ನಂಜನಗೂಡು: ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ನಂಜನಗೂಡಿನ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದ 2024–25ನೇ ಸಾಲಿನ ಆದಾಯ–ವೆಚ್ಚದ ಲೆಕ್ಕಾಚಾರ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ದೇವಾಲಯಕ್ಕೆ ಕೋಟ್ಯಂತರ ರೂಪಾಯಿ ಆದಾಯ ಬಂದಿದ್ದರೂ, ಅದೇ ಪ್ರಮಾಣದಲ್ಲಿ ವೆಚ್ಚ ತೋರಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಲೆಕ್ಕಪರಿಶೋಧನಾ ವರದಿಯಲ್ಲಿನ ಕೆಲವು ಅಂಶಗಳು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ.

ದೇವಾಲಯದ 2024–25ನೇ ಸಾಲಿನ ಲೆಕ್ಕದ ಪ್ರಕಾರ 25 ಕೋಟಿ 86 ಲಕ್ಷ 68 ಸಾವಿರ ಆದಾಯ ಬಂದಿದ್ದು, 25 ಕೋಟಿ 68 ಲಕ್ಷ 84 ಸಾವಿರ ವೆಚ್ಚವಾಗಿದೆ. ಅಂದರೆ ಕೇವಲ ಸುಮಾರು 17.84 ಲಕ್ಷ ಉಳಿತಾಯ ತೋರಿಸಲಾಗಿದೆ.

ಆದರೆ, ಹಿಂದಿನ ವರ್ಷಗಳಲ್ಲಿ ದೇವಾಲಯದಲ್ಲಿ ಸಾಮಾನ್ಯವಾಗಿ ಸುಮಾರು 4 ಕೋಟಿಗೂ ಅಧಿಕ ಉಳಿತಾಯವಾಗುತ್ತಿತ್ತು ಎನ್ನಲಾಗಿದ್ದು, 2025–26ನೇ ಸಾಲಿನಲ್ಲೂ ಮತ್ತೆ ಸುಮಾರು 4 ಕೋಟಿ ಉಳಿತಾಯವಾಗಿದೆ ಎಂಬ ಅಂಶ ಇದೀಗ 2024–25ರ ಲೆಕ್ಕದ ಬಗ್ಗೆ ಮತ್ತಷ್ಟು ಅನುಮಾನ ಮೂಡಿಸಿದೆ.

ಪ್ರಸಾದಕ್ಕೆ 73 ಲಕ್ಷ ಖರ್ಚು?

2024–25ನೇ ಸಾಲಿನಲ್ಲಿ ದಿನಕ್ಕೆ ಮಧ್ಯಾಹ್ನದ ವೇಳೆ ಮಾತ್ರ ಪ್ರಸಾದ ವಿತರಣೆ ನಡೆಯುತ್ತಿತ್ತು ಎನ್ನಲಾಗಿದ್ದರೂ, ದಿನಸಿ ಮತ್ತು ಪ್ರಸಾದಕ್ಕೆ ಸುಮಾರು 73.14 ಲಕ್ಷ ವೆಚ್ಚ ಮಾಡಿರುವುದಾಗಿ ಲೆಕ್ಕದಲ್ಲಿ ತೋರಿಸಲಾಗಿದೆ ಎಂದು ಆರೋಪಿಸಲಾಗಿದೆ.

ಇದಕ್ಕೆ ವಿರುದ್ಧವಾಗಿ, 2025–26ನೇ ಸಾಲಿನಲ್ಲಿ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ—ತ್ರಿಕಾಲ ಪ್ರಸಾದ ವಿತರಣೆ ನಡೆದಿದ್ದರೂ, ದಿನಸಿ ಖರೀದಿಗೆ ಸುಮಾರು 46 ಲಕ್ಷ ವೆಚ್ಚವಾಗಿದೆ ಎನ್ನಲಾಗಿದೆ. ಇದರಿಂದ ಹಿಂದಿನ ಸಾಲಿನ ಸುಮಾರು 27 ಲಕ್ಷದಷ್ಟು ವೆಚ್ಚದ ವ್ಯತ್ಯಾಸದ ಬಗ್ಗೆ ಪರಿಶೀಲನೆ ಅಗತ್ಯ ಎಂಬ ಪ್ರಶ್ನೆ ಎದುರಾಗಿದೆ.

ಭಕ್ತರ ಕೊಡುಗೆ ಇದ್ದರೂ ಹಾಲು–ಮೊಸರಿಗೆ ಖರ್ಚು?

