ಮೈಸೂರು: ಸದಸ್ಯತ್ವ ನೋಂದಣಿ ಸಮರೋಪಾದಿಯಲ್ಲಿ ಮಾಡುವುದರೊಂದಿಗೆ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳಿಗೆ ಮೈಸೂರು ಜಿಲ್ಲೆಯಿಂದಲೇ ರಣಕಹಳೆ ಮೊಳಗಿಸುವ ಒಕ್ಕೋರಲಿನ ನಿರ್ಧಾರವನ್ನು ಜೆಡಿಎಸ್ ನಾಯಕರು ಮೈಸೂರಿನಿಂದ ಕೈಗೊಂಡಿದ್ದಾರೆ.
ಮೈಸೂರಿನಲ್ಲಿ ಜೆಡಿಎಸ್ ಕಾರ್ಯಕರ್ತರು, ಮುಖಂಡರ ಸಭೆಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ. ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ, ಜೆಡಿಎಸ್ ಪಕ್ಷಕ್ಕೆ ಪುಟಿದೇಳುವ, ಫೀನಿಕ್ಸ್ ಪಕ್ಷಿಯಂತೆ ಮೇಲೆದ್ದು ಬರುವ ಶಕ್ತಿ ಇದೆ. ಅನೇಕ ಸಂದರ್ಭದಲ್ಲಿ ಅದು ಸಾಬೀತಾಗಿದೆ. ಪಕ್ಷ ಸಂಘಟನೆ ಚೆನ್ನಾಗಿದ್ದರೆ ನಾವು ಯಾವುದೇ ಚುನಾವಣೆಯನ್ನು ಗೆಲ್ಲಬಹುದು. ಕಾರ್ಯಕರ್ತರ ಪರಿಶ್ರಮದಿಂದ ನಮ್ಮ ಪಕ್ಷ ಅನೇಕ ಯಶಸ್ಸುಗಳನ್ನು ಗಳಿಸಿದೆ.
ಜೆಡಿಎಸ್ ವ್ಯಕ್ತಿ ಆಧಾರಿತ ಪಕ್ಷವಲ್ಲ. ಕಾರ್ಯಕರ್ತರು, ರೈತರು ಕಟ್ಟಿರುವ ಪಕ್ಷ. ನಮ್ಮ ಪಕ್ಷ ಬಲವಾಗಿದ್ದರೆ ರೈತರಿಗೆ ಅನುಕೂಲ ಆಗುತ್ತದೆ. ಎಲ್ಲಾ ಸಮಾಜಗಳನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಶಕ್ತಿಯನ್ನು ಹೊಂದಿದೆ. ದೇವೇಗೌಡರ ಶ್ರಮ, ದೂರದೃಷ್ಟಿಯಿಂದ ಜೆಡಿಎಸ್ ಇವತ್ತಿಗೂ ಸಶಕ್ತವಾಗಿ ನಿಂತಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ದೇವೇಗೌಡರು ಜಾತಿ ಧರ್ಮ ಮೀರಿ ಎಲ್ಲಾ ಸಮಾಜದ ಮುಖಂಡರನ್ನು ಗುರುತಿಸಿ ದೊಡ್ಡ ನಾಯಕರನ್ನಾಗಿ ರೂಪಿಸಿ ಬೆಳೆಸಿದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯದಂತೆ ಸಮ ಸಮಾಜದ ಆಶಯವಾಗಿ ಎಲ್ಲಾ ಸಮುದಾಯಗಳ ನಾಯಕರನ್ನು ಬೆಳೆಸಿದರು. ಅದನ್ನು ಸ್ಮರಿಸಿಕೊಳ್ಳುವ ಹೃದಯ ವೈಶಾಲ್ಯತೆ ಅನೇಕರಿಗೆ ಇಲ್ಲ. ಅದರ ಬಗ್ಗೆ ನನಗೆ ಚಿಂತೆ ಇಲ್ಲ. ಆದರೆ, ಪಕ್ಷ ನಿಷ್ಠೆಯಿಂದ ಪಕ್ಷಕ್ಕಾಗಿ ದುಡಿಯುತ್ತಿರುವವರಿಗೆ ಮನ್ನಣೆ ಯಾವತ್ತೂ ಇದೆ ಎಂದು ಕೇಂದ್ರ ಸಚಿವರು ಹೇಳಿದರು.
