ನಂಜನಗೂಡು: ಪತ್ರಕರ್ತನ ವರದಿಗಾರಿಕೆಯ ಬಗ್ಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿ, ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಪತ್ರಕರ್ತ ಸಿ.ಎಂ ಸುಗಂಧರಾಜು ರವರಿಗೆ ಸನ್ಮಾನಿಸಿ ಗೌರವಿಸಿದ್ದಾರೆ.
ನಂಜನಗೂಡು ತಾಲ್ಲೂಕಿನ ದೇವನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಕವಲಂದೆ ಗ್ರಾಮದ ನಾಯಕ ಸಮುದಾಯದ ಬೀದಿಯಲ್ಲಿ ಕಳೆದ ನಾಲ್ಕು ವರ್ಷಗಳ ಹಿಂದೆ ಚರಂಡಿಯ ಕೊಳಚೆ ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸುತ್ತಿತ್ತು. ಮಳೆಗಾಲದ ಸಂದರ್ಭದಲ್ಲಿ ಗ್ರಾಮಸ್ಥರಿಗೆ ತುಂಬಾ ತೊಂದರೆಯಾಗುತ್ತಿತ್ತು. ಚರಂಡಿ ನೀರು ಸರಾಗವಾಗಿ ಹರಿಯಲು ಜಮೀನಿನ ಮಾಲೀಕರು ಅಡ್ಡಿಪಡಿಸಿದ್ದರು.
ಇದರಿಂದ ಕೊಳಚೆ ಚರಂಡಿ ನೀರನ್ನು ಗ್ರಾಮಸ್ಥರು ತಮ್ಮ ಮನೆಯ ಮುಂಭಾಗದಲ್ಲಿ ಗುಂಡಿ ತೆಗೆದು ಅಲ್ಲಿಗೆ ಬಿಡುತ್ತಿದ್ದರು. ಚರಂಡಿ ಸಮಸ್ಯೆಯಿಂದ ವಾರಕ್ಕೆ ಒಂದೆರಡು ಬಾರಿ ಸ್ನಾನ ಮಾಡುತ್ತಿದ್ದರು. ನಂತರ ಆ ಕೊಳಚೆ ನೀರನ್ನು ಹೊತ್ತುಕೊಂಡು ಹೋಗಿ ಹೊರಗಡೆ ಚೆಲ್ಲುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿರಲಿಲ್ಲ.
ನಂತರ ಪತ್ರಕರ್ತ ಸಿ.ಎಂ ಸುಗಂಧರಾಜು ರವರ ಗಮನಕ್ಕೆ ತಂದ ಗ್ರಾಮಸ್ಥರು, ಗ್ರಾಮಕ್ಕೆ ತೆರಳಿ ಸಮಸ್ಯೆಯನ್ನು ಆಲಿಸಿ ವರದಿಯನ್ನು ಪ್ರಕಟಿಸಿದ ನಂತರ ನಾಲ್ಕು ವರ್ಷಗಳಿಂದ ಎದುರಿಸುತ್ತಿದ್ದ ಸಮಸ್ಯೆಗೆ ನಾಂದಿ ಹಾಡಲಾಯಿತು. ಇದರಿಂದ ಸಂತಸಗೊಂಡಿರುವ ಗ್ರಾಮಸ್ಥರು, ಪತ್ರಕರ್ತ ಸಿ.ಎಂ ಸುಗಂಧರಾಜುರವರನ್ನು ಸನ್ಮಾನಿಸಿ ಗೌರವಿಸಿ, ಔತಣ ಕೂಟವನ್ನು ಏರ್ಪಡಿಸಿದ್ದರು.
ವೇದಿಕೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಪತ್ರಕರ್ತ ಸಿ.ಎಂ ಸುಗಂಧರಾಜು ಮಾತನಾಡಿ, ಪತ್ರಕರ್ತರು ಸುದ್ದಿಯನ್ನು ಮಾಡುವುದಷ್ಟೇ ಅಲ್ಲ. ಆ ಸುದ್ದಿಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನೊಂದಿರುವ ಜನರ ಪರವಾಗಿ ನಿಲ್ಲುವುದು ಪತ್ರಕರ್ತರ ಜವಾಬ್ದಾರಿಯಾಗಿದೆ. ಸಮಾಜದಲ್ಲಿ ದಿನಪತ್ರಿಕೆಗಳು ಮತ್ತು ಸುದ್ದಿ ಮಾಧ್ಯಮಗಳು ತಮ್ಮದೇ ಆದ ಜನಪರ ಕೆಲಸ ಕಾರ್ಯಗಳನ್ನು ಪ್ರತಿದಿನ ಮಾಡುತ್ತಲೇ ಬಂದಿವೆ.
ಚಿಕ್ಕ ಕವಲಂದೆ ಗ್ರಾಮದಲ್ಲಿ ಮೂಲಭೂತ ಸೌಕರ್ಯ ಮತ್ತು ಚರಂಡಿ ಸಮಸ್ಯೆಯಿಂದ ಗ್ರಾಮಸ್ಥರು ರೋಸಿ ಹೋಗಿದ್ದರು. ಈ ಬಗ್ಗೆ ವರದಿಯನ್ನು ಮಾಡಿದ್ದೆ. ಈ ಹಿಂದೆ ಶಾಸಕರಾಗಿದ್ದ ಹರ್ಷವರ್ಧನ್ ರವರು ಮತ್ತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ತಂದಿದ್ದೇವು. ಸಮಾಜದಲ್ಲಿ ಪ್ರತಿಯೊಬ್ಬ ಪ್ರಜೆಯು ಪ್ರಶ್ನಿಸಿದಾಗ ಮಾತ್ರ ಪ್ರಜಾಪ್ರಭುತ್ವ ಉಳಿಯುತ್ತದೆ. ಯಾವುದೇ ಸಮಸ್ಯೆಗಳು ಇದ್ದರೂ ಗ್ರಾಮಸ್ಥರು ಒಗ್ಗಟ್ಟಾಗಿ ನಿಂತು ಹೋರಾಟ ಮಾಡಿದರೆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು.