ದೇವಾಲಯಕ್ಕೆ ಭಕ್ತರು ಹಾಲು ಮತ್ತು ಮೊಸರು ರೂಪದಲ್ಲಿ ಕೊಡುಗೆ ನೀಡುತ್ತಿದ್ದರೂ, 3.18 ಲಕ್ಷ ಮೌಲ್ಯದ ಹಾಲು–ಮೊಸರು ಖರೀದಿ ಮಾಡಿರುವುದಾಗಿ ಲೆಕ್ಕದಲ್ಲಿ ತೋರಿಸಿರುವುದಾಗಿ ಆರೋಪಿಸಲಾಗಿದೆ.
ಇದಲ್ಲದೆ, ಬಾಳೆಹಣ್ಣು ಖರೀದಿ – 6.55 ಲಕ್ಷ ರೂ. ಲಾಡು ಖರೀದಿ – 3.50 ಕೋಟಿ ರೂ. ಹುಣ್ಣಿಮೆ ಹಾಗೂ ವಿಶೇಷ ದಿನಗಳ ಶಾಮಿಯಾನ – 17.84 ಲಕ್ಷ ರೂ. ಪಾರ್ಕಿಂಗ್ ಅಭಿವೃದ್ಧಿ – 37.88 ಲಕ್ಷ ರೂ. ಸಿಸಿ ಕ್ಯಾಮೆರಾ ದುರಸ್ತಿ – 29.89 ಲಕ್ಷ ರೂ. ದೇವಾಲಯ ದುರಸ್ತಿ ಕಾಮಗಾರಿ – 24 ಲಕ್ಷ ರೂ. ಹೀಗೆ ಹಲವು ವಿಭಾಗಗಳಲ್ಲಿ ಮಾಡಿರುವ ವೆಚ್ಚಗಳ ಬಗ್ಗೆಯೂ ಸಮಗ್ರ ಪರಿಶೀಲನೆ ನಡೆಸಬೇಕೆಂಬ ಒತ್ತಾಯ ಕೇಳಿಬಂದಿದೆ.

ಅಭಿವೃದ್ಧಿ ಕಾರ್ಯವೇ ಇಲ್ಲದ ಕಳಲೆ ದೇವಾಲಯಕ್ಕೆ 18 ಲಕ್ಷ?
ಇದಕ್ಕಿಂತಲೂ ಗಂಭೀರವಾಗಿ, ನಂಜನಗೂಡು ತಾಲ್ಲೂಕಿನ ಕಳಲೆ ದೇವಸ್ಥಾನದಲ್ಲಿ ಯಾವುದೇ ಪ್ರಮುಖ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎನ್ನಲಾಗುತ್ತಿದ್ದರೂ, ಒಂದೇ ವರ್ಷದಲ್ಲಿ 14 ಲಕ್ಷ ಕಾಮಗಾರಿ ವೆಚ್ಚ ಹಾಗೂ 4 ಲಕ್ಷ ಜಾತ್ರೆ ವೆಚ್ಚ ತೋರಿಸಿರುವುದರ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ.

4–5 ಕೋಟಿ ವ್ಯತ್ಯಾಸ ಎಲ್ಲಿಗೆ ಹೋಯಿತು?

2025–26ನೇ ಸಾಲಿನಲ್ಲಿ ಮತ್ತೆ ಸುಮಾರು 4 ಕೋಟಿ ಉಳಿತಾಯವಾಗಿರುವ ಹಿನ್ನೆಲೆಯಲ್ಲಿ, 2024–25ನೇ ಸಾಲಿನಲ್ಲಿ ತೋರಿಸಿರುವ ಆದಾಯ–ವೆಚ್ಚದ ಲೆಕ್ಕವನ್ನು ಮರುಪರಿಶೀಲಿಸಬೇಕಾಗಿದೆ ಎಂಬ ಒತ್ತಾಯ ಹೆಚ್ಚಾಗಿದೆ. ಮೇಲ್ನೋಟಕ್ಕೆ 4ರಿಂದ 5 ಕೋಟಿಗೂ ಅಧಿಕ ಮೊತ್ತದ ಹಣದ ಬಳಕೆ ಕುರಿತು ಅನುಮಾನಗಳು ವ್ಯಕ್ತವಾಗಿದ್ದು, ಈ ಹಣದ ನೈಜ ವೆಚ್ಚ, ಕಾಮಗಾರಿಗಳ ಅನುಷ್ಠಾನ, ಖರೀದಿ ಪ್ರಕ್ರಿಯೆ ಹಾಗೂ ಬಿಲ್‌ಗಳ ಸತ್ಯಾಸತ್ಯತೆಗಳನ್ನು ಪರಿಶೀಲಿಸಿದ ನಂತರವೇ ವಾಸ್ತವಾಂಶ ಹೊರಬರಬೇಕಿದೆ.

-ಸಿ.ಎಂ ಸುಗಂಧರಾಜು ನ್ಯೂಸ್ ಕರ್ನಾಟಕ ಮೈಸೂರು.