ನಂಜನಗೂಡು: ಕೇರಳದ ವೈಯನಾಡಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕಪಿಲಾ ನದಿಗೆ ಹೆಚ್ಚುವರಿ ನೀರನ್ನು ಹೊರ ಬಿಟ್ಟಿರುವ ಪರಿಣಾಮ ನಂಜನಗೂಡು ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಗದ್ದೆಗಳು ಮುಳುಗಡೆಯಾಗಿ ರೈತರು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ.

ತಾಲ್ಲೂಕಿನ ಹುಲ್ಲಹಳ್ಳಿ ಮತ್ತು ರಾಂಪುರ ನಾಲೆಗಳ ವ್ಯಾಪ್ತಿಯ ರೈತರು ಸಾಲ ಸೋಲ ಮಾಡಿ ಭತ್ತದ ಬೆಳೆಯನ್ನು ಬೆಳೆದಿದ್ದರು. ಕಟಾವಿಗೆ ಬಂದಿದ್ದ ಭತ್ತದ ಬೆಳೆ ಕಪಿಲಾ ನದಿ ನೀರಿನ ಪ್ರವಾಹಕ್ಕೆ ಜಲಾವೃತವಾಗಿದೆ.

ಸುತ್ತೂರು, ಬೊಕ್ಕಹಳ್ಳಿ, ಮೂಡಹಳ್ಳಿ, ಹೊಸಕೋಟೆ, ಬಿಳುಗಲಿ, ತಾಯೂರು ಸೇರಿದಂತೆ ಹಲವು ಗ್ರಾಮಗಳ ಸುಮಾರು ನೂರಾರು ಎಕರೆ ಪ್ರದೇಶದ ಜಮೀನುಗಳಿಗೆ ನೀರು ನುಗ್ಗಿದ ಪರಿಣಾಮ ಭತ್ತದ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ನಷ್ಟ ಅನುಭವಿಸಿದ ರೈತರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.