ನಾಯಕ ಸಮುದಾಯಕ್ಕೆ ಮೀಸಲು ಕೊಡಬೇಕಾದರೆ ದೇವೆಗೌಡರ ಕೊಡುಗೆ ದೊಡ್ಡದು. ಚಂದ್ರಶೇಖರ್ ಅವರು ಮಂತ್ರಿ ಮಾಡುತ್ತೇನೆ ಎಂದರು. ನನಗೆ ಮಂತ್ರಿ ಸ್ಥಾನ ಬೇಡ. ಅದರ ಬದಲಿಗೆ ನಾಯಕ ಸಮಾಜವನ್ನು ಪರಿಶಿಷ್ಟ ಪ್ರವರ್ಗಕ್ಕೆ ಸೇರಿಸಿ ಎಂದು ಕೇಳಿದರು. ಅವರ ಒತ್ತಾಯದ ಮೇರೆಗೆ ಇವತ್ತು ನಾಯಕ ಸಮಾಜ ಎಸ್ಟಿ ಪ್ರವರ್ಗದಲ್ಲಿದೆ. ಅಷ್ಟೇ ಅಲ್ಲ, ಆ ಸಮುದಾಯದ ಮಠ ಕಟ್ಟಬೇಕಾದರೆ ಅವರ ಕೊಡುಗೆ ಇದೆ ಎಂದು ಕುಮಾರಸ್ವಾಮಿ ಅವರು ಮಾಹಿತಿ ನೀಡಿದರು.
ರಾಜ್ಯ ಸರ್ಕಾರ ವಿಪರೀತ ಭ್ರಷ್ಟಾಚಾರದಲ್ಲಿ ಮುಳುಗಿದೆ. ಐದು ಕೋಟಿ, ಹತ್ತು ಕೋಟಿ ಎಂದು ಒಂದೇ ಸಲ ಬಿಡುಗಡೆ ಮಾಡುತ್ತೇವೆ ಎಂದು ಹೇಳುತ್ತಾರೆ. ಆಮೇಲೆ ಐದು ಪರ್ಸೆಂಟ್ ಹತ್ತು ಪರ್ಸೆಂಟ್ ಡಿಮ್ಯಾಂಡ್ ಮಾಡುತ್ತಿದ್ದಾರೆ. ಮುಸ್ಲಿಮರು ನಮ್ಮವರು ಎಂದು ಈ ಸರ್ಕಾರ ಹೇಳುತ್ತೆ. ಆದರೆ, ಅದೇ ಮುಸ್ಲಿಮ ಗುತ್ತಿಗೆದಾರರಿಂದ ಸುಲಿಗೆ ಮಾಡುತ್ತಿದೆ. ಗುತ್ತಿಗೆದಾರನೊಬ್ಬ ದಯಾಮರಣ ಕೊಡಿ ಎಂದು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾನೆ. ಇದಕ್ಕೆ ಏನು ಉತ್ತರ ಕೊಡುತ್ತೀರಿ ಸಿದ್ಧರಾಮಯ್ಯನವರೇ.. ಎಂದು ಕೇಂದ್ರ ಸಚಿವರು ಪ್ರಶ್ನೆ ಮಾಡಿದರು.
ಜೆಡಿಎಸ್ ಒಂದು ಕುಟುಂಬ. ಮನೆ ಎಂದ ಮೇಲೆ ಸಣ್ಣಪುಟ್ಟ ಸಮಸ್ಯೆ ಇದ್ದೇ ಇರುತ್ತದೆ. ಅದನ್ನು ನಾವು ಸರಿ ಮಾಡಿಕೊಳ್ಳುತ್ತೇವೆ ಎಂದ ಅವರು; ನಾವು ಸಂಘಟಿತವಾಗಿ ಕೆಲಸ ಮಾಡಬೇಕು ಹಾಗೂ ಸದಸ್ಯತ್ವ ನೋಂದಣಿಯನ್ನು ದೊಡ್ಡ ಪ್ರಮಾಣದಲ್ಲಿ ಮಾಡಬೇಕು ಎಂದು ಅವರು ಕರೆ ನೀಡಿದರು.
ಶಾಸಕ ಜಿ.ಡಿ.ಹರೀಶ್ ಗೌಡ ಮಾತನಾಡಿ ರಾಜ್ಯ ಕಾಂಗ್ರೆಸ್ ಸರ್ಕಾರ ಜನ ವಿರೋಧಿ ಕೆಲಸಗಳಲ್ಲಿಯೇ ನಿರಂತರವಾಗಿ ತೊಡಗಿದೆ. ಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂದನೆ ಮಾಡುತ್ತಿಲ್ಲ. ಬದಲಾಗಿ ಸಹಕಾರ ಸಂಸ್ಥೆಗಳಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡು ವ್ಯವಸ್ಥೆಯನ್ನು ಹಾಳು ಮಾಡುತ್ತಿದೆ. ಇಂತಹ ಸರ್ಕಾರದ ವಿರುದ್ಧ ಜನರಿಗೆ ಆಕ್ರೋಶ ಇದೆ. ನಾವು ಜನಪರವಾಗಿ ದನಿಯೆತ್ತಿ ಹೋರಾಟ ನಡೆಸಬೇಕಿದೆ ಎಂದರು. ಮಾಜಿ ಶಾಸಕ ಮಹದೇವು, ಅಶ್ವಿನ್ ಕುಮಾರ್, ವಿಧಾನ ಪರಿಷತ್ ಸದಸ್ಯರಾದ ಮಂಜೇಗೌಡ, ವಿವೇಕಾನಂದ, ಪ್ರೇಮಕುಮಾರಿ ಸೇರಿದಂತೆ ಅನೇಕರು ಮಾತನಾಡಿದರು.

