಡ್ಕರ್ ಜಯಂತೋತ್ಸವ ಅಂಗವಾಗಿ ಶಾಲಾ ಕಾಲೇಜಿನ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಡಾ. ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಯಜಮಾನರಾದ ಮಹದೇವಯ್ಯ, ಶಿವಯ್ಯ, ಗ್ರಾಮದ ಮುಖಂಡರಾದ ಮಹದೇವಯ್ಯ, ಪಿ.ಸೋಮಣ್ಣ, ಶಂಕರ್, ಸುಬ್ಬಣ್ಣ, ಎಂ.ಶಿವಯ್ಯ, ದಸಂಸ ತಾಲ್ಲೂಕು ಸಂಚಾಲಕ ಗಟ್ಟವಾಡಿ ಮಹೇಶ್, ಮಹದೇವಸ್ವಾಮಿ, ಜಿ.ಕೆ ಮಂಜು, ಮಹದೇವಯ್ಯ, ಸಂಜಯ್, ಮನೋಹರ, ಜಿ.ಆರ್ ಮಂಜು, ಸಿದ್ದರಾಜು, ಪ್ರಕಾಶ್, ಮನು, ಶಂಭು, ಲೋಕೇಶ್, ನಾಗೇಂದ್ರ. ಎಸ್. ಸಿದ್ದಾರ್ಥ್, ಸಿದ್ದರಾಜು, ಜ್ಯೋತಿ ರಾಜಣ್ಣ, ಮಾದೇಶ್, ಉಮೇಶ್, ದರ್ಶನ್, ಸೋಮು, ಕುಮಾರಸ್ವಾಮಿ ಸೇರಿದಂತೆ ಸಂಘದ ಪದಾಧಿಕಾರಿಗಳು, ಗ್ರಾಮಸ್ಥರು ಹಾಜರಿದ್ದರು.

