ಮೈಸೂರು: ಸಾಹಿತ್ಯ, ಸಂಗೀತ ಇರುವ ಕಡೆ ಕನ್ನಡಾಂಬೆ ಜೀವಂತವಾಗಿರುತ್ತಾಳೆ ಎಂದು ಗಾಯಕ ಮೈಸೂರು ಮಹಾಲಿಂಗ ಹೇಳಿದರು.
ಮಹಾರತ್ನ ಟ್ರಸ್ಟ್ ವತಿಯಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ವಿಜಯನಗರದ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಕನ್ನಡಹಬ್ಬ ಕರ್ನಾಟಕ ರಾಜ್ಯೋತ್ಸವ ಸಂಭ್ರಮಾಚರಣೆ, ಕನ್ನಡ ಗೀತ ಗಾಯನ ಹಾಗೂ ಕನ್ನಡಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿ ಪ್ರಸ್ತುತ ಅಬ್ಬರದ ನಡುವೆ ನಮ್ಮ ಸಾಹಿತ್ಯ,ಸಂಗೀತ, ಕವಿಗಳು ಉಳಿಯಬೇಕು. ಹೀಗಾಗಿ ಭಾವಗೀತೆ, ಜಾನಪದ ಗೀತೆಗಳನ್ನು ಹಾಡುತ್ತಾ ಮನೆ ಮನೆಗೆ ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ಆ ಮೂಲಕ ಕನ್ನಡ ಸೇವೆ ಮಾಡುತ್ತಿದ್ದೇವೆ ಎಂದರು.
ಕರೋಕೆ ಬೇಡ, ನೈಜ ಕಲಾವಿದರಿಗೆ ಅವಕಾಶ ನೀಡಬೇಕು ಎಂಬ ಉದ್ದೇಶದಿಂದ ಟ್ರಸ್ಟ್ ವತಿಯಿಂದ ನಡೆಸಿದ ಜಾನಪದ ಕಲಾ ಶಿಬಿರದಲ್ಲಿ ಐವತ್ತು ಮಂದಿ ಪಾಲ್ಗೊಂಡಿದ್ದರು. ನಂತರ ನೂರು ಮಂದಿ ಒಂದೇ ಬಣ್ಣದ ವಸ್ತ್ರ ಧರಿಸಿ, ಕನ್ನಡಾಂಬೆ, ಭಾರತಾಂಬೆ ಗೀತೆಗಳನ್ನು ಹಾಡುತ್ತಾ ಅರಮನೆ ಬಳಿಯಿಂದ ಮೆರವಣಿಗೆ ಸಂಘಟಿಸಲಾಗಿತ್ತು. ರಾಜ್ಯ ಮಟ್ಟದ ಭಜನಾ ಸ್ಪರ್ಧೆ ಕೂಡ ನಡೆಸಲಾಯಿತು. ಮಹಾರಾಣಿ ಕಾಲೇಜಿನಲ್ಲಿ ಜನಪದ ಹಾಗೂ ಭಾವಗೀತೆ ಸ್ಪರ್ಧೆಗಳನ್ನು ನಡೆಸಲಾಯಿತು. ಸಾಧಕರಿಗೆ ಸಾಹಿತ್ಯರತ್ನ, ಸಂಗೀತ ರತ್ನ ಪ್ರಶಸ್ತಿಗಳನ್ನು ನೀಡಲಾಗಿದೆ. ಈ ಬಾರಿಯಿಂದ ಕನ್ನಡಸೇವಾ ರತ್ನ ಪ್ರಶಸ್ತಿ ಆರಂಭಿಸಲಾಗಿದೆ ಎಂದರು
ಮುಖ್ಯಅತಿಥಿಯಾಗಿದ್ದ ಸಂಗೀತ ವಿದ್ವಾಂಸ ಡಾ.ಆರ್.ಎಸ್. ನಂದಕುಮಾರ್ ಮಾತನಾಡಿ, ಪ್ರತಿಯೊಬ್ಬರೂ ಕನ್ನಡಮ್ಮನಿಗೆ ನಾದಪುಷ್ಪಗಳನ್ನು ಅರ್ಪಿಸಬೇಕು ಎಂದರು. ನಂತರ ಹುಡುಕಬೇಕು ಒಳಗೆ ನಿನ್ನೊಳಗೆ ಗೀತೆ ಹಾಡಿದರು. ಕನ್ನಡ ಸೇವಾ ರತ್ನ ಪ್ರಶಸ್ತಿ ಸ್ವೀಕರಿಸಿದ ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಆರ್. ಮಹೇಂದ್ರ ಶ್ಲೋಕ ಹಾಡಿದರು. ಮತ್ತೊರ್ವ ಪ್ರಶಸ್ತಿ ಪುರಸ್ಕೃತ ಗಾಯಕ ಪುರುಷೋತ್ತಮ ಕಿರಗಸೂರು ಎದೆ ತುಂಬಿ ಹಾಡುವೆನು… ಗೀತೆಯನ್ನು ಹಾಡಿದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಅಗಸ್ತ್ಯ ಕ್ರೆಡಿಟ್ ಕೋ-ಆಪ್ ಸೊಸೈಟಿ ಮಾಜಿ ಅಧ್ಯಕ್ಷ ಸಿ.ವಿ. ಪಾರ್ಥಸಾರಥಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ರೂಪಾ, ಖಜಾಂಚಿ ನಾಗರತ್ನಾ ಇದ್ದರು. ಸಹ ಕಾರ್ಯದರ್ಶಿ ನಾಗಶ್ರೀ ಸ್ವಾಗತಿಸಿದರು. ಗೋಪಾಲಸ್ವಾಮಿ ಶಾಲೆಯ ಶಿಕ್ಷಕ ಶ್ರೀವತ್ಸ ನಿರೂಪಿಸಿದರು. ಸನ್ಮಾನಿತರನ್ನು ಆಶಾ, ಅಂಬಿಕಾ, ವಿದ್ಯಾ ವೆಂಕಟೇಶ್ ಪರಿಚಯಿಸಿದರು.

