ನಂಜನಗೂಡು: ಕವಲಂದೆ ಪೊಲೀಸ್ ಠಾಣಾ ವ್ಯಾಪ್ತಿಯ ಹೆಡತಲೆ ಮತ್ತು ಕುಂಬರಹಳ್ಳಿ ಗ್ರಾಮದ ಹೊರವಲಯದಲ್ಲಿ ಜೂಜಾಟ ಆಡುತ್ತಿದ್ದ 9 ಮಂದಿಯನ್ನು ಕವಲಂದೆ ಪೊಲೀಸರು ಬಂಧಿಸಿದ್ದಾರೆ.
ನಂಜನಗೂಡು ತಾಲ್ಲೂಕಿನ ಹೆಡತಲೆ ಮತ್ತು ಕುಂಬರಹಳ್ಳಿ ಗ್ರಾಮಗಳ ಹೊರವಲಯದಲ್ಲಿರುವ ಕೆಬ್ಬೆಕಟ್ಟೆ ಬಳಿ ನೀರು ಹರಿಯುವ ಹಳ್ಳದ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಜೂಜು ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕವಲಂದೆ ಪೊಲೀಸ್ ಠಾಣೆಯ ಪಿಎಸ್ಐ ಬಿ. ಬಸವರಾಜು ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು 9 ಜನರನ್ನು ಬಂಧಿಸಿ ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 12.250 ರೂ.ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಹೆಡತಲೆ ಗ್ರಾಮದ 9 ಮಂದಿಯನ್ನು ಬಂಧಿಸಿ ಪ್ರಕರಣವನ್ನು ದಾಖಲು ಮಾಡಿಕೊಳ್ಳಲಾಗಿದೆ. ಠಾಣೆಯ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಅಕ್ರಮವಾಗಿ ಜೂಜಾಟ ಮತ್ತು ಅಕ್ರಮ ಮಧ್ಯ ಮಾರಾಟ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ತಿಳಿದು ಬರುತ್ತಿದೆ.
ಈ ಹಿನ್ನೆಲೆಯಲ್ಲಿ ವಿಶೇಷ ತಂಡವನ್ನು ರಚಿಸಲಾಗಿದೆ. ಈಗಾಗಲೇ ಗ್ರಾಮಗಳಲ್ಲಿ ನಡೆಯುತ್ತಿರುವ ಜೂಜು ಅಡ್ಡಿಯ ಮೇಲೆ ದಾಳಿ ನಡೆಸಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರತಿ ಗ್ರಾಮಗಳಲ್ಲಿಯೂ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವುದು ನಮ್ಮ ಕರ್ತವ್ಯವಾಗಿದ್ದು, ಯಾವುದೇ ಮುಲಾಜಿಲ್ಲದೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಪಿಎಸ್ಐ ಬಿ.ಬಸವರಾಜು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಕವಲಂದೆ ಪೊಲೀಸ್ ಠಾಣೆಯ ಪಿಎಸ್ಐ ಬಿ.ಬಸವರಾಜು, ಸಿಬ್ಬಂದಿಗಳಾದ ಲಿಂಗರಾಜು, ದೊಡ್ಡಯ್ಯ, ರಮೇಶ್, ಬಸವರಾಜು, ರಮೇಶ್, ಸೀಮಂತ್, ಪ್ರದೀಪ್ ಭಾಗಿಯಾಗಿದ್ದರು.

