ನಂಜನಗೂಡು: ನಾವು ಸೇವಿಸುವ ಆಹಾರದಲ್ಲಿ ಶೇ.27 ಗ್ರಾಂ. ಅಷ್ಟು ವಿಷದ ಆಹಾರವನ್ನು ತಿನ್ನುತ್ತಿದ್ದೇವೆ. ಇದರಿಂದ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ರೈತ ಮುಖಂಡ ಹೊನ್ನೂರು ಪ್ರಕಾಶ್ ಬೇಸರ ವ್ಯಕ್ತಪಡಿಸಿದರು.
ನಂಜನಗೂಡು ತಾಲ್ಲೂಕಿನ ದೊಡ್ಡ ಕವಲಂದೆ ಹೋಬಳಿಯ ಕಾರ್ಯ ಗ್ರಾಮದ ಶ್ರೀ ಕಾರ್ಯ ಸಿದ್ದೇಶ್ವರ ಸ್ವಾಮಿ ಬೆಟ್ಟದಲ್ಲಿ ಭಾರತೀಯ ತೆಂಗು ಬೆಳೆಗಾರರ ಒಕ್ಕೂಟ, ಕರ್ನಾಟಕ ರಾಜ್ಯ ತೆಂಗು ಬೆಳೆಗಾರರ ಸಂಘವನ್ನು ದೀಪ ಬೆಳಗಿಸಿ, ತೆಂಗು ಬೆಳೆಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ತೆಂಗು ಬೆಳೆ ಉತ್ತಮ ಬೆಳೆಯಾಗಿದ್ದು, ಮೈಸೂರು ಮತ್ತು ಚಾಮರಾಜನಗರ ಭಾಗದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ.
ತೆಂಗು ಬೆಳೆಗೆ ಮೌಲ್ಯವರ್ಧನೆ ಮುಖ್ಯವಾಗಿದೆ. ನಮ್ಮಲ್ಲೇ ಇರುವ ತೆಂಗಿನ ಎಣ್ಣೆಯನ್ನು ಬಿಟ್ಟು, ವಿದೇಶದಿಂದ ಎಣ್ಣೆಯನ್ನು ಆಮದು ಮಾಡಿಕೊಳ್ಳಲಾಗುತ್ತಿರುವುದು ದುರಂತ. ಇತ್ತೀಚಿನ ದಿನಗಳಲ್ಲಿ ಎಣ್ಣೆ ಮಾಫಿಯಾ ನಡೆಯುತ್ತಿದೆ. ರೈತರೇ ತೆಂಗಿನ ಉತ್ಪನ್ನಗಳನ್ನು ಬಳಸಬೇಕು. ರೈತರು ಬೆಳೆದ ಆಹಾರ ಪದಾರ್ಥಗಳನ್ನು ತಾವೇ ತಿಂಡಿ ತಿನಿಸುಗಳನ್ನು ಮಾಡಿ ಮಾರಾಟ ಮಾಡಿದಾಗ ಮಾತ್ರ ಲಾಭ ಕಂಡುಕೊಳ್ಳಲು ಸಾಧ್ಯವಾಗುತ್ತದೆ.
ತೆಂಗಿನ ಎಣ್ಣೆಯನ್ನು ಬಳಸುವುದರಿಂದ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ತುಮಕೂರಿನಲ್ಲಿ ಒಂದು ಎಕರೆ ಜಮೀನಿನಲ್ಲಿ ತೆಂಗಿನ ಜೊತೆ ಸುಮಾರು 27 ಬೆಳೆಗಳನ್ನು ಬೆಳೆದು, ಉತ್ತಮ ಇಳುವರಿಯನ್ನು ರೈತನೊರ್ವ ಕಂಡುಕೊಂಡಿದ್ದಾನೆ. ಲಾಭದಾಯಕ ಬೆಳೆಯಾಗಿರುವುದರಿಂದ ರೈತರು ತೆಂಗು ಬೆಳೆಯನ್ನು ಬೆಳೆದರೆ ಅನುಕೂಲವಾಗಲಿದೆ ಎಂದರು.
