ನಂಜನಗೂಡು: ಸುಪ್ರೀಂ ಕೋರ್ಟ್ ಎರಡು ಮತ್ತು ನಾಲ್ಕನೇ ಶನಿವಾರದ ರಜೆಯನ್ನು ರದ್ದುಗೊಳಿಸಿ ಸರ್ಕಾರಿ ಕಛೇರಿಗಳನ್ನು ತೆರೆಯಬೇಕು ಎಂದು ಆದೇಶ ಮಾಡಿದೆ. ಆದರೆ, ರಾಜ್ಯ ಸರ್ಕಾರ ಇದನ್ನು ಪಾಲಿಸದೆ ನಿರ್ಲಕ್ಷ್ಯ ವಹಿಸಿದೆ ರಾಜ್ಯ ಸರ್ಕಾರ ನಿದ್ರೆ ಮಾಡ್ತಾ ಇದೀಯಾ? ಎಂದು ಜನ ಸಂಗ್ರಾಮ ಪರಿಷತ್ ರಾಜ್ಯ ಗೌರವಾಧ್ಯಕ್ಷ ನಗರ್ಲೆ ಎಂ.ವಿಜಯಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ನಂಜನಗೂಡು ಪಟ್ಟಣದಲ್ಲಿ ಮಾತನಾಡಿದ ಅವರು, ಎರಡು ಮತ್ತು ನಾಲ್ಕನೇ ಶನಿವಾರ ರಜೆಯನ್ನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಇದನ್ನು ಕೇಂದ್ರ ಸರ್ಕಾರವು ಅನುಷ್ಠಾನ ಮಾಡಿ ಜಾರಿಗೆ ತಂದಿದೆ. ಇದರಿಂದ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಸರ್ಕಾರಿ ಇಲಾಖೆಯಗಳ ಕಛೇರಿಗಳು ತೆರೆದು ಕಾರ್ಯನಿರ್ವಹಿಸುತ್ತಿವೆ. ಆದರೆ, ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಕಛೇರಿಗಳು ಕಾರ್ಯನಿರ್ವಹಿಸದೆ ರಜೆಯನ್ನು ಮುಂದುವರಿಸಿವೆ.
ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ಆದೇಶವನ್ನು ಯಾಕೇ ಪಾಲಿಸುತ್ತಿಲ್ಲ? ಶನಿವಾರವು ಅಧಿಕಾರಿಗಳು ಕಛೇರಿಗೆ ಬಂದರೆ ಜನರ ಸಮಸ್ಯೆಗಳನ್ನು ಬಗೆಹರಿಸಬಹುದು. ಅಧಿಕಾರಿಗಳು ಸಭೆ ಸಮಾರಂಭಗಳಲ್ಲಿ ಮುಳಗಿ ಹೋಗಿದ್ದಾರೆ. ಅತಿ ಹೆಚ್ಚಾಗಿ ಮೀಟಿಂಗ್ ಗಳಲ್ಲಿ ಫುಲ್ ಬ್ಯುಸಿ ಆಗಿದ್ದಾರೆ. ಸಾರ್ವಜನಿಕರ ಕೆಲಸ ಕಾರ್ಯಗಳು ಆಗುತ್ತಿಲ್ಲ. ತಿಂಗಳಲ್ಲಿ ನಾಲ್ಕು ಭಾನುವಾರ ರಜೆ ಇದೆ, ರಾಷ್ಟ್ರೀಯ ಹಬ್ಬಗಳು ಮತ್ತು ಸ್ಥಳೀಯ ರಜೆಗಳು ಸಿಗಲಿವೆ. ಇದರ ನಡುವೆಯೂ ಎರಡು ಶನಿವಾರವೂ ರಜೆಯಾದರೆ ಇನ್ನೂ ಅಧಿಕಾರಿಗಳು ಹೇಗೆ ಕೆಲಸ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ಸಾರ್ವಜನಿಕರು ಹೆಚ್ಚಾಗಿ ಕಂದಾಯ ಇಲಾಖೆ ಮತ್ತು ಪಂಚಾಯತ್ ರಾಜ್ ಇಲಾಖೆಗಳಿಗೆ ಸಂಬಂಧಪಟ್ಟಂತೆ ಕಛೇರಿಗಳಿಗೆ ತೆರಳುತ್ತಾರೆ. ಹಾಗಾಗಿ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಕಂದಾಯ ಇಲಾಖೆ ಸಚಿವರು ಗಮನ ಹರಿಸಬೇಕು. ರಾಜ್ಯ ಸರ್ಕಾರ ಈ ಕೂಡಲೇ ಸುಪ್ರೀಂ ಕೋರ್ಟ್ ಆದೇಶವನ್ನು ಜಾರಿ ಮಾಡಿ, ರಜೆ ನೀಡಿರುವ ಶನಿವಾರಗಳನ್ನು ರದ್ದುಪಡಿಸಿ, ಕಛೇರಿಗಳನ್ನು ಕಾರ್ಯನಿರ್ವಹಿಸುವಂತೆ ಆದೇಶ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

