ನಂಜನಗೂಡು: ತಲಾ ಆದಾಯದಲ್ಲಿ ಕರ್ನಾಟಕವೇ ಒಂದನೇ ಸ್ಥಾನದಲ್ಲಿದೆ. ಜಿಎಸ್ ಟಿ ಯಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದ್ದರೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಕೇಂದ್ರದ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ವರುಣಾ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಹದಿನಾರು ಗ್ರಾಮದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಮೈಸೂರು, ಮೈಸೂರು ಜಿಲ್ಲೆಯ ವರುಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 1107.72 ಕೋಟಿ ರೂ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ ಮತ್ತು ಸವಲತ್ತುಗಳ ವಿತರಣಾ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿ ಮಾತನಾಡಿದ ಅವರು, ವರುಣ ಕ್ಷೇತ್ರದಲ್ಲಿ 1107.72 ಕೋಟಿ ರೂ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಕೊಡುತ್ತಿದ್ದೇವೆ.

ಕಾಂಗ್ರೆಸ್ ಸರ್ಕಾರ ಯಾವಾಗ ಯಾವಾಗ ಅಧಿಕಾರಕ್ಕೆ ಬಂದಿದೆ. ಅಭಿವೃದ್ಧಿ ಕಾಮಗಾರಿ ಮಾಡೋದಲ್ಲ ಎಲ್ಲ ಸಮಾಜದ ಬಡವರು, ದಲಿತರು, ಹಿಂದೂಳಿದವರು, ರೈತರು, ಕಾರ್ಮಿಕರಿಗೆ ಶಕ್ತಿ ತುಂಬುವ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸಮಾಜದಲ್ಲಿ ಅಸಮಾನತೆ ಹೋಗಬೇಕು. ಸಮಾಜದಲ್ಲಿ ಸಮಾನತೆ ಬರಬೇಕು. ಎಲ್ಲರಿಗೂ ಸಮಾನವಾದ ಅವಕಾಶ ಸಿಗಬೇಕು.

ನನ್ನ 41 ವರ್ಷಗಳ ರಾಜಕೀಯ ಜೀವನದಲ್ಲಿ ಐದು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದೆ. ವರುಣ ಕ್ಷೇತ್ರ ಆದಮೇಲೆ ಮೂರು ಬಾರಿ ವಿಧಾನಸಭೆಗೆ ಕಳುಹಿಸಿಕೊಟ್ಟಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದು, ವರುಣ ಕ್ಷೇತ್ರದಿಂದ. ಎರಡು ಬಾರಿ ಸಿಎಂ ಆಗಿದ್ದೇನೆ. ವರುಣಾ, ಚಾಮುಂಡೇಶ್ವರಿ ಕ್ಷೇತ್ರದ ಜನರಿಗೆ ನಾನು ಚಿರಋಣಿಯಾಗಿದ್ದೇನೆ. ಜನರ ಋಣ ತೀರಿಸುವುದು ನನ್ನ ಕರ್ತವ್ಯ. ಸರ್ಕಾರ ಅನೇಕ ಸವಲತ್ತುಗಳನ್ನು ಕೊಡುತ್ತಿದ್ದೇವೆ. ಫಲಾನುಭವಿಗಳಿಗೆ ವಿತರಣೆಯನ್ನೂ ಮಾಡುತ್ತಿದ್ದೇವೆ. ಇದನ್ನು ಸದುಪಯೋಗ ಪಡೆದುಕೊಳ್ಳಬೇಕು.

160 ಭರವಸೆಗಳನ್ನು ಕೊಟ್ಟಿದ್ದವು, ಅದರಲ್ಲಿ 158 ಭರವಸೆಗಳನ್ನು ಈಡೇಸಿದ್ದೇವೆ. ಹೆಚ್.ಡಿ ಕುಮಾರಸ್ವಾಮಿ ಬಿಜೆಪಿ ಜೊತೆ ಸೇರಿಕೊಂಡಿದ್ದಾರೆ. ಇವತ್ತು ಹಾಡಿ ಹೊಗಳುವ ಕೆಲಸ ಮಾಡ್ತಾ ಇದ್ದಾರೆ. ಅಧಿಕಾರಕೋಸ್ಕರ ಬಿಜೆಪಿ ಜೊತೆ ಸೇರಿ ಅಧಿಕಾರ ಮಾಡುತ್ತಿದ್ದಾರೆ. ಅಭಿವೃದ್ಧಿ ಕೆಲಸಗಳಿಗೆ ದುಡ್ಡಿಲ್ಲ ಎಂದು ಬಿಜೆಪಿಯವರು ಆರೋಪ ಮಾಡುತ್ತಾರೆ. ನೀವು ನಮ್ಮ ಸರ್ಕಾರಿ ಕಾರ್ಯಕ್ರಮಗಳಿಗೆ ಬಂದು ನೋಡಬೇಕು. ಬಿಜೆಪಿಯವರು ಸುಳ್ಳು ಪ್ರಚಾರ ಮಾಡಿ, ಜನರನ್ನು ತಪ್ಪು ದಾರಿಗೆ ತರುತ್ತಿದ್ದಾರೆ.