ಈ ಹೋರಾಟದಲ್ಲಿ ದಲಿತ ಸಂಘರ್ಷ ಸಮಿತಿ, ಅಂಬೇಡ್ಕರ್ ಸೇನೆ, ರೈತ ಸಂಘಟನೆಗಳು ಕೈಜೋಡಿಸಿದ್ದರು. ಅನ್ಯಾಯ ಮತ್ತು ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಪತ್ರಕರ್ತರು ಮತ್ತು ಹೋರಾಟಗಾರರಿಗೆ ಬೆದರಿಸುವ ತಂತ್ರಗಾರಿಕೆ ನಡೆಯುತ್ತಿದೆ. ಇಂತಹ ನಡುವೆಯೂ ಪತ್ರಕರ್ತರು ಎದೆಗುಂದದೆ ಧೈರ್ಯದಿಂದ ಮುನ್ನುಗ್ಗಿ ಪತ್ರಿಕೋದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪತ್ರಕರ್ತರಿಗೆ ಸೂಕ್ತ ರಕ್ಷಣೆ ಮತ್ತು ಭದ್ರತೆ ಇಲ್ಲದಂತಾಗಿದೆ ಎಂದು ಹೇಳಿದರು.
ಬಳಿಕ ದಲಿತ ಸಂಘರ್ಷ ಸಮಿತಿಯ ಆಲತ್ತೂರು ಶಿವರಾಜು ಮಾತನಾಡಿ, ಪತ್ರಕರ್ತರು ಸಮಾಜದಲ್ಲಿ ತಮ್ಮದೇ ಆದ ಕೆಲಸ ಕಾರ್ಯಗಳನ್ನು ಮಾಡುತ್ತಾರೆ. ಆದರೆ, ಪ್ರಕಟ ಮಾಡಿದ ಸುದ್ದಿಗಳಿಗೆ ಕೊನೆಯ ತನಕ ಬಿಡದೆ ಅದಕ್ಕೆ ನ್ಯಾಯ ಒದಗಿಸುವ ಪತ್ರಕರ್ತರು ಸಿಗುವುದು ಅಪರೂಪ. ಸುಗಂಧರಾಜುರವರು ಪತ್ರಕರ್ತರಾಗಿ ಸುಮಾರು ವರ್ಷಗಳಿಂದ ಬಡವರ ಪರವಾಗಿ ಜನಪರ ಸುದ್ದಿಗಳನ್ನು ಮಾಡಿ ಅವರಿಗೆ ನ್ಯಾಯ ಕಲ್ಪಿಸುವ ತನಕ ಬಿಡುವುದಿಲ್ಲ. ಇಂತಹ ಪತ್ರಕರ್ತರು ಸಮಾಜಕ್ಕೆ ಅಗತ್ಯವಾಗಿದ್ದಾರೆ. ನಮ್ಮನ್ನಾಳುವ ಸರ್ಕಾರಗಳು ಮತ್ತು ಅಧಿಕಾರಿಗಳನ್ನು ಎಚ್ಚರಿಸಿ ಅವರನ್ನು ತಿದ್ದಿ ಕೆಲಸ ಮಾಡಿಸುವ ನಿಟ್ಟಿನಲ್ಲಿ ಪತ್ರಕರ್ತರ ಪಾತ್ರ ಮಹತ್ವವಾಗಿದೆ. ಹಾಗಾಗಿ ಪತ್ರಕರ್ತರನ್ನು ನಾವು ಗೌರವದಿಂದ ಕಾಣಬೇಕು. ಅವರಿಂದ ಆಗಿರುವ ಕೆಲಸಗಳನ್ನು ಕಾರ್ಯಗಳನ್ನು ನಾವು ಸ್ಮರಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯ ಹನುಮಂತ ನಾಯಕ, ದಕ್ಷಿಣ ಕಾಶಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪಿ. ಶಿವಕುಮಾರ್, ದಲಿತ ಸಂಘರ್ಷ ಸಮಿತಿಯ ಮೂಡಹಳ್ಳಿ ಮಹದೇವ್, ಆಲತ್ತೂರು ಶಿವರಾಜು, ಡಾ.ಬಿ.ಆರ್ ಅಂಬೇಡ್ಕರ್ ಸಂಘದ ಅಧ್ಯಕ್ಷ ಸುರೇಶ್, ಮುಖಂಡರಾದ ಚಿಕ್ಕಕವಲಂದೆ ಮಹದೇವಯ್ಯ, ಶ್ರೀನಿವಾಸ್, ಕಾಂತ ಸೌಂಡ್ಸ್ ಮಾಲೀಕರಾದ ದೇವನೂರು ಕಾಂತರಾಜು, ನಾಗಣ್ಣ, ಸಿದ್ದನಾಯಕ, ನಂಜನಾಯಕ, ಮಹೇಶ್, ರಂಗನಾಯಕ, ಮಹದೇವ್, ಮಹದೇವಮ್ಮ, ಮಂಗಳಮ್ಮ, ಸುಶೀಲಮ್ಮ, ಕಮಲಮ್ಮ, ಪುಟ್ಟಮ್ಮ, ಲಕ್ಷ್ಮೀ ಸೇರಿದಂತೆ ಹಲವರು ಭಾಗವಹಿಸಿದ್ದರು.

