ಮೈಸೂರು : ಕೆಎಸ್ ಆರ್ ಟಿಸಿ ಬಸ್ ಓವರ್ ಟೇಕ್ ಬರದಲ್ಲಿ ಸೈಕಲ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆ ಕೆ.ಆರ್ ನಗರ ತಾಲೂಕಿನ ಹಂಪಾಪುರ ಬಸ್ ನಿಲ್ದಾಣದಲ್ಲಿ ನಡೆದಿದೆ.

ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಬಸ್ ನ ಮುಂಭಾಗದ ಚಕ್ರದಡಿ ಸಿಲುಕಿ ಸೈಕಲ್ ಸವಾರ ಸಾವ್ನಪ್ಪಿದ್ದಾನೆ. ಹಂಪಾಪುರದ ಚೆಂದೊಡ್ ಶೆಟ್ಟಿ ಮೃತ ದುರ್ದೈವಿ. ಹಾಸನದಿಂದ ‌ಮೈಸೂರಿಗೆ ಕೆಎಸ್ ಆರ್ ಟಿಸಿ ಬಸ್ ಬರುತ್ತಿತ್ತು. ಹಂಪಾಪುರದ ಬಳಿ ಬಸ್ ಒವರ್ ಟೇಕ್ ಮಾಡಲು ಹೋಗಿ ರಸ್ತೆಯಲ್ಲಿ ಬರುತ್ತಿದ್ದ ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದಿದೆ.

ಚೆಂದೊಡ್ ಶೆಟ್ಟಿ ಹಂಪಾಪುರ ಗ್ರಾಮದಲ್ಲಿ ಅರ್ಚಕರಾಗಿದ್ದರು. ಅಫಘಾತದ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕೆಎಸ್ ಆರ್ ಟಿಸಿ ಬಸ್ ಸ್ಥಳದಲ್ಲೇ ಬಿಟ್ಟು ಬಸ್ ಡ್ರೈವರ್ ಹಾಗೂ ಕಂಡಕ್ಟರ್ ಪರಾರಿಯಾಗಿದ್ದಾರೆ. ರಸ್ತೆ ತಡೆದು ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ.