ನಂಜನಗೂಡು: ನಾಡಪ್ರಭು ಕೆಂಪೇಗೌಡರ ಆದರ್ಶ ಮತ್ತು ಆಡಳಿತ ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರಮುಖ ಪ್ರೇರಣೆಯಾಗಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ತಿಳಿಸಿದರು.
ನಂಜನಗೂಡು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಶನಿವಾರ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ದರ್ಶನ್ ಧ್ರುವನಾರಾಯಣ್, “ಬೆಂಗಳೂರು ಇಂದು ಸಾಕಷ್ಟು ಅಭಿವೃದ್ಧಿಯಾಗಿದೆ ಎಂದರೆ ಅದರ ಮೂಲ ಭದ್ರ ಬುನಾದಿ ಹಾಕಿದವರು ನಾಡಪ್ರಭು ಕೆಂಪೇಗೌಡರು. ಅಂದಿನ ಕಾಲಘಟ್ಟದಲ್ಲಿ ಒಂದು ನಗರವನ್ನು ಯಾವ ರೀತಿ ನಿರ್ಮಾಣ ಮಾಡಬೇಕು, ಮೂಲಸೌಕರ್ಯಗಳನ್ನು ಹೇಗೆ ಕಲ್ಪಿಸಬೇಕು ಎಂಬ ಅವರ ದೂರದೃಷ್ಟಿ ಇಂದಿಗೂ ಮಹತ್ವಪೂರ್ಣವಾಗಿದೆ” ಎಂದು ಹೇಳಿದರು.
ಒಂದು ಪಟ್ಟಣ ಅಥವಾ ನಗರ ನಿರ್ಮಾಣಕ್ಕೆ ಗಡಿ-ಎಲ್ಲೆ ನಿರ್ಧಾರ ಬಹಳ ಮುಖ್ಯ. ಜನನಾಯಕರು ನಗರ-ಗ್ರಾಮಗಳ ಅಭಿವೃದ್ಧಿಗೆ ಕೆಂಪೇಗೌಡರನ್ನು ಆದರ್ಶವಾಗಿ ಇಟ್ಟುಕೊಳ್ಳಬೇಕು. ಮುಂದಿನ ಪೀಳಿಗೆಗೆ ಅವರ ತತ್ವ, ದೂರದೃಷ್ಟಿ, ಸಮಾಜ ನಿರ್ಮಾಣದ ಚಿಂತನೆಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಕೆಲಸ ಮಾಡಬೇಕು” ಎಂದು ಕರೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ನಂಜನಗೂಡು ಕೂಡ ಅಭಿವೃದ್ಧಿಯ ಹಾದಿಯಲ್ಲಿದೆ. ಇಲ್ಲಿ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಗ್ರಾಮಗಳ ಮೂಲಸೌಕರ್ಯ ಅಭಿವೃದ್ಧಿ ಮತ್ತು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ಭರವಸೆ ನೀಡಿದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಡಾ. ಎಚ್.ಬಿ. ಬೆಟ್ಟಸ್ವಾಮಿ ಮಾತನಾಡಿ, “ಕೆಂಪೇಗೌಡರು ಸರ್ವಧರ್ಮ ಮಾನವೀಯತೆಯ ಆಧಾರದ ಮೇಲೆ ಬೆಂಗಳೂರನ್ನು ಕಟ್ಟಿದರು. ಸುಮಾರು 317 ಕೆರೆಗಳನ್ನು ನಿರ್ಮಿಸಿ, 52 ಪೇಟೆಗಳನ್ನು ಕಟ್ಟಿದರು. ಸರ್ವಜನರ ಬದುಕು ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಭದ್ರ ಬುನಾದಿ ಹಾಕಿಕೊಟ್ಟರು. ಭೌಗೋಳಿಕವಾಗಿ ಎತ್ತರದ ಪ್ರದೇಶದಲ್ಲಿರುವ ಬೆಂಗಳೂರು ಇಂದು ವಿಶ್ವಪ್ರಸಿದ್ಧ ಸಿಲಿಕಾನ್ ಸಿಟಿಯಾಗಿ ಹೊರಹೊಮ್ಮಲು ಅವರು ಕಾರಣಕರ್ತರು. ಇಂದಿಗೂ ಅವರು ಜನರ ಮನಸ್ಸಿನಲ್ಲಿದ್ದಾರೆ” ಎಂದು ನುಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ತಾಲ್ಲೂಕು ದಂಡಾಧಿಕಾರಿ ಡಾ. ಸ್ಮಿತಾ ರಾಮ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜೆರಾಲ್ಡ್ ರಾಜೇಶ್, ಮುಖಂಡರಾದ ನರಸಿಂಹಸ್ವಾಮಿ, ಕೃಷ್ಣಪ್ಪ, ಕೃಷ್ಣಪ್ಪಗೌಡ, ಶ್ರೀಧರ್, ಸಂಜಯ್ ಗೌಡ ಸೇರಿದಂತೆ ತಾಲ್ಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು, ಸಂಘ-ಸಂಸ್ಥೆಗಳ ಮುಖಂಡರು, ಪದಾಧಿಕಾರಿಗಳು ಭಾಗವಹಿಸಿದ್ದರು.