ಗ್ಯಾರಂಟಿ ಯೋಜನೆಗಳಿಂದ ತಲಾ ಆದಾಯದಲ್ಲಿ ಕರ್ನಾಟಕ ಒಂದನೇ ಸ್ಥಾನದಲ್ಲಿದೆ. ಉದ್ಯೋಗ ಪ್ರಮಾಣ ಜಾಸ್ತಿಯಾಗಿದೆ. ಕರ್ನಾಟಕ ಆರ್ಥಿಕವಾಗಿ ಮೇಲೆ ಬರಲು ಕಾರಣ ಆಗುತ್ತಿದೆ. ಬಡತನ ಕಡಿಮೆಯಾಗುತ್ತಿದೆ. ರಾಜ್ಯವನ್ನು ಮುಂಚೂಣಿಯಲ್ಲಿ ತೆಗೆದುಕೊಂಡು ಹೋಗುತ್ತಿದ್ದೇವೆ. ಜಿಎಸ್ ಟಿ ಯಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ ಒಂದನೇ ಸ್ಥಾನದಲ್ಲಿದೆ. ಆದರೆ ಕೇಂದ್ರ ಸರ್ಕಾರ ನಮಗೆ ಸಹಕರಿಸುತ್ತಿಲ್ಲ. ನಮಗೆ ತೆರಿಗೆ ಹಣವನ್ನು ಕೊಡುತ್ತಿಲ್ಲ. ನಮ್ಮ ಪಾಲನ್ನು ಶೇ. 4.7 ಕೊಡಬೇಕು ಕೊಟ್ಟಿಲ್ಲ.

3.7ಕ್ಕೆ ಇಳಿದಿದೆ. ಇದು ನಮಗೆ ಬಿಜೆಪಿ ಕೇಂದ್ರ ಸರ್ಕಾರ ಮಾಡಿರುವ ಅನ್ಯಾಯ. ಬಿಜೆಪಿಯಿಂದ ಗೆದ್ದಿರುವ ಸಂಸದರು ಕೇಂದ್ರ ಸರ್ಕಾರವನ್ನು ಕೇಳಬೇಕು. ಕೇಳದಿದ್ದರೆ ಕರ್ನಾಟಕದ ಜನರಿಗೆ ದ್ರೋಹ ಬಗೆದಂತೆ. ಬಿಜೆಪಿಯವರು ಮತ ಕಳ್ಳತನ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಅನ್ನೋದು ನಮ್ಮ ಆರೋಪ. ರಾಹುಲ್ ಗಾಂಧಿ ಅವರು ದಾಖಲಾತಿಗಳನ್ನು ಪ್ರದರ್ಶನ ಮಾಡಿದ್ರು. ಬಿಜೆಪಿ ಯಾವತ್ತೂ ಜನರ ಆರ್ಶೀವಾದ ಪಡೆದು ಅಧಿಕಾರಕ್ಕೆ ಬಂದಿಲ್ಲ ‌.

ಅವರಿಗೆ 113 ಸ್ಥಾನಗಳು ಬರಲಿಲ್ಲ. ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿ ನೀತಿಯನ್ನು ಅನುಸರಿಸಿ ಅಧಿಕಾರಕ್ಕೆ ಬಂದರು. ಎರಡೂ ಬಾರಿಯೂ ಅಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದಿದ್ದರು. ಬಿಜೆಪಿಯರಿಗೆ ಅಧಿಕಾರ ದಾಹ ಇದೆ. ಬಿಜೆಪಿ ಸಂವಿಧಾನ ಪರವಾಗಿಲ್ಲ ವಿರೋಧವಾಗಿದ್ದಾರೆ. ಅಂಬೇಡ್ಕರ್ ರವರ ಹೆಸರು ಹೇಳ್ತಾರೆ ಅಷ್ಟೇ ಆದರೆ ವಿರುದ್ಧವಾಗಿದ್ದಾರೆ. ಸಂವಿಧಾನವನ್ನು ರಕ್ಷಣೆ ಮಾಡಿಕೊಳ್ಳಬೇಕು. ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಬೇಕು. ಸಂವಿಧಾನ ಉಳಿದರೆ ನಾವು ಉಳಿಯುತ್ತೇವೆ ಇಲ್ಲದಿದ್ದರೆ ಇಲ್ಲ. ನಾನು ಸಿಎಂ ಆಗಲು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವೇ ಕಾರಣ. ಮುಂದಿನ ಚುನಾವಣೆಗಳಲ್ಲಿ ನನಗೆ ಶಕ್ತಿ ತುಂಬುವ ಕೆಲಸವನ್ನು ಮಾಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ, ಸಚಿವ ವೆಂಕಟೇಶ್ , ಸಂಸದ ಸುನೀಲ್ ಬೋಸ್, ಜಿಲ್ಲಾಧಿಕಾರಿ ಲಕ್ಷೀಕಾಂತರೆಡ್ಡಿ, ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ, ಡಾ.ತಿಮ್ಮಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷೆ ಡಾ. ಪುಷ್ಪ ಅಮರನಾಥ್, ಗ್ರಾ.ಪಂ ಅಧ್ಯಕ್ಷೆ ಸಣ್ಣತಾಯಮ್ಮ ಶಿವಯ್ಯ, ಉಪಾಧ್ಯಕ್ಷ ಗೋವಿಂದಶೆಟ್ಟಿ ಗ್ರಾ.ಪಂ ಸದಸ್ಯರಾದ ನಾಗರಾಜು, ಅಭಿ, ರವಿ, ಶಿವನಾಗು, ಜಿಪಂ ಮಾಜಿ ಸದಸ್ಯ ನಂಜಪ್ಪ, ಮಾಜಿ ತಾ.ಪಂ ಸದಸ್ಯ ಗುರುಮಲ್ಲಪ್ಪ ಸೇರಿದಂತೆ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.