ಸರ್ಕಾರಗಳು ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆಯನ್ನು ಕೊಡುತ್ತಿಲ್ಲ. ಎರಡು ತಿಂಗಳಿಗೆ ಫಸಲು ಬರಲಿ ಎಂದು ರೈತ ಔಷಧಿಗಳನ್ನು ಹಾಕಿ ಭೂಮಿಯನ್ನು ಹಾಳು ಮಾಡುತ್ತಿದ್ದಾನೆ. ಬೆಳೆಗಳಿಗೆ ಔಷಧಿಗಳನ್ನು ಸಿಂಪಡಣೆ ಮಾಡುತ್ತಿರುವುದರಿಂದ ಆಹಾರ ಪದಾರ್ಥಗಳಿಗೆ ವಿಷ ಸೇರಿಕೊಳ್ಳುತ್ತಿದೆ. ಇದರಿಂದ ಪ್ರಕೃತಿ ಮತ್ತು ಭೂಮಿಯೂ ಫಲವತ್ತತೆ ಕಳೆದುಕೊಳ್ಳುತ್ತಿದೆ. ವಿಕೃತಿಯ ಮನಸ್ಥಿತಿಯನ್ನು ಬಿಟ್ಟು ನಾವು ಜಾನುವಾರುಗಳ ಗೊಬ್ಬರವನ್ನು ಬಳಸಿಕೊಂಡು ಆಹಾರ ಉತ್ಪಾದನೆ ಮಾಡಬೇಕು.
30 ವರ್ಷಗಳ ಹಿಂದೆ ಇದ್ದ ಕೃಷಿ ಪದ್ಧತಿಯನ್ನು ನಾವು ಅನುಸರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ರೈತರು ಬಡವರಾಗಿ, ಸಾಲಗಾರರಾಗಿ ನಿಂತಿದ್ದಾರೆ. ಪ್ರತಿ ಗಂಟೆಗೊಬ್ಬ ರೈತ ಸಾವನ್ನಪ್ಪುತ್ತಿದ್ದಾನೆ. ರೈತರು ಸಂಘಟನೆಗಳ ಮೂಲಕ ಒಗ್ಗಟ್ಟಾಗಿ ನಿಂತುಕೊಳ್ಳಬೇಕು. ಗ್ರಾಮೀಣ ಪ್ರದೇಶದಲ್ಲಿ ಭೂಮಿಯನ್ನು ಮಾರಾಟ ಮಾಡಲಾಗುತ್ತಿದೆ. ಕಾರ್ಪೊರೇಟರ್ ಗೆ ಭೂಮಿಯನ್ನು ಕೊಟ್ಟು ನಾವು ನಗರ ಪ್ರದೇಶಗಳಲ್ಲಿ ದುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಗಳು ನಮ್ಮ ವಿರುದ್ಧ ಕಾನೂನುಗಳನ್ನು ಮಾಡುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ರೈತನ ಬಳಿ ಜಮೀನು ಇರುವುದಿಲ್ಲ. ನಾವು ಎಚ್ಚರಿಕೆಯಿಂದ ಇರಬೇಕಾಗಿದೆ. ರಾಜಕಾರಣಿಗಳಿಗೆ ಮತವನ್ನು ಮಾರಿಕೊಳ್ಳುತ್ತಿದ್ದೇವೆ ಇದರಿಂದಲೇ ನಮ್ಮ ಅವನತಿ ಕಾರಣವಾಗಿದೆ ಎಂದು ಎಚ್ಚರಿಸಿದರು. ಇನ್ನೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯ ಹೋರಾಟಗಾರ ಎಂ. ಗುರುಸ್ವಾಮಿ, ಮಾಜಿ ಸೈನಿಕರಾದ ರಾಜೇಶ್, ದೊರೆಸ್ವಾಮಿ, ಪತ್ರಕರ್ತರಾದ ಸಿ.ಎಂ ಸುಗಂಧರಾಜು, ಕೋಣನೂರು ಲೋಕೇಶ್ ರವರಿಗೆ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ತೆಂಗು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕೋಣನೂರು ವಿಶ್ವನಾಥ್, ತೆಂಗು ಬೆಳೆಗಾರರ ಸಂಘದ ಗೌರವಾಧ್ಯಕ್ಷ ನಂಜುಂಡಸ್ವಾಮಿ, ಚುಂಚನಹಳ್ಳಿ ಬೋಗೇಶ್, ಗುರುಸ್ವಾಮಿ, ಕುಮಾರ್, ತೋಟಗಾರಿಕೆ ಇಲಾಖೆಯ ಶಿವಕುಮಾರ್, ಅರಣ್ಯ ಇಲಾಖೆಯ ಸತೀಶ್, ತೆಂಗು ಬೆಳೆಗಾರರ ಉತ್ಪಾದಕರ ಅಭಿವೃದ್ಧಿ ಸಂಸ್ಥೆಯ ಚೆನ್ನಪ್ಪ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಾಡ್ಯರವಿ, ಕಾರ್ಯ ಮಹದೇವಯ್ಯ, ಶಿವಮೂರ್ತಿ, ದೊರೆ ಸೇರಿದಂತೆ ಹಲವರು ಭಾಗವಹಿಸಿದ್ದರು.

